

ಪಟ್ನಾ: ಸ್ಮಾರ್ಟ್ಫೋನ್ ಯುಗದಲ್ಲಿ ಯುವ ಪೀಳಿಗೆ ಸಾಮಾಜಿಕ ಜಾಲತಾಣದ ಗೀಳಿಗೆ ಹೆಚ್ಚು ಬಲಿಯಾಗುತ್ತಿದ್ದು, ವೈರಲ್ ಹಾಗೂ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಭರದಲ್ಲಿ ಒಂದಿಲ್ಲೊಂದು ಹುಚ್ಚು ಸಾಹಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ. ಇದೀಗ ಯೂಟ್ಯೂಬರ್ (Youtuber) ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಲು ಹೋಗಿ ಪೊಲೀಸರ ಅತಿಥಿಯಾಗಿದ್ದು, ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದ ಅನುಗ್ರಹ ನಾರಾಯಣ ರಸ್ತೆ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಯೂಟ್ಯೂಬರ್ (Youtuber) ಒಬ್ಬನು ತನ್ನ ಪೇಜ್ನ ವೀವ್ಸ್ ಹಾಗೂ ಫಾಲೋವರ್ಸ್ಅನ್ನು ಹೆಚ್ಚಿಸಿಕೊಳ್ಳಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಈ ವಿಡಿಯೋವನ್ನು ತನ್ನ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಫ್ಲಾಟ್ಫಾರ್ಮ್ ಪಕ್ಕ ನಿಧಾನವಾಗಿ ಚಲಿಸುತ್ತಿರುವ ರೈಲಿನ ಬಳಿ ಹೋಗುವ ಯುವಕ ರಿತೇಶ್ ಕುಮಾರ್ ಕಿಟಕಿ ಬಳಿ ಕುಳಿತಿರುವ ಪ್ರಯಾಣಿಕರೊಬ್ಬರಿಗೆ ಕಪಾಳಕ್ಕೆ ಹೊಡೆದು ಬಳಿಕ ಅವರ ವಾರ್ನಿಂಗ್ ಕೊಡುವ ರೀತಿಯಲ್ಲಿ ಪೋಸ್ ಕೊಟ್ಟು ಏನು ಆಗಿಲ್ಲವೆಂಬಂತೆ ನಡೆದುಕೊಂಡು ಹೋಗಿದ್ದಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಮ ಕೈಗೊಂಡ ರೈಲ್ವೆ ಪೊಲೀಸರು ರಿತೇಶ್ ಕುಮಾರ್ನನ್ನು ಬಂಧಿಸಿದ್ದು, ಬಳಿಕ ಆತ ಕ್ಷಮೆಯಾಚಿಸುತ್ತಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ವೃತ್ತಿಯಲ್ಲಿ ನಾನೊಬ್ಬ ಯೂಟ್ಯಬರ್ ಆಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತೇನೆ. ಈಚೆಗೆ ನಾನು ನಾರಾಯಣ ಅನುಗ್ರಹ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದಾಗ ಅಲ್ಲಿ ಪ್ರಯಾಣಿಕರೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದೆ. ಇದು ನನ್ನ ಕಡೆಯಿಂದ ಆಗಿರುವ ತಪ್ಪು ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಪೊಲೀಸರು ರಿಲೀಸ್ ಮಾಡಿರುವ ವಿಡಿಯೋದಲ್ಲಿ ಹೇಳಿರುವುದನ್ನು ನೋಡಬಹುದಾಗಿದೆ.