

ನವದೆಹಲಿ: ಕರೊನಾ ಸಾಂಕ್ರಾಮಿಕದ ಕಾರಣ ವಿವಿಧ ತೆರಿಗೆ ಸಂಗ್ರಹದಲ್ಲಿ ಕುಂಠಿತವಾಗಿದ್ದರೂ ಅಬಕಾರಿ ಸುಂಕ ಶೇಖರಣೆಯಲ್ಲಿ ಶೇ. 48 ಏರಿಕೆ ದಾಖಲಾಗಿದೆ. 2020ರ ಏಪ್ರಿಲ್ನಿಂದ ನವೆಂಬರ್ವರೆಗೆ 1,96,342 ಕೋಟಿ ರೂ. ಸಂಗ್ರಹವಾಗಿದ್ದು, 2019ರಲ್ಲಿ ಇದೇ ಅವಧಿಯಲ್ಲಿ 1,32,899 ಕೋಟಿ ರೂ. ಆಕರವಾಗಿತ್ತು.
ಏಪ್ರಿಲ್ನಿಂದ ನವೆಂಬರ್ವರೆಗೆ 4.49 ಕೋಟಿ ಟನ್ ಡೀಸೆಲ್ ಮಾರಾಟವಾಗಿದೆ. 2019ರ ಇದೇ ಅವಧಿಯಲ್ಲಿ 5.54 ಕೋಟಿ ಟನ್ ಬಿಕರಿಯಾಗಿತ್ತು. 2020ರಲ್ಲಿ ಪೆಟ್ರೋಲ್ ಬಳಕೆಯು 1.74 ಕೋಟಿ ಟನ್ ಇದ್ದು, ಇದು 2019ರಲ್ಲಿ 2.04 ಟನ್ ಇತ್ತು. 2020ರಲ್ಲಿ ಅಂದಾಜಿಗಿಂತ 1 ಕೋಟಿ ಟನ್ ಡೀಸೆಲ್ ಕಡಿಮೆ ಮಾರಾಟವಾಗಿದ್ದರೂ ಅಬಕಾರಿ ಸುಂಕದಲ್ಲಿ ಏರಿಕೆ ಇದೆ ಎಂದು ಪೆಟ್ರೋಲಿಯಂ ಸಚಿವಾಲಯದ ಯೋಜನೆ ಮತ್ತು ವಿಶ್ಲೇಷಣಾ ಘಟಕದ ಅಂಕಿಅಂಶ ತಿಳಿಸಿದೆ.
ಸುಂಕ ಏರಿಕೆ: ಕರೊನಾ ವ್ಯಾಪಕವಾದ ಸಂದರ್ಭದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಮಾಡಿದ್ದರಿಂದ ಕಚ್ಚಾ ತೈಲ ಮಾರಾಟದಲ್ಲಿ ಕುಸಿತವಾಗಿ ತೈಲ ಬೆಲೆ ಅರ್ಧಕ್ಕರ್ಧ ತಗ್ಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ಗೆ 13 ಮತ್ತು ಡೀಸೆಲ್ಗೆ 16 ರೂ. ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಹೀಗಾಗಿ ಅಬಕಾರಿ ಸುಂಕ ಸಂಗ್ರಹದಲ್ಲಿ ಏರಿಕೆ ಆಗಿದೆ.
ಪ್ರತಿ ಲೀಟರ್ ಪೆಟ್ರೋಲ್ ದರ ವಾಸ್ತವದಲ್ಲಿ 26 ರೂ. ಆಸುಪಾಸಿನಲ್ಲಿದ್ದು, 52.48 ರೂ. ತೆರಿಗೆ (ಕೇಂದ್ರಕ್ಕೆ 32.98 ಮತ್ತು ರಾಜ್ಯಕ್ಕೆ 19.50 ರೂ.) ಬಾಬ್ತಿನದ್ದಾಗಿದೆ. ಉಳಿದ 6.22 ರೂ. ಸ್ಥಳೀಯ ತೆರಿಗೆ, ಡೀಲರ್ ಕಮಿಷನ್ ಆಗಿದೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 84.70 ರೂ. ಮತ್ತು ಡೀಸೆಲ್ ಬೆಲೆ 74.88 ರೂ. ಇದೆ.