

ಶಿವಮೊಗ್ಗ:ಜಿಲ್ಲೆಯಲ್ಲಿ ಮುಂಗಾರು ಮಳೆಯಬ್ಬರ ಕೊಂಚ ತಗ್ಗಿದ್ದರೂ ಗಾಳಿಯ ರಭಸ ಹೆಚ್ಚಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಮಳೆಗಿಂತಲೂ ಗಾಳಿಯಿಂದಲೇ ಅನಾಹುತಗಳು ಜಾಸ್ತಿಯಾಗುತ್ತಿವೆ. ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಮನೆ ಹಾಗೂ ದನದ ಕೊಟ್ಟಿಗೆಗಳ ಮೇಲೆ ಮರ ಬಿದ್ದ ಪರಿಣಾಮ ಅಪಾರ ಹಾನಿಯಾಗಿದೆ.
ಶಿವಮೊಗ್ಗ ತಾಲೂಕಿನ ಬನ್ನಿಕೆರೆ ಗ್ರಾಮದ ರಂಗನಾಯ್ಕ ಎಂಬುವವರ ಮನೆಯ ಒಂದು ಭಾಗದ ಗೋಡೆ ಕುಸಿದಿದೆ. ಶಿವಮೊಗ್ಗ-ಭದ್ರಾವತಿ ಚತುಷ್ಪಥ ರಸ್ತೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಹೀಗಾಗಿ ಮಾಚೇನಹಳ್ಳಿಯ ಶಿಮುಲ್ ಡೇರಿ ಬಳಿ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ವ್ಯಾಪಕ ಮಳೆಗೆ ಸರ್ವೀಸ್ ರಸ್ತೆಯ ಒಂದು ಬದಿ ಕುಸಿದಿದೆ. ಈ ರಸ್ತೆ ಸಂಪೂರ್ಣ ಕುಸಿದರೆ ಸಾರ್ವಜನಿಕರಿಗೆ ತೊಂದರೆ ನಿಶ್ಚಿತ.
ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನಲ್ಲಿ ಮಳೆಯ ಆರ್ಭಟ ಕಡಿಮೆಯಾಗಿಲ್ಲ. ಉಳಿದ ತಾಲೂಕುಗಳಲ್ಲಿ ಮಳೆ ಕೊಂಚ ತಗ್ಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕಳೆದ 15 ದಿನಗಳಲ್ಲೇ ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣ ನೀರು ಹರಿದುಬಂದಿದೆ. ಕಳೆದ ವರ್ಷಕ್ಕಿಂತಲೂ ಈಗ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ.
ಭದ್ರಾ ಸಂಪೂರ್ಣ ಭರ್ತಿಗೆ ಇನ್ನು 15 ಅಡಿ ನೀರು ಬೇಕಿದೆ. ಲಿಂಗನಮಕ್ಕಿ ಜಲಾಶಯ ಪೂರ್ಣವಾಗಿ ತುಂಬಲು ಇನ್ನು 17 ಅಡಿ ನೀರು ಹರಿದುಬರಬೇಕಿದೆ. ಮಳೆ ಸ್ವಲ್ಪ ಕಡಿಮೆಯಾಗಿದ್ದರೂ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ಸ್ವಲ್ಪ ಸಮಯ ಬಿಡುವ ನೀಡುವ ಮಳೆರಾಯ ಮತ್ತೊಮ್ಮ ಆರ್ಭಟಿಸುತ್ತಾನೆ. ಹೀಗಾಗಿ ಹಳ್ಳಗಳೆಲ್ಲ ಮೈತುಂಬಿ ಹರಿಯುತ್ತಿವೆ.