ಸಂಪಾದಕೀಯ: ಮಳೆ ಅನಾಹುತ ತಗ್ಗಿಸಿ

2-684c64ffdf58c
Published on

ರಾಜ್ಯದಲ್ಲಿ ನೈಋತ್ಯ ಮುಂಗಾರು ಆರಂಭವಾಗಿ 15 ದಿನಗಳಷ್ಟೇ ಕಳೆದಿದ್ದರೂ, ಇತ್ತೀಚೆಗೆ ಹಲವು ಜಿಲ್ಲೆಗಳು ಭಾರಿ ಮಳೆಯಿಂದ ತತ್ತರಿಸಿಹೋಗಿವೆ. ಮುಂದಿನ ದಿನಗಳಲ್ಲಿ ಮಳೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂಬ ಮುನ್ಸೂಚನೆ ಈಗಾಗಲೇ ದೊರೆತಿದೆ.

ಬೆಂಗಳೂರಿನಲ್ಲಿ ಆಗುವ ಮಳೆಹಾನಿಯ ವಿಷಯ ಬಹುಬೇಗ ರಾಜ್ಯ ಸರ್ಕಾರದ ಗಮನವನ್ನು ಸೆಳೆಯುತ್ತದೆ, ಪರಿಹಾರ ಕಾರ್ಯವೂ ತ್ವರಿತವಾಗಿರುತ್ತದೆ. ಆದರೆ ದೂರದ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಿಂದ ದುಪ್ಪಟ್ಟು ಹಾನಿಯಾದರೂ ಸರ್ಕಾರದ ಸ್ಪಂದನೆ ಮತ್ತು ಪರಿಹಾರ ಕಾರ್ಯ ನಿಧಾನವಾಗಿರುತ್ತದೆ. ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಕಾರವಾರ, ಗದಗ, ಯಾದಗಿರಿ, ಕಲಬುರಗಿ ಸೇರಿದಂತೆ ಹಲವು ಪ್ರದೇಶಗಳು ಮಳೆಯಿಂದಾಗಿ ಅಕ್ಷರಶಃ ನಲುಗಿಹೋಗಿವೆ. ಬುಧವಾರ ಮಳೆ ನೀರಿನ ಪ್ರವಾಹದಲ್ಲಿ ಮೂವರು ಕೊಚ್ಚಿಹೋಗಿದ್ದಾರೆ.

ಕೆಲವೆಡೆ ಆಸ್ಪತ್ರೆಗಳಿಗೆ ನೀರು ನುಗ್ಗಿ ರೋಗಿಗಳು ಪರದಾಡಿದ್ದಾರೆ. ಶಾಲೆಗಳಿಂದ ಮಕ್ಕಳು ಹೊರಬರಲಾಗದೆ ನಾಲ್ಕಾರು ತಾಸು ಒಳಗೇ ಬಂದಿಗಳಾದ ವರದಿಗಳಿವೆ. 280ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, 35 ಮನೆಗಳು ಕುಸಿದಿವೆ. 1200 ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಈ ಅನಾಹುತಕ್ಕೆ ಹಳ್ಳತೊರೆಗಳು ಉಕ್ಕಿಹರಿದಿದ್ದೇ ಕಾರಣ ಎಂಬುದು ಪ್ರಾಥಮಿಕ ಅಂದಾಜು. ಸಣ್ಣಪುಟ್ಟ ಹಳ್ಳಗಳೂ ಜನಜೀವನವನ್ನು ಅಸ್ತವ್ಯಸ್ತ ಗೊಳಿಸುತ್ತವೆ ಎಂದರೆ? ಮೂಲಸೌಕರ್ಯಗಳ ಅಭಾವ ಮತ್ತು ಮುಂಜಾಗರೂಕತೆ ಕೊರತೆ ಇದಕ್ಕೆ ಕಾರಣ. ಯಾವ್ಯಾವ ಸ್ಥಳಗಳಲ್ಲಿ ಪ್ರತಿ ವರ್ಷ ಪ್ರವಾಹ ಉಂಟಾಗುತ್ತದೆ ಎಂಬುದು ಮೊದಲೇ ಗೊತ್ತಿರುತ್ತದೆ. ಅಲ್ಲಿಯೇ ಪ್ರತಿ ಮಳೆಗಾಲದಲ್ಲೂ ಅನಾಹುತಗಳು ಸಂಭವಿಸುತ್ತಿರುತ್ತವೆ. ಆದರೂ ಅಪಾಯಗಳನ್ನು ತಪ್ಪಿಸಲು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿರುವುದಿಲ್ಲ.

ಮಳೆ ಆರಂಭವಾಗುವುದಕ್ಕೆ ಸಾಕಷ್ಟು ಮೊದಲೇ ಸರ್ಕಾರ, ಪ್ರವಾಹದ ಸಂಭವನೀಯ ಅಪಾಯ ಇರುವ ಸ್ಥಳಗಳಲ್ಲಿ ಮಾಡಬೇಕಾದ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಪ್ರವಾಹ ಬಂದ ಬಳಿಕ ತೆರವು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವುದಕ್ಕಿಂತ ಮೊದಲೇ ಜನರಿಗೆ ಎಚ್ಚರಿಕೆ ನೀಡುವುದು, ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳುವಂತಹ ವ್ಯವಸ್ಥೆ ಜಾರಿಗೆ ಬರಬೇಕು. ಪರಿಹಾರ ಮತ್ತು ಪುನರ್ವಸತಿ ಕೇಂದ್ರಗಳನ್ನು ಮೊದಲೇ ಸ್ಥಾಪಿಸಿ, ಆಹಾರ, ಕುಡಿಯುವ ನೀರು, ಬಟ್ಟೆ, ಶೌಚಾಲಯ ಮುಂತಾದ ಮೂಲಸೌಕರ್ಯಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು.

ತಗ್ಗುಪ್ರದೇಶದ ಜನರನ್ನು ಸಾಕಷ್ಟು ಮೊದಲೇ ತೆರವುಗೊಳಿಸಿದರೆ, ಕೊನೇ ಕ್ಷಣದ ಧಾವಂತಗಳು ತಪ್ಪುತ್ತವೆ. ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಭಾರಿ ಮಳೆ ಬಂದ ಸಂದರ್ಭಗಳಲ್ಲಿನ ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ದೀರ್ಘ ಕಾಲದ ವಿದ್ಯುತ್ ಕಡಿತ. ವಿದ್ಯುತ್ ಪೂರೈಕೆಯನ್ನು ಮರುಸ್ಥಾಪನೆ ಮಾಡುವ ವಿಷಯದಲ್ಲಿ ಇಲಾಖೆಯ ಈಗಿನ ವೇಗ ಸಾಲದು. ಇವೆಲ್ಲವೂ ಆಯಾ ಸಮಯಕ್ಕೆ ಮಾಡುವ ಕಾರ್ಯಗಳು. ಇವನ್ನು ಹೊರತುಪಡಿಸಿ ದೀರ್ಘಕಾಲೀನ ಪರಿಹಾರೋಪಾಯಗಳ ಬಗ್ಗೆಯೂ ಸರ್ಕಾರ ಯೋಚಿಸುವುದು ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net