ಸೇವಾನಿರತ ಪೊಲೀಸರಿಗೆ ನೇಮಕ ಅನ್ಯಾಯ

PSI
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯ ಪೊಲೀಸ್ ಇಲಾಖೆಗೆ ಸೇರುವ ಕನಸುಕಟ್ಟಿಕೊಂಡಿರುವ ಸಾವಿರಾರು ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೂ (ಕೆಇಎ) ನ್ಯಾಯ ಸಿಕ್ಕಿಲ್ಲ. ಹಗರಣದಿಂದ ನನೆಗುದಿಗೆ ಬಿದ್ದಿದ್ದ 545 ಎಸ್​ಐ ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ಕೆಇಎ ಮರು ಲಿಖಿತ ಪರೀಕ್ಷೆ ನಡೆಸಿದಾಗ ಇನ್​ಸರ್ವೀಸ್ (ಸೇವಾನಿರತ) ಮೀಸಲಾತಿಯಡಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ಬಾಕಿ ಇರುವ 402 ಎಸ್​ಐ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಸುವ ಜವಾಬ್ದಾರಿ ಹೊಂದಿರುವ ಕೆಇಎ, ಈ ಬಾರಿಯಾದರೂ ಇನ್​ಸರ್ವೀಸ್ ಮೀಸಲಾತಿ ಬಯಸಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿ ಪ್ರತ್ಯೇಕ ಪ್ರವೇಶಪತ್ರ (ಹಾಲ್​ಟಿಕೆಟ್) ಕೊಡಬೇಕೆಂದು ಸಾವಿರಾರು ಅಭ್ಯರ್ಥಿಗಳ ಒತ್ತಾಯವಾಗಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್​ಸ್ಟೆಬಲ್ ಮತ್ತು ಎಸ್​ಐ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಕಾನ್​ಸ್ಟೆಬಲ್ ಆಗಿ ಆಯ್ಕೆಯಾದವರು ಪಿಎಸ್​ಐ ಪರೀಕ್ಷೆಗಳನ್ನು ಸಹ ಬರೆದು ನೇಮಕವಾಗಿರುವ ಸಾವಿರಾರು ಉದಾಹರಣೆಗಳಿವೆ. ಅದಕ್ಕಾಗಿ ಇನ್​ಸರ್ವೀಸ್ ಅಭ್ಯರ್ಥಿಗಳಿಗೆ ಶೇ.10 ಮೀಸಲಾತಿ ನೀಡಲಾಗಿದೆ. ಸೇವೆಯಲ್ಲಿ ಇರುವ ಪೊಲೀಸರು 5 ವರ್ಷ ಪೂರ್ಣವಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಇಂತವರು ಅರ್ಜಿ ಸಲ್ಲಿಸುವಾಗ ಇನ್​ಸರ್ವೀಸ್ ಮತ್ತು ನೇರ ನೇಮಕಾತಿ ಬಯಸಿ ಪ್ರತ್ಯೇಕ ಅರ್ಜಿ ಸಲ್ಲಿಸುತ್ತಿದ್ದರು. ಪೊಲೀಸ್ ನೇಮಕಾತಿ ವಿಭಾಗ ಸಹ ಎರಡೂ ಹಾಲ್​ಟಿಕೆಟ್ ಅಪ್​ಲೋಡ್ ಮಾಡುತ್ತಿತ್ತು.

ಅಭ್ಯರ್ಥಿಗಳು ಎರಡರ ಪೈಕಿ ಒಂದು ಹಾಲ್​ಟಿಕೆಟ್ ಪಡೆದು ಲಿಖಿತ ಪರೀಕ್ಷೆ ಬರೆಯುತ್ತಿದ್ದರು. 2021ರ ಅಕ್ಟೋಬರ್​ನಲ್ಲಿ 545 ಎಸ್​ಐ ಹುದ್ದೆ ಮತ್ತು 402 ಎಸ್​ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ ಇನ್​ಸರ್ವೀಸ್ ಅಭ್ಯರ್ಥಿಗಳು ಎರಡಕ್ಕೂ ಅರ್ಜಿ ಸಲ್ಲಿಸಿದ್ದರು. 545 ಎಸ್​ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಾಗಲೂ 2 ಹಾಲ್​ಟಿಕೆಟ್ ಸೌಲಭ್ಯ ನೀಡಲಾಗಿತ್ತು. ಈಗ ಅಕ್ರಮ ನಡೆದ ಕಾರಣಕ್ಕೆ ಮರು ಪರೀಕ್ಷೆ ನಡೆಸಲು ಸರ್ಕಾರ ಕೆಇಎಗೆ ಜವಾಬ್ದಾರಿ ನೀಡಿತ್ತು. ಜ.23ರಂದು ನಡೆದ 545 ಎಸ್​ಐ ಹುದ್ದೆಗಳ ಲಿಖಿತ ಪರೀಕ್ಷೆಗೆ ಒಂದೇ ಹಾಲ್ ಟಿಕೆಟ್ ಬಿಡುಗಡೆ ಮಾಡಿದ ಪರಿಣಾಮ ಸಾವಿರಾರು ಇನ್​ಸರ್ವೀಸ್ ಅಭ್ಯರ್ಥಿಗಳು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುವ ಭೀತಿ ವ್ಯಕ್ತವಾಗಿದೆ.

ಇದರಿಂದ ಎಚ್ಚೆತ್ತಿರುವ ಇನ್​ಸರ್ವೀಸ್ ಅಭ್ಯರ್ಥಿಗಳು 402 ಎಸ್​ಐ ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಲಿಖಿತ ಪರೀಕ್ಷೆಗೆ ಎರಡು ಹಾಲ್ ಟಿಕೆಟ್ ಕೊಡಬೇಕು. ಸಾಧ್ಯವಿಲ್ಲ ಎಂದಾದರೆ ಇನ್​ಸರ್ವೀಸ್ ಬಯಸಿ ಸಲ್ಲಿಸಿರುವ ಅರ್ಜಿಯನ್ನೇ ಮಾನ್ಯ ಮಾಡಿ ಕರೆಪತ್ರವನ್ನು ನೀಡಬೇಕೆಂದು ಸಾವಿರಾರು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.

ಕಾನೂನಿನಲ್ಲಿ ಏನಿದೆ?: ಸರ್ಕಾರದ ಯಾವುದೇ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ ಎಷ್ಟೇ ಅರ್ಜಿಗಳನ್ನು ಸಲ್ಲಿಸಿದರೂ ಒಂದನ್ನು ಮಾತ್ರ ಪರಿಗಣಿಸಿ ಅದರಲ್ಲಿ ಉಲ್ಲೇಖಿತ ಮಾಹಿತಿ ಆಧರಿಸಿ ಅಭ್ಯರ್ಥಿಗೆ ನೇಮಕಾತಿ ನೀಡಲಾಗುತ್ತದೆ. ಆದರೆ, ಕೆಇಎ ಅಧಿಕಾರಿಗಳು ಎರಡು ಅರ್ಜಿಗೆ ಒಂದೇ ಹಾಲ್ ಟಿಕೆಟ್ ಕೊಟ್ಟು ತಾತ್ಕಾಲಿಕ ಆಯ್ಕೆ ಪಟ್ಟಿ ವೇಳೆ ಎರಡು ಅರ್ಜಿಯನ್ನು ಪರಿಗಣಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ? ಎಂಬುದು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ.

ಕೆಇಎ ಎಡವಟ್ಟುಗಳು: ಜ.23ರಂದು 545 ಎಸ್​ಐ ಹುದ್ದೆಗಳ ನೇಮಕಾತಿಗೆ ಕೆಇಎ ನಡೆಸಿದ ಮರು ಪರೀಕ್ಷೆಯಲ್ಲಿ ಹಲವು ಎಡವಟ್ಟುಗಳು ನಡೆದಿವೆ. ಅಭ್ಯರ್ಥಿಗಳ ಬಯೋಮೆಟ್ರಿಕ್ ಮತ್ತು ಐಡಿ ಕಾರ್ಡ್ ಪರಿಶೀಲನೆ ನಡೆಸದೆ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ. ಪತ್ರಿಕೆ-1ಕ್ಕೆ ಪ್ರತ್ಯೇಕ ಪ್ರಶ್ನೆಪತ್ರಿಕೆ ಕೊಡದೆ ಓಎಂಆರ್ ಶೀಟ್ ಜತೆಯಲ್ಲಿಯೇ ಕೊಟ್ಟಿದ್ದು ಪದೇಪದೆ ಪುಟ ತಿರುಗಿಸಿ ನೋಡಿ ಬರೆಯುವುದು ಅಭ್ಯರ್ಥಿಗಳಿಗೆ ಕಿರಿಕಿರಿ ಎನಿಸಿತ್ತು. ಪತ್ರಿಕೆ-2ರಲ್ಲಿ ಪ್ರಶ್ನೆ 58ಕ್ಕೆ ಓಎಂಆರ್ ಶೀಟ್​ನಲ್ಲಿ ಟಿಕ್ ಮಾಡಲು ಅವಕಾಶವೇ ಇರಲಿಲ್ಲ. ಬದಲಿಗೆ 59ನೇ ಪ್ರಶ್ನೆಗೆ ಎರಡು ಬಾರಿ ಟಿಕ್ ಹಾಕಲು ಸ್ಥಳಾವಕಾಶ ನೀಡಲಾಗಿತ್ತು. ಪರಿಣಾಮ ಮುಂದಿನ ಎಲ್ಲ ಉತ್ತರಗಳು ತಪ್ಪಾಗಿ ಬರೆದಿರುವ ಸಾಕಷ್ಟು ಅಭ್ಯರ್ಥಿಗಳು ಇದ್ದಾರೆ. ಪ್ರಶ್ನೆಪತ್ರಿಕೆಯಲ್ಲೂ ಸಾಕಷ್ಟು ವ್ಯಾಕರಣ ದೋಷಗಳು ಇದ್ದವು.

ಇನ್​ಸರ್ವೀಸ್ ಮತ್ತು ನೇರ ನೇಮಕಾತಿ ಬಯಸಿ 2 ಅರ್ಜಿ ಸಲ್ಲಿಸುತ್ತಿದ್ದೆವು. 2 ಪ್ರವೇಶಪತ್ರಗಳು ಸಿಗುತ್ತಿದ್ದವು. ಈ ಪೈಕಿ ಒಂದರ ಮೇಲೆ ಲಿಖಿತ ಪರೀಕ್ಷೆ ಬರೆಯುತ್ತಿದ್ದವು. ಕೆಇಎ ಈ ಸೌಲಭ್ಯ ಕಡಿತ ಮಾಡಿದ್ದು, ಇನ್​ಸರ್ವೀಸ್ ಪರಿಗಣಿಸಿದರಷ್ಟೇ ಮೀಸಲಾತಿ ಸಿಗಲಿದೆ.

- ಎಸ್​ಐ ಹುದ್ದೆ ಆಕಾಂಕ್ಷಿ

2 ಅರ್ಜಿ ಸಲ್ಲಿಸಿದ್ದರೂ ಓರ್ವ ಅಭ್ಯರ್ಥಿಗೆ ಒಂದೇ ಹಾಲ್ ಟಿಕೆಟ್ ಕೊಡುವುದು. ಇನ್​ಸರ್ವೀಸ್ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ತಾತ್ಕಾಲಿಕ ಆಯ್ಕೆ ಪ್ರಕಟಿಸುವಾಗ ಅಂತಹ ಮನವಿಗಳನ್ನು ಪರಿಗಣಿಸಲಾಗುತ್ತದೆ.

- ಎಸ್. ರಮ್ಯಾ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net