

ಬೆಂಗಳೂರು: ಕರ್ನಾಟಕದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವ ಪ್ರಕ್ರಿಯೆಯನ್ನು ಆರಂಭಿಸಿರುವ ರಾಜ್ಯ ಸರ್ಕಾರ, ರೋಸ್ಟರ್ ಬಿಂದುಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದೆ. ಜಾತಿಗೆ ಅನುಗುಣವಾಗಿ ಹೊಸ ಮೀಸಲಾತಿ ಜಾರಿಯಾಗುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ನೇರ ನೇಮಕಾತಿ ಹಾಗೂ ಮುಂಬಡ್ತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಸಾಕಷ್ಟು ಸರ್ಕಾರಿ ನೌಕರರು ನಿವೃತ್ತಿಯಾಗುತ್ತಿದ್ದು, ಮುಂಬಡ್ತಿ ಇಲ್ಲದೆ ಸೇವೆಯಿಂದ ಬಿಡುಗಡೆಗೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ನವೆಂಬರ್ ಅಂತ್ಯದೊಳಗೆ ಹೊಸ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯ ಕೇಳಿಬಂದಿದೆ.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಆಧರಿಸಿ ಸರ್ಕಾರ ಎಸ್ಸಿ ಮೀಸಲು ಪ್ರಮಾಣವನ್ನು ಶೇ.15ರಿಂದ 17ಕ್ಕೆ ಹಾಗೂ ಎಸ್ಟಿ ಮೀಸಲು ಪ್ರಮಾಣವನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಿದೆ. ಈಗ ಮೀಸಲಾತಿ ಹೆಚ್ಚಳಕ್ಕೆ ಅನ್ವಯವಾಗಿ ರೋಸ್ಟರ್ ಪದ್ಧತಿಯಡಿ ಯಾವ್ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂದು ಜಾತಿಗೆ ಅನುಗುಣವಾಗಿ ಗುರುತಿಸಲಾಗುತ್ತದೆ. ನಂತರ ಆಯಾ ಜಾತಿ, ಪಂಗಡದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚುವರಿಗೊಳಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೊಸ ಮೀಸಲಾತಿ ಪ್ರಮಾಣದಲ್ಲೇ ಮುಂಬಡ್ತಿ ಕೊಡಲಾಗುತ್ತದೆ.
ಎಲ್ಲ ಹುದ್ದೆಗಳ ಮೀಸಲಾತಿ ಪ್ರಮಾಣವನ್ನು ಮರು ನಿಗದಿಪಡಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ನೇರ ನೇಮಕಾತಿ ಹಾಗೂ ಮುಂಬಡ್ತಿ ಪ್ರಕ್ರಿಯೆಗಳು ಪುನಾರಂಭಗೊಳ್ಳಲಿವೆ. ಮುಂಬಡ್ತಿಗಾಗಿ ಕಾಯುತ್ತಿದ್ದ ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಅಧಿಕಾರಿ ಮತ್ತು ನೌಕರರಿಗೆ ಇನ್ನಷ್ಟು ದಿನ ಬಡ್ತಿ ಸಿಗುವುದಿಲ್ಲ. ಹೊಸ ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿ ಸಿಕ್ಕ ನಂತರ ಹಿಂದುಳಿದ ಮತ್ತು ಸಾಮಾನ್ಯದ ವರ್ಗದ ನೌಕರರಿಗೆ ಬಡ್ತಿ ಸಿಗಲಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಹೆಚ್ಚಿನ ಜಾತಿಗಳು ಸೇರ್ಪಡೆಯಾಗಿವೆ. ಮೊದಲು ಪರಿಶಿಷ್ಟ ಜಾತಿಯಲ್ಲಿ 6 ಜಾತಿಗಳಿದ್ದವು.
ಈಗ ಈ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. ಪರಿಶಿಷ್ಟ ಪಂಗಡದಲ್ಲಿ ಬರೀ 2 ಅಥವಾ 3 ಜಾತಿಗಳಿದ್ದವು. ಆದರೆ, ಸದ್ಯ 56 ಜಾತಿಗಳು ಸೇರ್ಪಡೆಯಾಗಿವೆ. ಈ ಎಲ್ಲ ಜಾತಿಗಳಿಗೆ ಅನ್ವಯವಾಗುವಂತೆ ಮೀಸಲಾತಿ ಪ್ರಮಾಣವನ್ನು ಮರುನಿಗದಿ ಮಾಡಲಾಗುತ್ತಿದೆ. ಎಸ್ಸಿ-ಎಸ್ಟಿ ಸಮುದಾಯದ ಅಭ್ಯರ್ಥಿಗಳು ಸ್ವಂತ ಅರ್ಹತೆಯ ಮೇರೆಗೆ ನೇಮಕಾತಿ ಅಥವಾ ಹುದ್ದೆಗಳಿಗೆ ಆಯ್ಕೆಯಾಗಿದ್ದರೆ ಅಂತಹವರಿಗೆ ಮೀಸಲಾತಿ ಅನ್ವಯಿಸುವುದಿಲ್ಲ. ಅವರನ್ನು ಮೀಸಲಾತಿಗೆ ಪರಿಗಣಿಸುವಂತಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ. ಆದರೆ, ಈಗ ಹೆಚ್ಚುವರಿ ಮೀಸಲಾತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಹಲವರಿಗೆ ಬಡ್ತಿ ಭಾಗ್ಯ ದೊರೆಯಲಿದೆ.
ಸುಗ್ರೀವಾಜ್ಞೆ ಮೂಲಕ ಜಾರಿ: ಎಸ್ಸಿ-ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಲು ಸಂಪುಟದಲ್ಲಿ ಅನುಮೋದನೆ ಪಡೆದಿದ್ದ ರಾಜ್ಯ ಸರ್ಕಾರ, ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಸುಗ್ರೀವಾಜ್ಞೆ-2022 ಹೊರಡಿಸಿತ್ತು. ಈ ಸುಗ್ರೀವಾಜ್ಞೆಗೆ ರಾಜ್ಯಪಾಲ ತಾವರಚಂದ್ ಗೆಹಲೋತ್ ಅಂಕಿತ ಹಾಕಿದ್ದರು. ಇದರ ಬೆನ್ನಲ್ಲೇ ವಿಶೇಷ ರಾಜ್ಯಪತ್ರ ಹೊರಡಿಸಲಾಗಿತ್ತು. ಕೇವಲ ಸರ್ಕಾರಿ ಆದೇಶದ ಮೂಲಕ ಮೀಸಲಾತಿ ಹೆಚ್ಚಿಸಿದರೆ ಕೋರ್ಟ್ನಲ್ಲಿ ಹಿನ್ನಡೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿತ್ತು.
ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಹೆಚ್ಚಿಸಲಾಗಿರುವ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಪ್ರಕ್ರಿಯೆ ಅಂತಿಮಗೊಂಡು ಅಧಿಕೃತವಾಗಿ ಪ್ರಕಟವಾಗುವವರೆಗೆ ಎಲ್ಲ ನೇರ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲು ಹಾಗೂ ಮುಂಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಭೆ ಆಯೋಜಿಸಬಾರದು ಎಂದು ಮುಂಬಡ್ತಿ ಸಮಿತಿ ಸಭೆಗೆ ಸೂಚನೆ ನೀಡಲಾಗಿದೆ. | ವಂದಿತಾ ಶರ್ಮಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ಸ್ವಾಗತಿಸುತ್ತೇವೆ. ಆದರೆ, ಪರಿಷ್ಕೃತ ಮೀಸಲಾತಿಯನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು. ಈ ನವೆಂಬರ್ನಲ್ಲೇ ಸಾಕಷ್ಟು ನೌಕರರು ನಿವೃತ್ತಿ ಅಂಚಿನಲ್ಲಿರುವುದರಿಂದ ಆಯಾ ಇಲಾಖೆ ಮುಖ್ಯಸ್ಥರ ಹಂತದಲ್ಲೇ ಹೊಸ ಮೀಸಲಾತಿ ಅನ್ವಯವೇ ಮುಂಬಡ್ತಿ ಕೊಡಲು ಸರ್ಕಾರ ನಿರ್ದೇಶಿಸಬೇಕು. | ಸಿ.ಎಸ್. ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ