ಆರೋಗ್ಯದಲ್ಲಿ ಚೇತರಿಕೆ: ಐಸಿಯುನಿಂದ ವಾರ್ಡ್‌ಗೆ ಮಾಜಿ ಸಿಎಂ ಎಚ್​​.ಡಿ.ಕುಮಾರಸ್ವಾಮಿ ಶಿಫ್ಟ್​

HDK
Published on

ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಐಸಿಯುನಿಂದ ವಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ.

ಕುಮಾರಸ್ವಾಮಿ ಅವರನ್ನು ನಿನ್ನೆ (ಆ.30) ಬೆಳಗ್ಗೆ 3.40ರ ಸುಮಾರಿಗೆ ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ.ಸತೀಶ್‌ ಚಂದ್ರ ಮತ್ತು ಅವರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಇದೀಗ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಚ್​ಡಿಕೆ ಅವರನ್ನು ಐಸಿಯುನಿಂದ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ.

ನಾಳೆ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಲಿರುವ ಎಚ್​ಡಿಕೆ, ಒಂದೆರಡು ದಿನ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಎಂದಿನಂತೆ ತಮ್ಮ ಕಾರ್ಯಚಟುಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಕುಮಾರಸ್ವಾಮಿ ಅವರಿಗೆ ಲಘುವಾದ ಸ್ಟ್ರೋಕ್ ಆಗಿದ್ದು, ಮಿದುಳಿನ ಎಡಭಾಗದಲ್ಲಿ ತೊಂದರೆ ಉಂಟಾಗಿ ಶರೀರದ ಬಲಭಾಗಕ್ಕೆ ಸಮಸ್ಯೆ ಆಗಿತ್ತು. ಈಗ ಎಲ್ಲ ಸರಿಯಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಚೆನ್ನಾಗಿ ಮಾತು ಕೂಡ ಆಡುತ್ತಿದ್ದಾರೆ. ಹೃದಯ ಬಡಿತ, ರಕ್ತದೊತ್ತಡ ಎಲ್ಲವೂ ಉತ್ತಮವಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಡಾ.ಸತೀಶ್​ಚಂದ್ರ ಸಂಜೆ ಮಾಧ್ಯಮದವರಿಗೆ ನಿನ್ನೆ ಹೇಳಿಕೆ ನೀಡಿದ್ದಾರೆ.

ನಿನ್ನೆ ಮಾಜಿ ಸಿಎಂ ಎಚ್​​ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿಯವರು ಆರಾಮಾಗಿದ್ದಾರೆ, ಊಹಾಪೋಹದ ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ ಜನತೆ ಗಾಬರಿ ಆಗುವುದು ಬೇಡ, ಯಾರೂ ಆತಂಕ ಪಡಬೇಡಿ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net