

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 26 ವರ್ಷಗಳಲ್ಲೇ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಗುರುವಾರ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರತಿವರ್ಷ ಈ ಸಮಯದಲ್ಲಿ ದೆಹಲಿಯಲ್ಲಿ ಸಹಜವಾಗಿ ಇರುವ ಕನಿಷ್ಠ ತಾಪಮಾನ 15-16 ಡಿಗ್ರಿ ಸೆಲ್ಸಿಯಸ್. ಆದರೆ ಈ ಸಲ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು 26 ವರ್ಷಗಳಲ್ಲೇ ಅತಿ ಕಡಿಮೆ ಎಂದು ಇಲಾಖೆ ಹೇಳಿದೆ.
1994ರ ಅಕ್ಟೋಬರ್ 31ರಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ದೆಹಲಿಯಲ್ಲಿ ಇದುವರೆಗಿನ ಅತಿ ಕಡಿಮೆ ತಾಪಮಾನ 1937ರಲ್ಲಿ ದಾಖಲಾಗಿತ್ತು. 1937ರ ಅಕ್ಟೋಬರ್ 31ರಂದು ದೆಹಲಿಯಲ್ಲಿನ ಕನಿಷ್ಠ ಉಷ್ಣಾಂಶ 9.4 ಡಿ.ಸೆ. ಆಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ಮಾತ್ರವಲ್ಲ, ನವೆಂಬರ್ 1ರಂದು ದೆಹಲಿಯಲ್ಲಿನ ಕನಿಷ್ಠ ಉಷ್ಣಾಂಶ 11 ಡಿ.ಸೆ. ಇರಬಹುದು ಎಂದು ಎಂದೂ ಇಲಾಖೆ ಅಂದಾಜಿಸಿದೆ.