

ಶಿವಮೊಗ್ಗ: ಕೆಲ ದಿನಗಳಿಂದ ಮಲೆನಾಡಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಜು.17 ಮತ್ತು 18ರಂದು ಭಾರಿ ವರ್ಷಧಾರೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಪಶ್ಚಿಮಘಟ್ಟ ವ್ಯಾಪ್ತಿಯ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳು ಅಕ್ಷರಶಃ ತೊಯ್ದು ತೊಪ್ಪೆಯಾಗಿವೆ. ತುಂಗಾ, ಶರಾವತಿ, ವರದಾ, ಮಾಲತಿ, ದಂಡಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಸಣ್ಣಪುಟ್ಟ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಸಿವೆ.
ನಿರಂತರ ಮಳೆಯಿಂದ ಭದ್ರಾ ಜಲಾಶಯಕ್ಕೆ ಕಳೆದ 24 ಗಂಟೆಯಲ್ಲಿ 3.9 ಅಡಿ ನೀರು ಹೆಚ್ಚಳವಾಗಿದೆ. 186 ಅಡಿ ಸಾಮರ್ಥ್ಯದ ಜಲಾಶಯಕ್ಕೆ ಬುಧವಾರ ಬೆಳಗ್ಗೆವರೆಗೆ 34,544 ಕ್ಯೂಸೆಕ್ ನೀರಿನ ಒಳಹರಿವಿತ್ತು. ಇದರಿಂದ ಜಲಾಶಯದ ಮಟ್ಟ 148.8 ಅಡಿಗೆ ಏರಿಕೆಯಾಗಿದೆ. ಮತ್ತೊಂದೆಡೆ 52,366 ಕ್ಯೂಸೆಕ್ ನೀರಿನ ಒಳಹರಿವಿರುವ ಲಿಂಗನಮಕ್ಕಿ ಜಲಾಶಯದ ಮಟ್ಟ 1784.70 ಅಡಿಗೆ ಏರಿಕೆ ಕಂಡಿದೆ. ಇದರಿಂದ ಮೂರು ಅಡಿಗೂ ಅಧಿಕ ಹೆಚ್ಚಳವಾಗಿದೆ
ಮಾಣಿ 172 ಮಿ.ಮೀ. ಮಳೆ: ಕುಮದ್ವತಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಸಾಗರದ ಕೊಲ್ಲಿಬಚ್ಚಲು ಆಣೆಕಟ್ಟು ಗರಿಷ್ಠ ಮಟ್ಟ ತಲುಪಿದೆ. ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಕಳೆದ 24 ಗಂಟೆಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಮಾಣಿಯಲ್ಲಿ ಗರಿಷ್ಠ 172 ಮಿ.ಮೀ. ಮಳೆಯಾಗಿದೆ. ಉಳಿದಂತೆ ಮಾಸ್ತಿಕಟ್ಟೆ 170, ಯಡೂರು 145, ಸಾವೇಹಕ್ಲು 140, ಚಕ್ರಾ 113 ಮಿ.ಮೀ. ಮಳೆ ಬಿದ್ದಿದೆ.