

| ಪಂಕಜ ಕೆ.ಎಂ. ಬೆಂಗಳೂರು
ಕರೊನಾದಿಂದ ಗುಣಮುಖರಾಗಿ ನಿಟ್ಟುಸಿರುಬಿಟ್ಟ ವಾರದಲ್ಲೇ 2ನೇ ಬಾರಿ ಕರೊನಾ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಕೋವಿಡ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಅನೇಕರಲ್ಲಿ ಮತ್ತೆ ಸೋಂಕು ಕಾಡುತ್ತಿರುವ ಪರಿಣಾಮ ಡಿಸ್ಚಾರ್ಜ್ ಆದ ಕೆಲವೇ ದಿನಗಳಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಪೋಸ್ಟ್ ಕೋವಿಡ್ ಕೇರ್ ಸೆಂಟರ್ ಒಂದರಲ್ಲೇ ಕಳೆದ 40 ದಿನಗಳಲ್ಲಿ 250ಕ್ಕೂ ಹೆಚ್ಚು ಮಂದಿ ಗುಣಹೊಂದಿದ ವಾರದಲ್ಲೇ ಸೋಂಕು ಲಕ್ಷಣಗಳಿಂದ ಪುನಃ ಚಿಕಿತ್ಸೆಗೆ ಆಗಮಿಸಿದ್ದಾರೆ. ಇಲ್ಲಿ ಗಂಭೀರ ಸಮಸ್ಯೆಯಿಂದ 76 ಮಂದಿ ಚಿಕಿತ್ಸೆಗೆ ದಾಖಲಾಗಿದ್ದು, ಅವರಲ್ಲಿ 15ಕ್ಕೂ ಹೆಚ್ಚು (ಶೇ.20) ಮಂದಿ ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ 3500ಕ್ಕೂ ಹೆಚ್ಚು ಮಂದಿ ದೂರವಾಣಿ ಮೂಲಕ ಆರೋಗ್ಯ ಸಲಹೆ ಪಡೆದುಕೊಂಡಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿ, ಪಾಸಿಟಿವ್ ಬಂದವರನ್ನಷ್ಟೇ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ಕೋವಿಡ್ 2ನೇ ಅಲೆಯಲ್ಲಿ ಈ ರೀತಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಮೊದಲ ಅಲೆಯಲ್ಲಿ (2020ರ ಮಾರ್ಚ್ನಿಂದ 2021ರ ಮೇ ವರೆಗೆ) ಗುಣಮುಖರಾದ ಒಂದೆರಡು ವಾರಗಳ ನಂತರ ಮತ್ತೆ ಸೋಂಕು ಲಕ್ಷಣಗಳು ಕಾಣಿಸಿಕೊಂಡು ಸುಮಾರು 200 ಮಂದಿ ಚಿಕಿತ್ಸೆ ಪಡೆದಿದ್ದರು. ಇವರಲ್ಲಿ 8-10 ಮಂದಿ ಗಂಭೀರ ಸಮಸ್ಯೆಯಿಂದ ದಾಖಲಾಗಿದ್ದರು. ಆದರೆ, ಎರಡನೇ ಅಲೆಯ ತೀವ್ರತೆಯಿಂದಾಗಿ ಕೇವಲ 42 ದಿನಗಳಲ್ಲಿ (ಜೂ 1ರಿಂದ ಜು. 13ರವರೆಗೆ) 250ಕ್ಕೂ ಹೆಚ್ಚು ಮಂದಿ ಕೋವಿಡ್ ಲಕ್ಷಣಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ತಿಳಿಸಿದ್ದಾರೆ.
ಸಮೀಕ್ಷೆಯಲ್ಲೂ ದೃಢ: ಸೋಂಕಿನಿಂದ ಗುಣಹೊಂದಿದವರು ದೀರ್ಘಾವಧಿ ದೌರ್ಬಲ್ಯ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ವಾಸನೆ ಮತ್ತು ರುಚಿ ಗ್ರಹಿಕೆ ಇಲ್ಲದಿರುವುದು ಹಾಗೂ ಕೂದಲು ಉದುರುವಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದು ಮುಂಬೈನ ವೈದ್ಯಕೀಯ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲೂ ದೃಢಪಟ್ಟಿದೆ. 396 ರೋಗಿಗಳ ಕುರಿತು ನಡೆಸಿರುವ ಸಮೀಕ್ಷೆಯಲ್ಲಿ ಶೇ. 15 ಜನರಲ್ಲಿ ದುರ್ಬಲತೆ, ಶೇ. 2.3 ಮಂದಿಯಲ್ಲಿ ದೀರ್ಘಕಾಲದ ಕೆಮ್ಮು ಮತ್ತು ಉಸಿರಾಟದ ತೊಂದರೆ, ಶೇ.1.3 ರೋಗಿಗಳಲ್ಲಿ ಕೂದಲು ಉದುರುವಿಕೆಗೆ ಕಂಡು ಬಂದಿದೆ. ಉಳಿದಂತೆ ಚೇತರಿಸಿಕೊಂಡವರಲ್ಲಿ ಶೇ. 87 ಮಂದಿ ಮೊದಲಿನಂತೆ ಆರೋಗ್ಯವಾಗಿರುವುದು ಕಂಡುಬಂದಿದೆ.
ಕಾರಣಗಳೇನು?: ಕೋವಿಡ್ ಸೋಂಕಿತರಿಗೆ ಸ್ಟಿರಾಯ್್ಡ ಎಷ್ಟು ಮುಖ್ಯವೋ ಅದು ಅತಿಯಾದರೆ ಅಷ್ಟೇ ಅಪಾಯವೂ ಹೌದು. ಹೆಚ್ಚು ಸ್ಟಿರಾಯ್್ಡ ಬಳಕೆಯಿಂದ ಸೋಂಕಿತರು ಬೇಗನೆ ಗುಣಮುಖರಾಗುತ್ತಾರೆ. ಹಾಗಾಗಿ ಬೇಗನೆ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಾರೆ. ಇಂತಹವರಲ್ಲಿ ಗುಣ ಹೊಂದಿದ ಕೆಲವೇ ದಿನಗಳಲ್ಲಿ ಮತ್ತೆ ಸೋಂಕು ಲಕ್ಷಣ ಉಲ್ಬಣಗೊಳ್ಳುತ್ತದೆ. ಜತೆಗೆ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎರಡನೇ ಅಲೆಯಲ್ಲಿ ಸೋಂಕು ತೀವ್ರತೆ ಹೆಚ್ಚಿದ್ದರಿಂದ ಬಹುತೇಕ ಮಂದಿಗೆ ಅತಿಯಾದ ಸ್ಟಿರಾಯ್್ಡ ನೀಡಲಾಗಿದೆ.
ನಿಗಾ ಇಲ್ಲದ್ದಕ್ಕೆ ಸೋಂಕು: 2ನೇ ಬಾರಿ ಸೋಂಕು ಲಕ್ಷಣಗಳಿಂದ ಚಿಕಿತ್ಸೆ ಪಡೆದವರಲ್ಲಿ ಬಹುತೇಕರು ಸಣ್ಣ ಪ್ರಮಾಣದ ಸೌಲಭ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರಾಗಿದ್ದಾರೆ. ಇಂತಹ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕೋವಿಡ್ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ನೀಡದೆ ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯ್್ಡ ನೀಡಲಾಗಿದೆ. ಇಂತಹವರಿಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರದಲ್ಲಿ ಸರಿಯಾದ ವೈದ್ಯಕೀಯ ನಿಗಾ ಇಲ್ಲದೆ ಸೋಂಕು ಮರುಕಳಿಸಿರುವ ಪ್ರಕರಣಗಳೇ ಹೆಚ್ಚಿವೆ ಎನ್ನುತ್ತಾರೆ ಪೋಸ್ಟ್ ಕೋವಿಡ್ ಕೇರ್ ಸೆಂಟರ್ನ ವೈದ್ಯರು.
ಶೇ.10 ಮಂದಿ ಡೇಂಜರ್: ಸೋಂಕಿನಿಂದ ಗುಣಮುಖರಾದವರಲ್ಲಿ ಶೇ.30ರಿಂದ 40 ಮಂದಿಯಲ್ಲಿ ಎರಡನೇ ಬಾರಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದರಲ್ಲಿ ಶೇ.8 ರಿಂದ 10 ರಷ್ಟು ಜನ ಗಂಭೀರ ಸ್ಥಿತಿಗೆ ತಲುಪುತ್ತಾರೆ. ಶೇ.2ರಷ್ಟು ಮಂದಿ ಮಾತ್ರ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಇದರಲ್ಲಿ ಶೇ.20 ಮಂದಿ ಮೃತಪಡುತ್ತಿದ್ದಾರೆ ಎಂದು ವೈದ್ಯಕೀಯ ತಜ್ಞರು ಮಾಹಿತಿ ನೀಡಿದ್ದಾರೆ.
ಏನೆಲ್ಲ ಸಮಸ್ಯೆ?: ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿ ಗುಣಮುಖರಾದವರಲ್ಲಿ (ಮಧುಮೇಹ, ಥೈರಾಯಿಡ್, ಅಧಿಕರಕ್ತದೊತ್ತಡ, ಕ್ರಾನಿಕ್ ಕಿಡ್ನಿ ಡಿಸೀಸ್, ಕ್ಯಾನ್ಸರ್ ಇತ್ಯಾದಿ ಗಂಭೀರ ಕಾಯಿಲೆ ಹೊಂದಿದವರಲ್ಲಿ) ಶ್ವಾಸಕೋಶದ ಸಮಸ್ಯೆ, ಉಸಿರಾಟದ ತೊಂದರೆ, ಹೃದಯದ ಸಮಸ್ಯೆ, ಪಾರ್ಶ್ವವಾಯು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ತಜ್ಞರು.
ಕರೊನಾ ವೈರಸ್ನಿಂದಾಗಿ ಪ್ರವಾಸೋದ್ಯಮ, ವ್ಯಾಪಾರ-ವಹಿವಾಟಿಗೆ ಏಟು ಬಿದ್ದಿರುವುದು ನಿಜ. ಆದರೆ, ಪ್ರವಾಸಿ ತಾಣಗಳು ಮತ್ತು ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವುದು ಒಳ್ಳೆಯದಲ್ಲ ಎಂದು ನಾನು ಖಡಾಖಂಡಿತವಾಗಿ ಹೇಳುತ್ತೇನೆ.
| ನರೇಂದ್ರ ಮೋದಿ ಪ್ರಧಾನಿ
ಎರಡನೇ ಅಲೆಯಲ್ಲಿ ಕೋವಿಡ್ ಸೋಂಕಿತರಲ್ಲಿ ಶೇ. 20 -25 ಮಂದಿ ಹೆಚ್ಚಿನ ಸ್ಟಿರಾಯ್್ಡ ಚಿಕಿತ್ಸೆಯಿಂದ ಬೇಗನೆ ಡಿಸ್ಚಾರ್ಜ್ ಆಗಿ, ಪುನಃ ಸೋಂಕು ಲಕ್ಷಣಗಳಿಂದ ಚಿಕಿತ್ಸೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಇಂತಹ ಸಮಸ್ಯೆಯಿಂದ ನಿತ್ಯ 10-12 ಮಂದಿ ಪೋಸ್ಟ್ ಕೋವಿಡ್ ಕೇರ್ ಸೆಂಟರ್ಗೆ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಇವರಲ್ಲಿ ಗಂಭೀರವಾಗಿ ಆಸ್ವಸ್ಥಗೊಂಡ ನಾಲ್ವರ ಪೈಕಿ ಒಬ್ಬರು ಸಾವಿಗೀಡಾಗುತ್ತಿದ್ದಾರೆ.
| ಡಾ. ನಾಗರಾಜ್ ನಿರ್ದೇಶಕರು, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ.