

ಬೆಂಗಳೂರು ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪೊಲೀಸ್ ತನಿಖಾ ವರದಿಯನ್ನು ಪರಿಶೀಲಿಸಲು ತ್ರಿಸದಸ್ಯ ಸಮಿತಿ ರಚಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತೀರ್ಮಾನಿಸಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು, ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಮುಂದಿನ 3 ತಿಂಗಳೊಳಗೆ ಪೊಲೀಸ್ ತನಿಖಾ ವರದಿಯನ್ನು ನಿಯಮಾನುಸಾರ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಗುರುವಾರ ನಡೆದ ಕೆಇಎ ಆಡಳಿತ ಮಂಡಳಿ ಸಭೆಯಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಸೇರಿ ಹಲವು ಸಿಬ್ಬಂದಿ ಸಭೆಯಲ್ಲಿ ಹಾಜರಾಗಿದ್ದರು.
ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧನೆಗೆ 26 ವಿಷಯಗಳ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕೆಇಎ ವತಿಯಿಂದ 2021ರ ಸೆ.30ರಂದು ಪರೀಕ್ಷೆ ನಡೆಸುವುದಾಗಿ ಪ್ರಕಟಣೆ ಹೊರಡಿಸಿತ್ತು. 2022ರ ಮಾ.12ರಿಂದ 16ರ ವರೆಗೆ ಬೆಂಗಳೂರು ಸೇರಿ ರಾಜ್ಯದ ವಿವಿಧ 7 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು. ಮೇ 10ರಂದು ಮೆರಿಟ್ ಪಟ್ಟಿಯನ್ನು ಪ್ರಕಟಿಸಿತ್ತು.
ಪ್ರಕರಣದಲ್ಲಿ ಪರೀಕ್ಷೆ ಬರೆದಿರುವ ಎಲ್ಲ ಅಭ್ಯರ್ಥಿಗಳ ಒಎಂಆರ್ ದೃಢೀಕೃತ ಪ್ರತಿಗಳು ಹಾಗೂ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳ ಪೂರ್ಣ ವಿವರಗಳನ್ನು ಪೊಲೀಸ್ ತನಿಖೆಗೆ ಸಲ್ಲಿಸಲಾಗಿದೆ. ಸುಮಾರು 6 ತಿಂಗಳು ಪೊಲೀಸ್ ತನಿಖೆ ನಡೆಸಲಾಗಿದೆ. ಪ್ರಾಧಿಕಾರದಲ್ಲಿಯೂ ಪರೀಕ್ಷೆ ನಡೆಸಲು ಅಳವಡಿಸಿರುವ ಎಲ್ಲ ಕ್ರಮದ ಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ. 2023ರ ಜು.19ರಂದು ಪೊಲೀಸ್ ವರದಿಯನ್ನು ಕೆಇಎ ಗೆ ಸಲ್ಲಿಸಿದೆ.
ಈ ವರದಿಯನ್ನು ಪರಿಶೀಲಿಸಲು ತ್ರಿಸದಸ್ಯ ಸಮಿತಿಯನ್ನು ರಚಿಸಬಹುದಾಗಿದೆ ಎಂದು ಕೆಇಎ ಕೋರಿರುವ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ.