ಅಡಕೆ ತೋಟಗಳಲ್ಲಿ ಕೆಂಪುಮೂತಿ ಹುಳುವಿನ ಬಾಧೆ

areca
ಅಡಕೆ ತೋಟಗಳಲ್ಲಿ ಕಂಡು ಬಂದಿರುವ ಕೆಂಪುಮೂತಿ ಹುಳು.
Published on

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಸೊರಬ ಮತ್ತು ಸಾಗರ ತಾಲೂಕಿನ ಕೆಲ ಅಡಕೆ ತೋಟಗಳಲ್ಲಿ ಕೆಂಪುಮೂತಿ ಹುಳುವಿನ ಬಾಧೆ ಕಂಡು ಬರುತ್ತಿದ್ದು, ರೈತರು ನಿರ್ವಹಣೆಗೆ ಹೆಚ್ಚಿನ ಕಾಳಜಿ ತೋರಬೇಕು ಎಂದು ನವುಲೆ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡಿವಪ್ಪರ್ ತಿಳಿಸಿದ್ದಾರೆ.

ನಾಲ್ಕೈದು ವರ್ಷದ ತೋಟದಲ್ಲಿ ಬಾಧೆ ಹೆಚ್ಚಿದ್ದು, ಗರಿಗಳು ಹಳದಿಯಾಗಿ ಬಾಡಿದಂತೆ ಕಾಣಿಸುತ್ತವೆ. ಕಾಂಡದ ಭಾಗದಲ್ಲಿ ರಂಧ್ರಗಳಾಗಿ ಕಂದು ಬಣ್ಣದ ರಸ ಸೋರುತ್ತದೆ. ತೀವ್ರ ಹಾನಿಗೊಳಗಾದ ಮರಗಳಲ್ಲಿ ಕಾಂಡದ ಭಾಗದಲ್ಲಿ ನಾರಿನ ಅಂಶ ಹೊರಬರುತ್ತದೆ. ಹಾನಿಗೊಳಗಾದ ಮರಗಳನ್ನು ಸೀಳಿ ನೋಡಿದಾಗ ವಿವಿಧ ಹಂತದ ಹುಳುಗಳನ್ನು ಕಾಣಬಹುದಾಗಿದೆ.

ಹುಳುವಿನ ಬಾಧೆಗೆ ತುತ್ತಾದ ಅಡಕೆ ತೋಟಗಳ ಬೆಳವಣಿಗೆ ಕುಂಠಿತವಾಗುತ್ತದೆ. ತೀವ್ರ ಹಾನಿಗೊಳಗಾದ ಮರಗಳು ಗಾಳಿ, ಮಳೆಗೆ ನೆಲಕ್ಕುರುಳುತ್ತವೆ. ಹೀಗಾಗಿ ಕೆಂಪುಮೂತಿ ಹುಳುವಿನ ಬಗ್ಗೆ ನಿರ್ಲಕ್ಷೃ ಸಲ್ಲದು ಎಂದು ಎಚ್ಚರಿಸಿದ್ದಾರೆ.

ಹುಳುವಿನ ನಿರ್ವಹಣೆಗೆ ಮಾರ್ಗೋಪಾಯಗಳನ್ನು ಸೂಚಿಸಿರುವ ಅವರು, ಹುಳು ಇರುವ ಕಡೆ ಒಂದು ರಂಧ್ರ ಮಾಡಿ ಅದಕ್ಕೆ 4 ಮಿಲಿ ಕ್ಲೊರಾಂಟ್ರಿನಿಲಿಪ್ರೋಲ್, 4 ಮಿಲಿ ಇಂಡಾಕ್ಸಾಕಾರ್ಬನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸುರಿಯಬೇಕು. ಸುಳಿಯಲ್ಲಿರುವ ರಂಧ್ರದಲ್ಲೂ ಸುರಿಯಬೇಕು. ಶೇ.5 ಮೆಲಾಥಿಯಾನ್ ಪುಡಿ ಹಾಗೂ ಮರಳು ಸಮ ಪ್ರಮಾಣದಲ್ಲಿ ಬೆರೆಸಿ ಏಪ್ರಿಲ್, ಮೇ, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಗಳಲ್ಲಿ ಎಲೆ ಸಂದುಗಳಲ್ಲಿ ಹಾಕಬೇಕು.

ಯಾವುದೇ ಮರಗಳ ಕಾಂಡದಲ್ಲಿ ಗಾಯಗಳಾಗದಂತೆ ಎಚ್ಚರವಹಿಸಬೇಕು. ಗಾಯಗಳಾಗಿದ್ದಲ್ಲಿ 5 ಮಿಲಿ ಕ್ಲೋರೋಫೈರಿಫಾಸ್ ಸಂದುಗಳಲ್ಲಿ ಹಾಕಿ ಮಣ್ಣಿನ ಮಿಶ್ರಣದಿಂದ ಮುಚ್ಚಬೇಕು. ಕ್ಲೊರಾಂಟ್ರಿನಿಲಿಪ್ರೋಲ್ 18.5 ಎಸ್‌ಸಿ (2ಮಿಲಿ + 500 ಮಿಲಿ ನೀರು) ಅಥವಾ ಇಂಡಾಕ್ಸಾಕಾರ್ಬ 77.78 ಎಸ್‌ಸಿ (2 ಮಿಲೀ + 500 ಮಿಲಿ ನೀರು) ಬೇರುಗಳ ಮುಖಾಂತರ ಕೊಡಬೇಕು. ಪ್ರತಿ ಹೆಕ್ಟೇರ್‌ಗೆ ಒಂದರಂತೆ ಮೋಹಕ ಬಲೆಯನ್ನು ಇಡಬೇಕು ಮತ್ತು 6 ತಿಂಗಳಿಗೊಮ್ಮೆ ಲ್ಯೂರ್‌ನ್ನು ಬದಲಾಯಿಸಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net