ಮಳೆಯಿಂದಾಗಿ ಅಫ್ಘನ್​-ಆಸೀಸ್ Champions Trophy ಪಂದ್ಯ ರದ್ದು; ಪಾಕ್ ಮೈದಾನಗಳ ಹೀನಾಯ ಸ್ಥಿತಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು

Gadaffi Stadium
Published on

ಲಾಹೋರ್: ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯ ಮಳೆಯಿಂದಾಗಿ ಸಂಪೂರ್ಣವಾಗಿ ರದ್ದುಗೊಂಡಿದ್ದು, ಉಭಯ ತಂಡಗಳಿಗು ತಲಾ ಒಂದು ಅಂಕವನ್ನು ಹಂಚಲಾಗಿದೆ. ಬಿ ಗುಂಪಿನ ಮೊದಲ ತಂಡವಾಗಿ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿದೆ.

ಅಫ್ಘಾನಿಸ್ತಾನ ನೀಡಿದ್ದ 274 ಗುರಿಯನ್ನು ಆಸ್ಟ್ರೇಲಿಯಾ ತಂಡವು ಬೆನ್ನತ್ತಿದ್ದ ಸಮಯದಲ್ಲಿ ಮಳೆ ಬಂದು ಸುಮಾರು 30 ನಿಮಿಷಗಳ ಕಾಲ ಆಟ ರದ್ದುಗೊಂಡಿತು. ಇದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಪಂದ್ಯ ಸ್ಥಗಿತಗೊಂಡಿತು. ಕೊನೆಗೆ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಪಂದ್ಯ ಅರ್ಧಕ್ಕೆ ಮೊಟಕುಗೊಂಡ ಬಳಿಕ ಮೈದಾನದ ಕಳಪೆ ಒಳಚರಂಡಿ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.

ಮಳೆಯಿಂದಾಗಿ ಮೈದಾನದಲ್ಲಿ ತುಂಬಿದ್ದ ನೀರನ್ನು ಹೊರಹಾಕಲು ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿದರು. ಯಾವುದೇ ಪ್ರಯತ್ನಗಳು ಸಫಲವಾಗಲಿಲ್ಲ. ಕೊನೆಗೆ ಆಟವನ್ನು ಸುರಕ್ಷಿತವಾಗಿ ಪುನರಾರಂಭಿಸುವ ಬಗ್ಗೆ ಭರವಸೆ ನೀಡುವಲ್ಲಿ ವಿಫಲರಾದರು. ಹೀಗಾಗಿ ಪಂದ್ಯ ಅರ್ಧಕ್ಕೆ ಸ್ಥಗಿತಗೊಂಡಿತು. ಮೈದಾನದಲ್ಲಿ ತುಂಬಿದ್ದ ನೀರನ್ನು ಹೊರಹಾಕಲು ಭದ್ರತಾ ಸಿಬ್ಬಂದಿ ಮಾಪ್‌ಗಳು ಮತ್ತು ಸ್ಪಂಜುಗಳನ್ನು ಸಹ ಬಳಸಿದರು. ಆದರೆ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿದರೂ, ಮೈದಾನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಉಳಿದಿತ್ತು. ಇದಕ್ಕೆ ಮೈದಾನದ ಒಳ ಚರಂಡಿ ವ್ಯವಸ್ಥೆಯೂ ಒಂದು ಕಾರಣವಾಗಿದೆ ಎಂದು ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.

ಭದ್ರತಾ ಸಿಬ್ಬಂದಿ ಮಾಪ್, ಸ್ಪಂಜ್‌ ಇತ್ಯಾದಿಗಳನ್ನು ಹಿಡಿದುಕೊಂಡು ನೀರು ಹೊರ ಹಾಕಲು ಪ್ರಯತ್ನಿಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳನ್ನು ಹಂಚಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಸದ್ಯ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ (Champions Trophy) ಮೂರು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದೆ. ಈ ಮೊದಲು ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net