ಗುಜರಾತ್​ನಲ್ಲಿ ಪ್ರವಾಹ ಭೀತಿ: ಭಾರೀ ಮಳೆಯ ಬೆನ್ನಲ್ಲೇ ರೆಡ್ ಅಲರ್ಟ್ ಘೋಷಣೆ!

ವಿಜಯವಾಣಿ (31)
Published on

ಗಾಂಧಿನಗರ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇದೀಗ ಗುಜರಾತ್‌ಗೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯು ಪೂರ್ವ ರಾಜಸ್ಥಾನದಿಂದ ಸೌರಾಷ್ಟ್ರ ಪ್ರದೇಶದವರೆಗೂ ಬಿರುಸಿನ ಗಾಳಿ-ಮಳೆ ಇರಲಿದೆ ಎಂದು ಸೂಚಿಸಿದೆ. ಆಗಸ್ಟ್ 29ರವರೆಗೆ ನಿರಂತರ ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಆಗಸ್ಟ್ 24ರಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ತಗ್ಗು ಪ್ರದೇಶಗಳಲ್ಲಿ ಸಂಪೂರ್ಣವಾಗಿ ಜಲಾವೃತವಾಗಿದೆ. ಪ್ರವಾಹದಿಂದಾಗಿ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯನ್ನು ಚುರುಕಾಗಿ ನಡೆಸಲು ಮುಂದಾಗಿದೆ. ಗುಜರಾತ್​ನ ವಲ್ಸಾದ್, ತಾಪಿ, ನವಸಾರಿ, ಸೂರತ್, ನರ್ಮದಾ ಮತ್ತು ಪಂಚಮಹಲ್ ಜಿಲ್ಲೆಗಳಿಗೆ ಹೆಚ್ಚು ಮಳೆಯಾಗಲಿದ್ದು, ಕಳೆದ ನಾಲ್ಕು ದಿನಗಳಿಂದ ಸುರಿದ ನಿರಂತರ ಮಳೆಗೆ ಹಲವು ಪ್ರದೇಶಗಳು ಅಧಿಕ ಪ್ರಮಾಣದಲ್ಲಿ ಭಾರೀ ಹಾನಿಗೆ ಒಳಗಾಗಿವೆ.

ಇನ್ನು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್, ಗಾಂಧಿನಗರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಮಳೆಯಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸಿ, ರಾಜ್ಯದ ಜನತೆಯನ್ನು ರಕ್ಷಿಸುವುದು ಪ್ರಮುಖ ಆದ್ಯತೆ ಎಂದು ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net