ಜಿಲ್ಲೆಯಲ್ಲಿ ಮಳೆ ಮತ್ತೆ ಬಿರುಸು ಜುಲೈ 14 ರೆಡ್ ಅಲರ್ಟ್

Heavy Rain
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆ ಮತ್ತೆ ಬಿರುಸು ಪಡೆದಿದೆ. ನಗರ ಮತ್ತು ಗ್ರಾಮಾಂತರ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ರಾಜ್ಯ ಹವಾಮಾನ ಇಲಾಖೆ, ಜುಲೈ 14 ಭಾನುವಾರ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಜಿಲ್ಲೆಯ ನದಿ, ತೋಡುಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ಕೆಲವು ಅಪಘಾತಗಳು ಸಂಭವಿಸಿವೆ. ಇದನ್ನು ಹೊರತುಪಡಿಸಿ ಸದ್ಯ ಶನಿವಾರ ಸಂಜೆಯ ತನಕ ಯಾವುದೇ ಸಮಸ್ಯೆಯಾಗಿಲ್ಲ.

ಮಂಗಳೂರಿನ ಬಜಾಲ್ ಜಲ್ಲಿಗುಡ್ಡೆ ಸಮೀಪ ಗುಡ್ಡ ಕುಸಿದು ಬಿದ್ದಿದೆ. ನಗರದ ನಾನಾ ರಸ್ತೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಸಾಗಿ ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆಯಾಯಿತು. ಪಂಪ್‌ವೆಲ್ ಮೇಲ್ಸೇತುವೆಯ ಕೆಳಭಾಗದಲ್ಲಿ ಬಜಾಲ್ ಅಂಡರ್ ಪಾಸ್, ಪಡೀಲ್ ಭಾಗದಲ್ಲಿ ನೀರು ಸರಾಗವಾಗಿ ಸಾಗದೇ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದು ಕಂಡುಬಂತು. 24 ಗಂಟೆಯ ಅವಧಿಯಲ್ಲಿ ಮೂಡುಬಿದಿರೆಯಲ್ಲಿ 100.3 ಮಿ.ಮೀ, ಬೆಳ್ತಂಗಡಿ 88.2, ಬಂಟ್ವಾಳ 95.8, ಪುತ್ತೂರು 81.5, ಮಂಗಳೂರು 78.8, ಸುಳ್ಯ 87.7, ಕಡಬ 79.2, ಮೂಲ್ಕಿ 98.2 ಹಾಗೂ ಉಳ್ಳಾಲದಲ್ಲಿ 72.9 ಮಿ.ಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net