ರಿಯಲ್ ಎಸ್ಟೇಟ್​ನಲ್ಲಿ ದಾಖಲೆ! 16,290 ಚದರಡಿ ಮನೆ 190 ಕೋಟಿ ರೂ.ಗೆ ಮಾರಾಟ

ವಿಜಯವಾಣಿ (10)
Published on

ನವದೆಹಲಿ: ಇಡೀ ದೇಶದಲ್ಲೇ ಅತ್ಯಂತ ದುಬಾರಿ ಎನ್ನಬಹುದಾದ ರಿಯಲ್ ಎಸ್ಟೇಟ್ ವ್ಯವಹಾರವೊಂದು ಗುರುಗ್ರಾಮದಲ್ಲಿ ನಡೆದಿದೆ. ಡಿಎಲ್​ಎಫ್ ಕಂಪನಿ ಅಭಿವೃದ್ಧಿಪಡಿಸಿರುವ ಕ್ಯಾಮೆಲಿಯಾಸ್ ಅಪಾರ್ಟ್​ವೆುಂಟ್​ನಲ್ಲಿ 16,290 ಚದರಡಿಯ ಐಷಾರಾಮಿ ಪೆಂಟ್​ಹೌಸ್ ಬರೋಬ್ಬರಿ 190 ಕೋಟಿ ರೂ.ಗೆ ಮಾರಾಟವಾಗಿದೆ. ಇನ್​ಫೋ ಎಕ್ಸ್ ಸಾಫ್ಟ್ ವೇರ್ ಟೆಕ್ನಾಲಜಿ ಪ್ರೖೆ.ಲಿ. ಕಂಪನಿಯ ನಿರ್ದೇಶಕ ರಿಷಿ ಪರ್ತಿ ಅವರು ಇದನ್ನು ಖರೀದಿಸಿದ್ದು, ಡಿ. 2ರಂದು ನೋಂದಣಿಯಾಗಿದೆ. ಇದಕ್ಕೆ 13.30 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ ಎಂದು ಇಂಡೆಕ್ಸ್​ಟ್ಯಾಪ್ ವರದಿ ಮಾಡಿದೆ.

ದೆಹಲಿ ಮತ್ತು ಮುಂಬೈ ದೇಶದ ಅತ್ಯಂತ ದುಬಾರಿ ನಗರಗಳೆಂದೇ ಪರಿಗಣಿಸಲ್ಪಟ್ಟಿವೆ. ಆದರೆ ಭಾರಿ ವೆಚ್ಚದ ಐಷಾರಾಮಿ ಸೌಲಭ್ಯಗಳ ವಿಷಯದಲ್ಲಿ ಗುರುಗ್ರಾಮ್ ಈಗ ಈ ಎರಡೂ ನಗರಗಳನ್ನು ಮೀರಿಸಿದೆ. 2023ರ ಅಕ್ಟೋಬರ್​ನಲ್ಲಿ ಗುರುಗ್ರಾಮದ ಗಾಲ್ಪ್ ಕೋರ್ಸ್ ರಸ್ತೆಯಲ್ಲಿರುವ ಡಿಎಲ್​ಎಫ್ ಕ್ಯಾಮೆಲಿಯಾಸ್ ಅಪಾರ್ಟ್​ವೆುಂಟ್​ನಲ್ಲಿ 11 ಸಾವಿರ ಚದರಡಿಯ ಮನೆ 114 ಕೋಟಿ ರೂ.ಗೆ ಮರುಮಾರಾಟವಾಗಿತ್ತು. ಅದಕ್ಕೂ ಸುಮಾರು 10 ವರ್ಷ ಮೊದಲು, 2014ರಲ್ಲಿ ಈ ಅಪಾರ್ಟ್​ವೆುಂಟ್​ನಲ್ಲಿನ ಘಟಕಗಳು (ಬೇರ್ ಶೆಲ್ ಯೂನಿಟ್ಸ್) ಚದರಡಿಗೆ 22,500 ರೂ.ಗೆ ಮಾರಾಟವಾಗಿದ್ದವು.

ಇಡೀ ದೇಶದಲ್ಲಿ ಐಷಾರಾಮಿ ಮನೆಗಳ ವಿಷಯದಲ್ಲಿ ಮುಂಬೈ, ದೆಹಲಿ ಎನ್​ಸಿಆರ್ (ನ್ಯಾಷನಲ್ ಕ್ಯಾಪಿಟಲ್ ರೀಜನ್ - ರಾಷ್ಟ್ರ ರಾಜಧಾನಿ ಪ್ರದೇಶ) ಮುಂಚೂಣಿಯಲ್ಲಿವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾರ್ಪೆರೇಟ್ ಕಂಪನಿಗಳ ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲ ಶ್ರೀಮಂತರಿಗೆ ಈಗಲೂ ರಿಯಲ್ ಎಸ್ಟೇಟ್ ವಲಯವೇ ಹಣ ಹೂಡಿಕೆಯ ಪ್ರಮುಖ ತಾಣವಾಗಿದೆ. | ಅಭಿಷೇಕ್ ಕಿರಣ್ ಗುಪ್ತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇಂಡೆಕ್ಸ್​ಟ್ಯಾಪ್ ಡಾಟ್ ಕಾಮ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net