

ಕರೊನಾ ನಂತರದ ದಿನಗಳಲ್ಲಿ ಉದ್ಯೋಗಸೃಷ್ಟಿ, ಜನರ ಆರ್ಥಿಕ ಸ್ಥಿತಿ ಹಿಮ್ಮುಖ ಚಲನೆ ಪಡೆದುಕೊಂಡಿದೆ. ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ಬದುಕನ್ನು ಹೈರಾಣಾಗಿಸಿದೆ. ಮತ್ತೊಂದೆಡೆ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಮುಖಿಯಾಗಿದ್ದು, ಭಾನುವಾರ ಲೀಟರಿಗೆ ತಲಾ 35 ಪೈಸೆ ಹೆಚ್ಚಾಗಿದೆ. ಇದರೊಂದಿಗೆ ವಿಮಾನದ ಇಂಧನ ದರಕ್ಕಿಂತಲೂ ಪೆಟ್ರೋಲ್, ಡೀಸೆಲ್ ಶೇಕಡ 30ರಷ್ಟು ದುಬಾರಿ ಎನಿಸಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬಳಿಕ ಭಾನುವಾರ ಡೀಸೆಲ್ ದರ ಕೂಡ 100 ರೂಪಾಯಿಯ ಗಡಿ ದಾಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲೇನೂ ಇಲ್ಲ. ಆದರೂ, ಈ ಬೆಲೆಯೇರಿಕೆ ಏಕೆ ಎಂಬ ಪ್ರಶ್ನೆ ಶ್ರೀಸಾಮಾನ್ಯರದ್ದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯಿಂದ ಹಲವು ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಲು ಇದು ಪ್ರಮುಖ ಕಾರಣ. ಪೆಟ್ರೋಲ್, ಡೀಸೆಲ್ನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಕಾಲ ಪಕ್ವವಾಗಿಲ್ಲ ಎಂದು ಸರ್ಕಾರ ಕೈಚೆಲ್ಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾಗುವ ಸುಂಕ ರಾಜ್ಯ ಸರ್ಕಾರಗಳಿಗೆ ಆದಾಯದ ಪ್ರಮುಖ ಮೂಲ ಎಂಬುದೇನೋ ನಿಜ. ಆದರೆ, ಈಗಿನ ಸನ್ನಿವೇಶ, ಕರೊನಾ ನಂತರ ಉದ್ಭವವಾಗಿರುವ ಸಂಕಷ್ಟವನ್ನು ಆಳುವವರು ಗಮನಿಸಬೇಕು. ತೆರಿಗೆ ಭಾರ ಇಳಿಸುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಭೆ ನಡೆಸಿ, ಒಮ್ಮತದ ತೀರ್ವನಕ್ಕೆ ಬರುವುದು ಕಷ್ಟವೇನಲ್ಲ. ಆದರೆ, ಈ ವಿಷಯದಲ್ಲೂ ರಾಜ್ಯಗಳು ಕೇಂದ್ರದತ್ತ, ಕೇಂದ್ರ ರಾಜ್ಯಗಳತ್ತ ಬೊಟ್ಟು ತೋರಿಸುತ್ತಿರುವುದು ಸರಿಯಲ್ಲ. ಕಳೆದ ಕೆಲ ತಿಂಗಳಲ್ಲೇ, ಅಂದರೆ ಸೆಪ್ಟೆಂಬರ್ 28ರಿಂದೀಚೆಗೆ ಪೆಟ್ರೋಲ್ ದರ ಲೀಟರಿಗೆ 4.65 ರೂಪಾಯಿ, ಸೆಪ್ಟೆಂಬರ್ 24 ರಿಂದೀಚೆಗೆ ಡೀಸೆಲ್ ದರ ಲೀಟರಿಗೆ 5.95 ರೂಪಾಯಿ ಹೆಚ್ಚಳವಾಗಿದೆ. ಈ ಹೊಡೆತದಿಂದ ಜನಸಾಮಾನ್ಯರ ತಿಂಗಳ ಬಜೆಟ್ ತಲೆಕೆಳಗಾಗಿದೆ. ಪೆಟ್ರೋಲ್ ಮೂಲ ದರ ಲೀಟರ್ಗೆ 66 ರೂ. ಹಾಗೂ ಡೀಸೆಲ್ಗೆ 55 ರೂ. ಆಗಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಸೇರಿ ಈಗ 100 ರೂ. ಗಡಿ ದಾಟಿದೆ.
‘ರಾಜ್ಯದ ಆರ್ಥಿಕತೆ ಸುಧಾರಣೆಯಾದಲ್ಲಿ ತೈಲ ಬೆಲೆ ಇಳಿಕೆ ಕುರಿತು (ಉಪಚುನಾವಣೆ ನಂತರ) ಚಿಂತನೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ, ದಿನನಿತ್ಯದ ವೆಚ್ಚಗಳು ಇದೇ ರೀತಿ ಏರಿಕೆಯಾಗುತ್ತ ಸಾಗಿದರೆ, ಜನಸಾಮಾನ್ಯರ ಬದುಕು ಮತ್ತಷ್ಟು ದಯನೀಯವಾಗುತ್ತದೆ. ಕರೊನಾ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಿರುವುದು ಹೌದಾದರೂ, ಜನರ ಹಿತವನ್ನೇ ಬದಿಗಿರಿಸಿ ಬೊಕ್ಕಸ ತುಂಬಿಸುವುದು ಸಂವೇದನೆಯ ನಡೆಯಲ್ಲ. ತೈಲ ಬೆಲೆ ಏರಿಕೆ ಬಗ್ಗೆ ಜನಸಾಮಾನ್ಯರಲ್ಲಿ ಭಾರಿ ಅಸಮಾಧಾನವಿದೆ. ಈ ವಾಸ್ತವವನ್ನು ಮನಗಂಡು ಕೇಂದ್ರ ಸರ್ಕಾರ ತೆರಿಗೆ ಭಾರವನ್ನು ಕೊಂಚವಾದರೂ ಇಳಿಸುವ ಮೂಲಕ, ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣಕ್ಕೆ ತರಬೇಕು.