ಗ್ಯಾರಂಟಿಗಳ ಹೊರೆ ಇಳಿಸಿಕೊಳ್ಳಲು ಲಾನುಭವಿಗಳ ಸಂಖ್ಯೆ ಕಡಿತ: ಆರ್.ಅಶೋಕ್ ಆರೋಪ

R Ashok press meet
Published on

ಬೆಂಗಳೂರು: ವಿವಿಧ ತೆರಿಗೆ, ಶುಲ್ಕಗಳನ್ನು ಹೆಚ್ಚಿಸಿದ್ದರೂ ಬೊಕ್ಕಸಕ್ಕೆ ಆದಾಯ ಕುಸಿತವಾಗಿದ್ದರೆ, ವೆಚ್ಚಗಳು ಹೆಚ್ಚಾಗಿವೆ. ಈ ಸಂಕಷ್ಟದಿಂದ ಪಾರಾಗಲು ಗ್ಯಾರಂಟಿಗಳಿಗೆ ಹೊಡೆತ ನೀಡಲು ಸರ್ಕಾರ ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಒಂದು ವರ್ಷ ಪೂರೈಸಿದ್ದನ್ನು ಪ್ರಸ್ತಾಪಿಸಿದರು. ಅದೇ ಕಾಲಕ್ಕೆ ರಾಜ್ಯ ಸರ್ಕಾರದ ನಡೆಯ ವಿರುದ್ಧ ವಾಗ್ದಾಳಿ ಮಾಡಿದರು.

ಗ್ಯಾರಂಟಿಗಳನ್ನು ರದ್ದು ಕಾಂಗ್ರೆಸ್ ಹೈಕಮಾಂಡ್ ಒಪ್ಪುವುದಿಲ್ಲ. ಈ ಕಾರಣಕ್ಕೆ ವೆಚ್ಚದ ಹೊರೆ ತಗ್ಗಿಸಲು ಲಾನುಭವಿಗಳ ಸಂಖ್ಯೆಯನ್ನು ವಾರ್ಷಿಕ 10ರಷ್ಟು ಕಡಿತ ಮಾಡುತ್ತಿದೆ. ಇದರ ಭಾಗವಾಗಿ ಒಂದು ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಿದ್ದು, ಕೆವೈಸಿ ಅಪ್‌ಡೇಟ್ ಮಾಡಿಲ್ಲವೆಂಬ ನೆಪವೊಡ್ಡಿ ಎಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ ಎಂದರು.

ರಾಜ್ಯದ ಆರ್ಥಿಕ ಸ್ಥಿತಿ ಐಸಿಯು ನಲ್ಲಿದ್ದು, ಅಭಿವೃದ್ಧಿ ಕೆಲಸ ಸ್ಥಗಿತವಾಗಿವೆ. ಶಾಸಕರಿಗೆ ಅನುದಾನ ಕೊಡಲಾಗದೆ 14 ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಒದ್ದಾಡುತ್ತಿದ್ದಾರೆ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳನ್ನು ನಾವು ವಿರೋಧಿಸುವುದಿಲ್ಲ, ರದ್ದುಪಡಿಸಲು ಒತ್ತಾಯಿಸೆವು. ಇನ್ನೂ 50 ಗ್ಯಾರಂಟಿಗಳನ್ನು ಜಾರಿಗೊಳಿಸಲಿ. ಬೊಕ್ಕಸ ಗುಡಿಸಿ ಗುಂಡಾಂತರ ಮಾಡಿ ರಾಜ್ಯದ ಜನರ ತಲೆಯ ಮೇಲೆ ಇನ್ನಷ್ಟು ಸಾಲದ ಹೊರೆ ಹಾಕಿಯೇ ಹೋಗಲಿ ಎಂದು ಕಿಡಿಕಾರಿದರು.

ಎಸ್‌ಐಟಿ ರಚನೆಗೆ ಸವಾಲು

ಅಬಕಾರಿ ಹಗರಣದ ಬಿಡುಗಡೆ ಮಾಡಲಿ ಎಂದು ನಮಗೆ ಹೇಳುವುದು, ಪುರಾವೆ ಕೊಡಿ ಎಂದು ಪ್ರಧಾನಿಗೆ ಕೇಳುವುದು ಬಿಟ್ಟು ತಾಕತ್ತಿದ್ದರೆ ಹಗರಣದ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಆರ್.ಅಶೋಕ್ ಸೆಡ್ಡು ಹೊಡೆದರು.

ಯಾರಿಗೆಷ್ಟು ಮಂಥ್ಲಿ ಮಾಮೂಲು, ಯಾವ ಅಧಿಕಾರಿ ಎಷ್ಟು ವಸೂಲಿ, ಹೊಸ ಲೈಸನ್ಸ್, ನವೀಕರಣ, ವರ್ಗಾವಣೆಗೆ ದರವೆಷ್ಟು ಎನ್ನುವ ವಿವರ ಸಹಿತ ರಾಜ್ಯಪಾಲರಿಗೆ ಆರ್‌ಟಿಐ ಕಾರ್ಯಕರ್ತ ದೂರು ಸಲ್ಲಿಸಿದ್ದಾನೆ.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಭ್ರಷ್ಟಾಚಾರದ ಬಗ್ಗೆ ಮದ್ಯ ಮಾರಾಟಗಾರರ ಸಂಘ ದೂರಿ ಮನವಿ ಸಲ್ಲಿಸಿದೆ. 20ರಂದು ಮದ್ಯದಂಗಡಿಗಳ ಬಂದ್‌ಗೂ ತೀರ್ಮಾನಿಸಿದ್ದಾರೆ.

ಒಂದು ದಿನ ಮದ್ಯವಹಿವಾಟು ನಿಲ್ಲಿಸಿದರೆ ಸರ್ಕಾರಕ್ಕೆ ಎರಡು ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಧಿವೇಶನ ಡೌಟು

ವೆಚ್ಚಗಳು ಹೆಚ್ಚಳ, ಭ್ರಷ್ಟಾಚಾರ ಹಗರಣಗಳು, ವೈಲ್ಯಗಳು, ವಿವಾದಗಳು, ಸ್ವಪಕ್ಷದ ಶಾಸಕರ ಆಕ್ರೋಶಗಳಿಂದ ಸರ್ಕಾರ ತತ್ತರಿಸಿದ್ದು, ಇದರಿಂದಾಗಿ ಡಿಸೆಂಬರ್‌ನಲ್ಲಿ ಅಧಿವೇಶನ ನಡೆಸುವುದೇ ಡೌಟು ಎಂದರು.

ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಏರ್ಪಾಟಾದರೆ ಪ್ರತಿಪಕ್ಷಗಳು ಮುಗಿಬೀಳುತ್ತವೆ ಎಂದು ಅರಿತಿದೆ. ಹುಳುಕುಗಳು ಜನರ ಮುಂದೆ ಜಗಜ್ಜಾಹೀರಾಗುತ್ತವೆ ಎಂಬ ಕಾರಣಕ್ಕೆ ಅಧಿವೇಶನ ದಿನಾಂಕ ನಿಗದಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕೆಣಕಿದರು.

ಕಾಂಗ್ರೆಸ್ ಟೂಲ್ ಕಿಟ್‌ನ ಭಾಗವಾಗಿ ನಮ್ಮ ಸರ್ಕಾರ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪ ಠುಸ್ ಎಂದಿದೆ. ಲೋಕಾಯುಕ್ತ ತನಿಖಾ ವರದಿಯಲ್ಲಿ ಶುದ್ಧ ಸುಳ್ಳು ಎಂದು ಹೇಳಿದ್ದು, ಬ್ಯಾಡ್ ಬೆಂಗಳೂರು ನಾಯಕ ಡಿ.ಕೆ.ಶಿವಕುಮಾರ್, ಸಿಎಂ ಸುಳ್ಳುರಾಮಯ್ಯ ಎಂಬುದು ಜನತೆಗೆ ಗೊತ್ತಾಗಿದೆ ಎಂದು ಆರ್.ಅಶೋಕ್ ಗೇಲಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net