ಗ್ರೀನ್​ ಕಾರ್ಡ್​ಗೆ ರೆಡ್​ ಸಿಗ್ನಲ್​; ಗೋಲ್ಡ್​ ಕಾರ್ಡ್​ಗೆ ನೀರಸ ಪ್ರತಿಕ್ರಿಯೆ

photo (2)
Published on

ಈ ವರ್ಷದ ಜನವರಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಠಿಣ ವಲಸೆ ನೀತಿ ರೂಪಿಸುತ್ತಿರುವ ಮತ್ತು ಇದಕ್ಕಾಗಿ ವಲಸೆ ನೀತಿಯಲ್ಲಿ ಮತ್ತೆ ಮತ್ತೆ ಮಾರ್ಪಾಡು ಮಾಡುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಗ್ರೀನ್ ಕಾರ್ಡ್ ವಿಷಯದಲ್ಲಿ ಭಾರತೀಯರ ಮೇಲೆ ಕೆಂಗಣ್ಣು ಬೀರಿದ್ದಾರೆ. ಇದರಿಂದ ಅಲ್ಲಿ ನೆಲೆಸಿರುವ ಭಾರತೀಯರಲ್ಲಿ ಹೊಸ ಭೀತಿ ಶುರುವಾಗಿದ್ದು, ಈ ಕುರಿತಾದ ವಿವರ ಇಲ್ಲಿದೆ.

ಅಮೆರಿಕದಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ಅನಿವಾಸಿ ಭಾರತೀಯರು ಸೇರಿದಂತೆ ವಿದೇಶಿ ಪಾಲಕರು ಮಕ್ಕಳ ಶಾಶ್ವತ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಹೊಸ ನಿಯಮ ನಿರಾಸೆ ಉಂಟುಮಾಡಲಿದೆ. ಪಾಲಕರು ಅರ್ಜಿ ಸಲ್ಲಿಸುವಾಗ ಮಕ್ಕಳ ವಯಸ್ಸು 21 ವರ್ಷ ದಾಟಿದ್ದರೆ ಅವರು ಗ್ರೀನ್ ಕಾರ್ಡ್​ಗೆ ಅನರ್ಹರಾಗಲಿದ್ದಾರೆ. ಇದರಿಂದ ಎಚ್1ಬಿ ಮತ್ತು ಇತರ ವಲಸೆಯೇತರ ವೀಸಾಗಳನ್ನು ಹೊಂದಿರುವ ಲಕ್ಷಾಂತರ ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಆಘಾತ ನೀಡಿದೆ. ಅಮೆರಿಕದ ಶಾಶ್ವತ ಪೌರತ್ವಕ್ಕಾಗಿ ಗ್ರೀನ್ ಕಾರ್ಡ್ ಪಡೆಯುವ ನಿಟ್ಟಿನಲ್ಲಿ ಮಕ್ಕಳ ವಯಸ್ಸನ್ನು ಲೆಕ್ಕ ಹಾಕಲು ಅಮೆರಿಕದ ಪೌರತ್ವ ಹಾಗೂ ವಲಸೆ ನೀತಿ ಸೇವೆಗಳ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಏನಿದು ಹೊಸ ನೀತಿ?: ಮಕ್ಕಳ ಸ್ಥಿತಿ ಸಂರಕ್ಷಣಾ ಕಾಯಿದೆ (ಸಿಎಸ್​ಪಿಎ) ಅನುಸಾರವೇ ಮಕ್ಕಳ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ. ಪಾಲಕರು ಅರ್ಜಿ ಸಲ್ಲಿಸುವಾಗ ಮಕ್ಕಳಿಗೆ 21 ವರ್ಷ ದಾಟಿದ್ದರೆ ಅವರು ಗ್ರೀನ್ ಕಾರ್ಡ್ ಪಡೆಯಲು ಅನರ್ಹರಾಗಲಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿ, ಗ್ರೀನ್ ಕಾರ್ಡ್​ಗಾಗಿ ಕಾಯುತ್ತಿರುವವರಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಆದರೆ, ಆಗಸ್ಟ್ 15ರಿಂದ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಈ ನಿಯಮ ಕಡ್ಡಾಯವಾಗಿ ಅನ್ವಯವಾಗಲಿದೆ. ಬೈಡೆನ್ ಆಡಳಿತವು 2023ರಲ್ಲಿ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಪಾಲಕರು ಗ್ರೀನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಮಗುವಿನ ವಯಸ್ಸನ್ನು ಅಂತಿಮಗೊಳಿಸಿತ್ತು. ಕಾರ್ಡ್ ವಿತರಣೆ ಮಾಡುವ ತನಕ ಅದೇ ವಯೋಮಾನ ಚಾಲ್ತಿಯಲ್ಲಿತ್ತು. ಹೊಸ ನಿಯಮದ ಪ್ರಕಾರ 21 ವರ್ಷ ಮೇಲ್ಪಟ್ಟವರು ಗ್ರೀನ್ ಕಾರ್ಡ್ ಪಡೆಯಲು ಅನರ್ಹರು. ಇದರಿಂದಾಗಿ, ಒಂದೇ ಕುಟುಂಬದ ಇಬ್ಬರು ಮಕ್ಕಳಲ್ಲಿ ಒಬ್ಬರು ಕಾನೂನಿನ ಪ್ರಕಾರ ಅಲ್ಲಿ ನೆಲೆಸಲು ಸಾಧ್ಯವಾಗದಿದ್ದರೆ, ಅದು ಅವರ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಗ್ರೀನ್ ಕಾರ್ಡ್ ಎಂದರೆ...

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಎಂಬುದು ಪರ್ಮನೆಂಟ್ ರೆಸಿಡೆಂಟ್ ಕಾರ್ಡ್ (ಶಾಶ್ವತ ನಿವಾಸಿ ಕಾರ್ಡ್) ಎಂದೇ ಜನಪ್ರಿಯವಾಗಿದೆ. ಇದು ಅಮೆರಿಕದಲ್ಲಿ ಕಾಯಂ ನಿವಾಸಿಯಾಗಿ ಉಳಿದುಕೊಳ್ಳಲು ವಲಸಿಗರಿಗೆ ಪ್ರಮಾಣವಾಗಿ ಅಲ್ಲಿನ ಸರ್ಕಾರ ನೀಡುವ ದಾಖಲೆಯಾಗಿರುತ್ತದೆ. 1950ರಿಂದ 1964ರವರೆಗೆ ಗ್ರೀನ್ ಕಾರ್ಡ್ ಹಸಿರು ಬಣ್ಣದ್ದಾಗಿತ್ತು. ಅದಕ್ಕಾಗಿ, ಇದನ್ನು ‘ಗ್ರೀನ್ ಕಾರ್ಡ್’ ಎಂದು ಕರೆಯಲಾಯಿತು. ಆದರೆ, 1964ರ ನಂತರ ತಿಳಿ ನೀಲಿ ಬಣ್ಣಕ್ಕೆ, ಮತ್ತೆ ಕೆಲ ವರ್ಷಗಳ ನಂತರ ಗಾಢ ನೀಲಿ ಬಣ್ಣಕ್ಕೆ ಬದಲಾದರೂ, ಹೆಸರು ಮಾತ್ರ ಗ್ರೀನ್ ಕಾರ್ಡ್ ಎಂದೇ ಉಳಿದುಕೊಂಡಿದೆ. 2010ರಿಂದ ನೀಲಿ, ಗುಲಾಬಿ ಮತ್ತು ಹಳದಿ ಬಣ್ಣದಲ್ಲಿ ಈ ರೆಸಿಡೆಂಟ್ ಕಾರ್ಡ್​ನ್ನು ವಿತರಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ತಿಳಿ ಹಸಿರು, ಗಾಢ ಕೆಂಪು, ಬಿಳಿ ಮತ್ತು ನೀಲಿ ಬಣ್ಣದಲ್ಲಿ ಸಿಗುತ್ತಿದೆ.

ಪ್ರಯೋಜನಗಳು

  • ಗ್ರೀನ್ ಕಾರ್ಡ್ ಪಡೆದವರು ಅನಿಶ್ಚಿತ ಅವಧಿಯವರೆಗೂ ಅಮೆರಿಕದಲ್ಲಿ ನೆಲೆಸಬಹುದು.
  • ಯಾವುದೇ ಕಂಪನಿ ಅಥವಾ ವ್ಯಕ್ತಿಗಾಗಿ ಕಾನೂನಿನ ಪ್ರಕಾರ ಕೆಲಸ ಮಾಡಲು ಸಾಧ್ಯ.
  • ಗ್ರೀನ್ ಕಾರ್ಡ್ ಹೊಂದಿರುವವರು 3-5 ವರ್ಷಗಳ ನಂತರ ಅಮೆರಿಕದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರು.
  • ಸಾಮಾಜಿಕ ಸುರಕ್ಷೆ ಯೋಜನೆಗಳು ಮತ್ತು ಮೆಡಿಕೇರ್ (ಆರೋಗ್ಯ ವಿಮೆ) ಲಾಭ ಸಿಗುತ್ತದೆ.
  • ಅಮೆರಿಕಕ್ಕೆ ಪ್ರವೇಶ ಮತ್ತು ನಿರ್ಗಮನದ ಅನುಮತಿ (ದೀರ್ಘಾವಧಿಯವರೆಗೆ ಕಾಣೆ/ನಾಪತ್ತೆ ಆಗುವಂತಿಲ್ಲ).
  • ತಮ್ಮ ಕುಟುಂಬ ಸದಸ್ಯರು ಮತ್ತು ನಿಕಟ ಸಂಬಂಧಿಕರಿಗಾಗಿ ಗ್ರೀನ್ ಕಾರ್ಡ್​ಗೆ ಅರ್ಜಿ ಸಲ್ಲಿಸಬಹುದು.
  • ರಾಜ್ಯ ಸರ್ಕಾರಗಳಿಂದ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ನೆರವನ್ನು ಪಡೆಯಲು ಅರ್ಹರು.

ಅಮೆರಿಕ ವಲಸೆ ನೀತಿಯ ಹೊಸ ಮಾರ್ಗಸೂಚಿ ಆಗಸ್ಟ್ 15ರಿಂದ ಜಾರಿ

ಗೋಲ್ಡ್ ಕಾರ್ಡ್​ಗೆ ನೀರಸ ಪ್ರತಿಕ್ರಿಯೆ

ಅಮೆರಿಕ ಸರ್ಕಾರ ‘ಟ್ರಂಪ್ ಗೋಲ್ಡ್ ಕಾರ್ಡ್’ ಹೆಸರಿನಲ್ಲಿ ಹೊಸ ವೀಸಾ ನೀತಿ ಜಾರಿಗೆ ತಂದಿದೆಯಾದರೂ, ಅದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಕೆಂದರೆ, ವಿದೇಶಿ ನಾಗರಿಕರು ಟ್ರಂಪ್ ಗೋಲ್ಡ್ ಕಾರ್ಡ್ ಪಡೆದು ಅಮೆರಿಕದ ನಾಗರಿಕತ್ವ ಹೊಂದಬೇಕಾದರೆ 5 ಮಿಲಿಯನ್ ಡಾಲರ್ ಅಂದರೆ 44 ಕೋಟಿ ರೂಪಾಯಿ ಪಾವತಿಸಬೇಕು! 10 ಲಕ್ಷ ಜನರಿಗೆ ಈ ಗೋಲ್ಡ್ ಕಾರ್ಡ್ ಮಾರಾಟ ಮಾಡುವುದು ಸರ್ಕಾರದ ಉದ್ದೇಶ ಇದೆಯಾದರೂ, ಇಷ್ಟು ಭಾರಿ ಮೊತ್ತ ಪಾವತಿಸಿ ಯುಎಸ್ ನಾಗರಿಕತ್ವ ಪಡೆಯಲು ಯಾರೂ ಮುಂದಾಗುತ್ತಿಲ್ಲ. ಅಮೆರಿಕದ ನಾಗರಿಕತ್ವ ಪಡೆಯಲು ಇಬಿ-5 ವೀಸಾ ಕಾರ್ಯಕ್ರಮ ಸುಲಭವಾಗಿದ್ದು, ಇದರಡಿ 1 ಮಿಲಿಯನ್ ಡಾಲರ್ (8.75 ಕೋಟಿ ರೂ.) ಪಾವತಿಸಬೇಕು. ಗೋಲ್ಡ್ ಕಾರ್ಡ್ ಯೋಜನೆಯನ್ನು ಟ್ರಂಪ್ ಇಬಿ-ವೀಸಾ ಕಾರ್ಯಕ್ರಮದ ಪರಿಷ್ಕೃತ ಮತ್ತು ಸುಧಾರಿತ ರೂಪ ಎಂದು ಕರೆದಿದ್ದಾರೆ. ಇಬಿ-5 ವೀಸಾ ನೀತಿ 1990ರಿಂದಲೂ ಜಾರಿಯಲ್ಲಿದ್ದು, ಕಾಲಕಾಲಕ್ಕೆ ನಿಯಮಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಗೋಲ್ಡ್ ಕಾರ್ಡ್ ಮೂಲಕವೂ ಹೂಡಿಕೆಯನ್ನು ಆಕರ್ಷಿಸುವುದು ಟ್ರಂಪ್ ಉದ್ದೇಶವಾಗಿದೆ.

ನಿರೀಕ್ಷೆಯಲ್ಲಿ 12 ಲಕ್ಷ ಅನಿವಾಸಿ ಭಾರತೀಯರು

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಹೊಂದಿದವರ ಪೈಕಿ ಮೆಕ್ಸಿಕೋ ನಾಗರಿಕರು ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನ ಭಾರತೀಯರದ್ದು. 2022ರಲ್ಲಿ 1.27 ಲಕ್ಷ ಭಾರತೀಯರಿಗೆ ಗ್ರೀನ್ ಕಾರ್ಡ್ ದೊರೆತಿದೆ. ಆದಾಗ್ಯೂ, 12 ಲಕ್ಷಕ್ಕೂ ಅಧಿಕ ಅನಿವಾಸಿ ಭಾರತೀಯರು ಗ್ರೀನ್ ಕಾರ್ಡ್​ನ ನಿರೀಕ್ಷೆಯಲ್ಲಿ (ವೇಟಿಂಗ್ ಲಿಸ್ಟ್) ಇದ್ದಾರೆ. ಈಗಾಗಲೇ ಗ್ರೀನ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದ್ದರೆ, ಇಂತಹ ಮಕ್ಕಳಿಗೆ ಅನರ್ಹತೆ ಆತಂಕ ಕಾಡುವುದಿಲ್ಲ.

ದಶಕಗಳೇ ಬೇಕಾಗಬಹುದು

ಉದ್ಯೋಗದ ಆಧಾರದಲ್ಲಿ ಅಮೆರಿಕದಲ್ಲಿ ಕಾಯಂ ನೆಲೆಸಲು ಬಯಸುವವರ ಸಂಖ್ಯೆ 2030ರ ಹೊತ್ತಿಗೆ ದುಪ್ಪಟ್ಟುಗೊಳ್ಳುವ ಸಾಧ್ಯತೆಯಿದೆ. ಇದಕ್ಕೆ ಅಗತ್ಯವಾಗುವ ಬಹು ಮಹತ್ವದ ಗ್ರೀನ್ ಕಾರ್ಡ್ ಪಡೆಯಲು ಭಾರತೀಯರು ದಶಕಗಳ ಕಾಲ ಕಾಯಬೇಕಾಗಬಹುದು ಎಂದು ಅಮೆರಿಕ ಸಂಸತ್ತಿನ ಇತ್ತೀಚಿನ ವರದಿಯೊಂದು ಅಭಿಪ್ರಾಯಪಟ್ಟಿದೆ. ಬಹುತೇಕವಾಗಿ ಉನ್ನತ ಕೌಶಲ ಹೊಂದಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಎಚ್-1ಬಿ ಕೆಲಸದ ವೀಸಾ ಮೇಲೆ ಅಮೆರಿಕಕ್ಕೆ ಹೋಗುತ್ತಾರೆ. ಆದರೆ, ಹಾಲಿ ವಲಸೆ ನೀತಿಯಿಂದ ಹೆಚ್ಚು ತೊಂದರೆ ಅನುಭವಿಸುವವರು ಇವರೇ ಆಗಿದ್ದಾರೆ. ಏಕೆಂದರೆ ಒಂದು ದೇಶಕ್ಕೆ ಶೇಕಡ 7ರಷ್ಟು ಗ್ರೀನ್ ಕಾರ್ಡ್ ಮಂಜೂರು ಮಾಡುವ ನೀತಿ ಜಾರಿಯಲ್ಲಿದೆ. ಹೀಗಾಗಿ ಅರ್ಹ ಭಾರತೀಯರಿಗೆ ಗ್ರೀನ್ ಕಾರ್ಡ್ ದೊರೆಯಲು ಈ ನಿಯಮ ದೊಡ್ಡ ಅಡ್ಡಿಯಾಗಿದೆ.

ಪ್ರತಿ ದೇಶದ ಮೇಲೆ ಹೇರಿರುವ ಕೋಟಾ ಮಿತಿಯನ್ನು ಸಡಿಲಿಸಿದರೂ ಗ್ರೀನ್ ಕಾರ್ಡ್ ಹೊಂದಲು ಅಗತ್ಯವಾಗುವ ಕಾಲಾವಕಾಶ ಸ್ವಲ್ಪವಷ್ಟೆ ಕಡಿಮೆಯಾಗಬಹುದು ಎಂದು ಸಂಸದೀಯ ಸಂಶೋಧನಾ ಸೇವೆಯ ವರದಿ ಅಭಿಪ್ರಾಯಪಟ್ಟಿದೆ. ಅಮೆರಿಕದ ಕಾಯಂ ಪೌರತ್ವ ಪಡೆಯಲು ಅನ್ಯ ದೇಶಗಳ ನಾಗರಿಕರಿಗೆ ಗ್ರೀನ್ ಕಾರ್ಡ್ ಅವಕಾಶ ಕಲ್ಪಿಸುತ್ತದೆ. ಕಾಯುವಿಕೆ ಅವಧಿ ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದರ ನಿಯೋಗವು ಸರ್ಕಾರಕ್ಕೆ ಹಲವು ಸಂದರ್ಭಗಳಲ್ಲಿ ಮನವಿ ಮಾಡಿದ್ದರೂ, ಹೇಳಿಕೊಳ್ಳುವಂಥ ಪ್ರಯೋಜನ ಆಗಿಲ್ಲ.

ವ್ಯಾನ್ಸ್ ಬಾಂಬ್

ಗ್ರೀನ್ ಕಾರ್ಡ್​ಗಳ ಕುರಿತಾಗಿ ನಿಯಮ ಬದಲಾವಣೆ ಮತ್ತು ಗೊಂದಲ ಸೃಷ್ಟಿ ಇದೇ ಮೊದಲೇನಲ್ಲ. ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಇದೇ ವರ್ಷದ ಮಾರ್ಚ್​ನಲ್ಲಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ, ‘ಗ್ರೀನ್ ಕಾರ್ಡ್ ಹೊಂದಿರುವವರು ಶಾಶ್ವತವಾಗಿ ಅಮೆರಿಕದಲ್ಲಿ ನೆಲೆಸಲು ಸಾಧ್ಯವಿಲ್ಲ. ಗ್ರೀನ್ ಕಾರ್ಡ್ ಹೊಂದುವುದು ಎಂದರೆ ಇಡೀ ಜೀವಿತಾವಧಿ ಅಮೆರಿಕದಲ್ಲೇ ನೆಲೆಸಬಹುದು ಅಂತಲ್ಲ. ಗ್ರೀನ್ ಕಾರ್ಡ್ ಹೊಂದಿದವರನ್ನು ಯಾವಾಗ ಬೇಕಾದರೂ ಅಮೆರಿಕದಿಂದ ಹೊರಗೆ ಕಳುಹಿಸುವ ಅಧಿಕಾರ ಸರ್ಕಾರಕ್ಕೆ ಇದೆ’ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದರು. ‘ಇದು ತಾತ್ಕಾಲಿಕವಾಗಿ ನೆಲೆಸುವ ಅವಕಾಶವೇ ಹೊರತು, ಶಾಶ್ವತವಾಗಿ ಅಮೆರಿಕದಲ್ಲಿ ವಾಸಿಸುವ ಹಕ್ಕು’ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿರೋಧ ಕೂಡ ದೊಡ್ಡಪ್ರಮಾಣದಲ್ಲಿ ವ್ಯಕ್ತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net