ಡ್ರಗ್ಸ್ ಮಾಫಿಯಾ ವಿರುದ್ಧ ಸಮರಕ್ಕೆ; ಪೊಲೀಸ್ ಮಾರ್ಷಲ್ಸ್‌ಗಳಾಗಿ 700 ವಿದ್ಯಾರ್ಥಿಗಳ ನೇಮಕ

Published on

ಬೆಂಗಳೂರು: ಯುವ ಪೀಳಿಗೆ ಭವಿಷ್ಯಕ್ಕೆ ಮಾರಕವಾದ ಮಾದಕ ವಸ್ತು ಜಾಲ ನಿಯಂತ್ರಿಸಲು ವಿದ್ಯಾರ್ಥಿಗಳನ್ನೇ ‘ಪೊಲೀಸ್ ಮಾರ್ಷಲ್ಸ್’ಗಳಾಗಿ ನಗರ ಪೊಲೀಸರು ನೇಮಿಸಿಕೊಂಡಿದ್ದಾರೆ.

ಯಲಹಂಕ ಮತ್ತು ಯಲಹಂಕ ಉಪನಗರ ಠಾಣೆಗಳ ವ್ಯಾಪ್ತಿಯಲ್ಲಿ ಇರುವ ಶಾಲಾ-ಕಾಲೇಜುಗಳು 700 ವಿದ್ಯಾರ್ಥಿಗಳನ್ನು ‘ಪೊಲೀಸ್ ಮಾರ್ಷಲ್ಸ್’ಗಳಾಗಿ ನೇಮಕ ಮಾಡಿ ಬುಧವಾರ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ವಿನೂತನ ಯೋಜನೆಗೆ ಚಾಲನೆ ನೀಡಿದರು.
ಯಲಹಂಕದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬಿ. ದಯಾನಂದ್, ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಸೇವನೆ, ಮಾರಾಟದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಾಶ್ವತವಾಗಿ ಮಾದಕ ವಸ್ತು ತೊಲಗಿಸಬೇಕು ಎಂದು ಕರೆ ನೀಡಿದರು.

ಮಕ್ಕಳ ಮೇಲೆ ಹೆತ್ತವರು ಉಜ್ವಲ ಭವಿಷ್ಯ ಕನಸು ಕಟ್ಟಿಕೊಂಡಿರುತ್ತಾರೆ. ಆಕರ್ಷಣೆ ಅಥವಾ ಸಹವಾಸ ದೋಷಕ್ಕೆ ಒಳಗಾಗಿ ಮಕ್ಕಳು ಅಡ್ಡದಾರಿ ತುಳಿದು ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ತಮ್ಮ ಸ್ನೇಹಿತರು ವ್ಯಸನಿಗಳಾಗದಂತೆ ತಡೆಯಲು ಪೊಲೀಸರೊಟ್ಟಿಗೆ ವಿದ್ಯಾರ್ಥಿಗಳು ಸಹಕರಿಸಬೇಕು. ಸಹಪಾಠಿಗಳಿಗೆ ಅರಿವು ಮೂಡಿಸಬೇಕು. ಇದಕ್ಕೆ ಬೇಕಾದ ಎಲ್ಲ ನೆರವನ್ನು ಪೊಲೀಸ್ ಇಲಾಖೆ ನೀಡಲಿದೆ ಎಂದು ಆಯುಕ್ತರು ಭರವಸೆ ನೀಡಿದರು. 

ಕೆಟ್ಟಗಳಿಗೆಯಲ್ಲಿ ಡ್ರಗ್ಸ್ ಸೇವನೆ ಚಟಕ್ಕೆ ಬಿದ್ದಿರಬಹುದು. ಇದರಿಂದ ಹೊರಬರಲು ಪೊಲೀಸರಿಗೆ ಹೆದರುವ ಅಗತ್ಯ ಇಲ್ಲ. ಆ ವ್ಯಸನಿಗಳಿಗೆ ಸೂಕ್ತ ಸಮಾಲೋಚಕರ ಮೂಲಕ ಕೌನ್ಸಿಲಿಂಗ್ ನಡೆಸಿ ವ್ಯಸನ ಮುಕ್ತಗೊಳಿಸಲಾಗುತ್ತದೆ. ಡ್ರಗ್ಸ್ ವ್ಯಸನಿಗಳು ಪೊಲೀಸರನ್ನು ಸಂಪರ್ಕಿಸಬಹುದು ಬಿ. ದಯಾನಂದ್, ಸಲಹೆ ನೀಡಿದರು.

ಪ್ರಾಯೋಗಿಕವಾಗಿ ಯಲಹಂಕ,ಯಲಹಂಕ ಉಪನಗರ ಠಾಣೆಗಳ ವ್ಯಾಪ್ತಿಯಲ್ಲಿ ಜಾರಿಗೆ ಬಂದಿದ್ದು, ಸಾಧಕ-ಬಾಧಕ ಅವಲೋಕಿಸಿ ನಗರದ ಎಲ್ಲ ಠಾಣೆಗಳಿಗೆ ಮಾರ್ಷಲ್ಸ್‌ಗಳ ನೇಮಿಸುವ ಕಾರ್ಯಕ್ರಮ ವಿಸ್ತರಿಸಲು ಆಯುಕ್ತರು ನಿರ್ಧರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ರಮಣಗುಪ್ತ, ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net