ರಷ್ಯಾದಿಂದ ಕಚ್ಚಾತೈಲ ಆಮದು ಇಳಿಸಿದ ಹೊರೆ; ಸಚಿವ ಜೈಶಂಕರ್

External affairs minister Jaishankar book released
Published on

ಬೆಂಗಳೂರು: ಯೂಕ್ರೇನ್-ರಷ್ಯಾ ನಡುವೆ ಸಂಘರ್ಷವೇರ್ಪಟ್ಟ ನಂತರ ರಷ್ಯಾದ ಕಚ್ಚಾ ತೈಲ ಖರೀದಿ, ಆಮದು ಕೂಡದು ಎಂದು ಅನೇಕ ದೇಶಗಳು ಒತ್ತಡ ಹೇರಿದ್ದವು. ಆದರೂ ಭಾರತ ಮಣಿಯದೇ ತನ್ನ ದೇಶದ ಹಿತರಕ್ಷಣೆಗಾಗಿ ರಷ್ಯಾದಿಂದ ಕಚ್ಚಾತೈಲ ಆಮದು ಮುಂದುವರಿಸಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹೇಳಿದರು.

ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ತಪ್ಪಿದೆ. ಪ್ರತಿ ಲೀಟರ್‌ಗೆ ಕನಿಷ್ಠ 30 ರೂ. ಹೆಚ್ಚಳದ ಹೊರೆಯನ್ನು ಗ್ರಾಹಕರ ತಲೆ ಮೇಲಿಂದ ಇಳಿದಿದೆ. ವ್ಯವಹಾರಿಕ ದೃಷ್ಟಿಕೋನದಿಂದ ಮಾತ್ರವಲ್ಲ, ರಾಜನೀತಿಯಲ್ಲೂ ಗಟ್ಟಿತನವಿದೆ ಎಂದರು.

ಭಾರತೀಯ ವಿಜ್ಞಾನ ಮಂದಿರದ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ಖಾಸಗಿ ಹೋಟೆಲ್‌ನಲ್ಲಿ ವಿವಿಧ ಕ್ಷೇತ್ರಗಳ ತಜ್ಞರು, ವಿದ್ವಾಂಸರು, ಗಣ್ಯರೊಂದಿಗೆ ಪ್ರತ್ಯೇಕವಾಗಿ ಸಂವಾದದಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು. ಪಾಲ್ಗೊಂಡ ಡಾ.ಎಸ್.ಜೈಶಂಕರ್ ಹೀಗೆಂದು ಉದ್ಗಾರ ತೆಗೆದರು.

ಮೋದಿ ಕಾಲದ ಭಾರತ ಬದಲಾಗಿದೆ, ತನ್ನ ದೇಶ, ದೇಶದ ನಾಗರಿಕರ ಹಿತರಕ್ಷಣೆಗೆ ಕಟಿಬದ್ಧವಾಗಿದೆ ಎನ್ನುವುದಕ್ಕೆ ಯಾವುದೇ ಒತ್ತಡ ಲೆಕ್ಕಿಸದೆ ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದೇವೆ. ಯುಕ್ರೋನ್ ಯುದ್ಧಭೂಮಿಯಿಂದ ಭಾರತೀಯರ ರಕ್ಷಣಾ ಕಾರ್ಯಾಚರಣೆ ಆಪರೇಷನ್ ಗಂಗಾ, ಸುಡಾನ್ ಸಂಕಷ್ಟದಿಂದ ಪಾರು ಮಾಡಿದ ಆಪರೇಷನ್ ಕಾವೇರಿಯನ್ನು ಜೈಶಂಕರ್ ಉದಾಹರಿಸಿದರು.

ಉನ್ನತಿಯಿಂದ ಪ್ರಗತಿ

ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ಜಾಗತಿಕವಾಗಿ ಪೂರೈಕೆ ಸರಪಳಿ ಕೇಂದ್ರಬಿಂದುವಾಗಿದೆ. ಭಾರತದ ಉನ್ನತಿಯಲ್ಲಿಯೇ ನೆರೆ-ಹೊರೆ ರಾಷ್ಟ್ರಗಳ ಏಳಿಗೆ ಹಾಗೂ ಶ್ರೇಯಸ್ಸು ಅಡಗಿದೆ ಎಂದು ಡಾ.ಎಸ್.ಜೈಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವದ ಪ್ರತಿಯೊಂದು ದೇಶಕ್ಕೂ ನೆರೆಹೊರೆಯ ರಾಷ್ಟ್ರಗಳ ಜತೆಗೆ ಒಂದಿಲ್ಲೊಂದು ಸಮಸ್ಯೆಯಿದೆ. ಈ ವಿಷಯದಲ್ಲಿ ಭಾರತವೂ ಹೊರತಾಗಿಲ್ಲ. ಹಾಗೆಯೇ ಪ್ರತಿಯೊಂದು ಸಮಸ್ಯೆಗೆ ಪರಿಹಾರವೂ ಇದ್ದೇ ಇರುತ್ತದೆ, ಆ ನಿಟ್ಟಿನತ್ತ ಭಾರತ ಸದಾ ಚಿತ್ತ ನೆಟ್ಟಿರುತ್ತದೆ.

ನೆರೆಯ ಮಾಲ್ಡೀವ್ಸ್ ಜತೆಗೆ ರಾಜತಾಂತ್ರಿಕ ಸಂಬಂಧ, ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದರು. ಮಾಲ್ಡೀವ್ಸ್ ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರತದಲ್ಲಿ ರೋಡ್ ಶೋ ನಡೆಸುವ ಆ ರಾಷ್ಟ್ರದ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತವೇ ನೆರೆಯ ರಾಷ್ಟ್ರವೆಂದು ಮಾಲ್ಡೀವ್ಸ್‌ಗೆ ನಿಧಾನವಾಗಿಯಾದರೂ ಮನವರಿಕೆಯಾಗಲಿದೆ ಎಂದರು.

ಅದೇ ರೀತಿ ಶ್ರೀಲಂಕಾ, ಭೂತಾನ್, ನೇಪಾಳ ವಿಚಾರದಲ್ಲಿ ಏನಾಯಿತು. ಈಗ ಏನೆಲ್ಲ ಬದಲಾವಣೆ, ಪರಿವರ್ತನೆಗಳಾಗಿವೆ ಎನ್ನುವುದೂ ಕಣ್ಮುಂದಿದೆ. ಶ್ರೀಲಂಕಾಕ್ಕೆ ಭಾರತವೇ ನೆಚ್ಚಿನ ಮಿತ್ರ ರಾಷ್ಟ್ರ ಮತ್ತು ಅಭಿವೃದ್ಧಿಗೆ ಆಧಾರಸ್ತಂಭ ಎನ್ನುವುದು ನೇಪಾಳಕ್ಕೂ ಅರ್ಥವಾಗಿ, ಇಂಧನ ಪೂರೈಕೆ ಕಾರ್ಯಜಾಲ ಸೃಷ್ಟಿಗೆ ಒಪ್ಪಿಕೊಂಡಿದೆ ಎಂದು ಉದಾಹರಿಸಿದರು.

ಹೃದಯವುಳ್ಳ ನೀತಿ

ಕಳೆದ ಒಂದು ದಶಕದಲ್ಲಿ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲಾಗಿದೆ. ಮೋದಿ ಭಾರತದ ರಾಜನೀತಿಯಲ್ಲಿ ದಿಟ್ಟತನವಿದೆ. ದೇಶದ ನಾಗರಿಕರ ಹಿತ, ಸಮಗ್ರತೆ ರಕ್ಷಣೆ ಜತೆಗೆ ಬೇರೆ ದೇಶಗಳನ್ನು ಅಷ್ಟೇ ಗೌರವದಿಂದ ನೋಡುವಂತಹ ಛಾತಿಯಿದೆ. ಹಾಗೆಯೇ ವಿದೇಶಾಂಗ ನೀತಿಗೆ ಹೃದಯವಿದೆ ಎಂದು ಡಾ.ಎಸ್.ಜೈಶಂಕರ್ ವಿಶ್ಲೇಷಿಸಿದರು.

ಕರೊನಾ ನಿರೋಧಕ ಲಸಿಕೆ ಬೇರೆ ರಾಷ್ಟ್ರಗಳಿಗೂ ಪೂರೈಸಲಾಯಿತು. ಈ ಪೈಕಿ ಕೆಲ ದೇಶಗಳಿಗೆ ಅನಿವಾರ್ಯತೆ, ಲ್ಯಾಟಿನ್ ಅಮೆರಿಕ, ಆಫ್ರಿಕಾದಂತಹ ಕಡಿಮೆ ಹೊಂದಿದ ರಾಷ್ಟ್ರಗಳಿಗೆ ಮಾನವೀಯ ನೆಲೆ, ಮತ್ತೆ ಹಲವು ರಾಷ್ಟ್ರಗಳಿಗೆ ಸ್ನೇಹ-ಸಹಕಾರ ಸಂಬಂಧದ ಅನುಗುಣವಾಗಿ ಪೂರೈಸಲಾಯಿತು ಎಂದು ಸಮರ್ಥಿಸಿಕೊಂಡರು.

ಅಮೆರಿಕದಲ್ಲಿ ಇತ್ತೀಚೆಗೆ ಸಂಭವಿಸಿರುವ ಅನಿವಾಸಿ ಭಾರತೀಯರು, ವಿದ್ಯಾರ್ಥಿಗಳ ಸರಣಿ ಸಾವುಗಳ ಬಗ್ಗೆ ಭಾರತಕ್ಕೆ ಕಳವಳವಿದೆ. ನೊಂದ ಕುಟುಂಬಗಳಿಗೆ ಸಂತಾಪ, ಸಹಾನುಭೂತಿಯಿದೆ. ಅದೇ ಕಾಲಕ್ಕೆ ಈ ಘಟನೆಗಳಿಗೆ ಸಹಜ, ಅಪಘಾತ, ಕೊಲೆ ಇತ್ಯಾದಿ ಆಯಾಮಗಳಿವೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಕನ್ನಡಕ್ಕೆ ಅನುವಾದಿತ ‘ಭಾರತ ಪಥ’ ವಿದೇಶಾಂಗ ಮತ್ತು ರಾಜನೀತಿಯಲ್ಲಿ ಹೊಸತನದ ಹೊಳಹುಗಳು ಕೃತಿ ಬಿಡುಗಡೆಯಾಯಿತು. ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪಕ್ಷದ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net