

ನವದೆಹಲಿ: ಕರೊನಾ ಸೋಂಕು ಪಸರಿಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೋಮವಾರ ಒಂದೇ ದಿನ ದೇಶಾದ್ಯಂತ ಸುಮಾರು 9 ಲಕ್ಷ ಕರೊನಾ ಪರೀಕ್ಷೆ ನಡೆಸಲಾಗಿದೆ. ಇದು ಈವರೆಗೆ ಒಂದು ದಿನದಲ್ಲಿ ನಡೆಸಿದ ಗರಿಷ್ಠ ಪ್ರಮಾಣದ ಪರೀಕ್ಷೆಯಾಗಿದೆ. ಭಾರತದಲ್ಲಿ ಈವರೆಗೆ ಒಟ್ಟು 3,09,41,264 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. 7 ಕೋಟಿಗೂ ಅಧಿಕ ಪರೀಕ್ಷೆಗಳನ್ನು ನಡೆಸುವ ಮೂಲಕ ಅಮೆರಿಕ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಸದ್ಯ 1,470 ಲ್ಯಾಬ್ಗಳಲ್ಲಿ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ 969 ಸರ್ಕಾರಿ ಲ್ಯಾಬ್ಗಳಾಗಿದ್ದು, 501 ಖಾಸಗಿ ಲ್ಯಾಬ್ಗಳಾಗಿವೆ.
ರಷ್ಯಾ ಲಸಿಕೆ ಮಾಹಿತಿ ಪಡೆಯುತ್ತಿರುವ ಭಾರತ: ಕರೊನಾಗೆ ವಿಶ್ವದ ಮೊದಲ ಲಸಿಕೆ ಘೊಷಿಸಿರುವ ರಷ್ಯಾದ ಅಧಿಕಾರಿಗಳ ಜತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಲಸಿಕೆಯ ಪರಿಣಾಮದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮ ಕುರಿತ ಮಾಹಿತಿಯನ್ನು ಭಾರತ ನಿರೀಕ್ಷಿಸುತ್ತಿದ್ದು, ಇದಕ್ಕಾಗಿ ರಷ್ಯಾದ ತಜ್ಞರ ತಂಡದ ಜತೆ ಮಾತುಕತೆ ನಡೆಸಲಾಗುತ್ತಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಲಸಿಕೆಯ ಸುರಕ್ಷತೆ ಬಗ್ಗೆ ವಿಶ್ವದ ಹಲವು ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನು ಮಾನವನ ಮೇಲೆ ಅಂತಿಮ ಮೂರು ಹಂತದ ಪ್ರಯೋಗಕ್ಕೆ ಒಳಪಡಿಸಲಾಗಿಲ್ಲ ಎನ್ನಲಾಗಿದೆ.
ರೂಪಾಂತರ ವೈರಸ್ಗಳು ಮಾರಣಾಂತಿಕವಲ್ಲ
ಕರೊನಾ ವೈರಸ್ನ ರೂಪಾಂತರ ವೈರಸ್ಗಳು ಹೆಚ್ಚು ಸಾಂಕ್ರಾಮಿಕವಾಗಬಹುದು. ಆದರೆ ಹೆಚ್ಚು ಮಾರಣಾಂತಿಕವಾಗಿಲ್ಲ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಹೇಳಿದ್ದಾರೆ. ಕರೊನಾದ ರೂಪಾಂತರಗಳು ಯುರೋಪ್ ಮತ್ತು ಅಮೆರಿಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ಇತ್ತೀಚೆಗೆ ಮಲೇಷ್ಯಾದಲ್ಲೂ ಡಿ614ಜಿ ಎಂಬ ಹೊಸ ರೂಪಾಂತರ ಕಂಡು ಬಂದಿದೆ. ಯುರೋಪ್ನಲ್ಲಿ ಪತ್ತೆಯಾದ ರೂಪಾಂತರ ವೈರಸ್ಗಳಿಂದ ಹೆಚ್ಚು ಸಾವು ಸಂಭವಿಸಿಲ್ಲ ಎಂಬುದಕ್ಕೆ ಪುರಾವೆಗಳಿವೆ ಎಂದು ಸಿಂಗಾಪುರದ ನ್ಯಾಷನಲ್ ವಿವಿಯ ಹಿರಿಯ ಸಲಹೆಗಾರ ಮತ್ತು ಸಾಂಕ್ರಾಮಿಕ ರೋಗಗಳ ಸೊಸೈಟಿ ಅಧ್ಯಕ್ಷರಾದ ಪಾಲ್ ತಂಬ್ಯಾಹ್ ಹೇಳಿದ್ದಾರೆ.
ವುಹಾನ್ನಲ್ಲಿ ಮ್ಯೂಸಿಕ್ ಪಾರ್ಟಿ!
ಕರೊನಾ ವೈರಸ್ನ ಮೂಲವಾದ ವುಹಾನ್ನಲ್ಲಿ ದೈಹಿಕ ಅಂತರ ಇಲ್ಲದೇ ಹಾಗೂ ಮಾಸ್ಕ್ ಧರಿಸದೇ ನೂರಾರು ಜನರು ವಾಟರ್ ಮ್ಯೂಸಿಕ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಇದರ ವಿಡಿಯೋ ಮತ್ತು ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದಕ್ಕೆ ವ್ಯಾಪಕ ಆಕ್ಷೇಪವೂ ವ್ಯಕ್ತವಾಗಿದೆ.
20 ಲಕ್ಷ ಜನ ಗುಣಮುಖ
ದೇಶಾದ್ಯಂತ 27.35 ಲಕ್ಷ ಕರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 20 ಲಕ್ಷಕ್ಕೂ ಅಧಿಕ ಜನರು ಈಗಾಗಲೇ ಚೇತರಿಕೆ ಕಂಡಿದ್ದಾರೆ. ಸುಮಾರು 6.65 ಸಕ್ರಿಯ ಪ್ರಕರಣಗಳಿವೆ. ಸೋಮವಾರ ಹೊಸ ಪ್ರಕರಣಕ್ಕಿಂತ ಹೆಚ್ಚು ಚೇತರಿಕೆ ಪ್ರಮಾಣ ದಾಖಲಾಗಿದೆ. ಇದು ಈವರೆಗಿನ ದಾಖಲೆಯಾಗಿದೆ. ಕಳೆದ 20 ದಿನಗಳಿಂದ ಪ್ರತಿದಿನ ಸರಾಸರಿ 60 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದರೂ, ಸರಾಸರಿ 50 ಸಾವಿರ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಚೇತರಿಕೆ ಪ್ರಮಾಣ ಶೇಕಡ 72ಕ್ಕಿಂತಲೂ ಅಧಿಕವಾಗಿದೆ. ಮರಣ ಪ್ರಮಾಣ ಶೇ.2ಕ್ಕಿಂತ ಕಡಿಮೆಯಾಗಿದೆ.
ಪುಣೆಯಲ್ಲಿ ಶೇ.51.5 ಜನರಲ್ಲಿ ಪ್ರತಿಕಾಯ
ಕರೊನಾಗೆ ಅತಿ ಹೆಚ್ಚು ಬಾಧಿತವಾಗಿರುವ ನಗರಗಳಲ್ಲಿ ಒಂದಾಗಿರುವ ಪುಣೆಯಲ್ಲಿ ಶೇಕಡ 51.5ರಷ್ಟು ಮಂದಿ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಸಿರೊ-ಸಮೀಕ್ಷೆಯೊಂದು ತಿಳಿಸಿದೆ. ಪುಣೆಯ ಮಹಾನಗರ ಪಾಲಿಕೆ ವ್ಯಾಪ್ತಿಯ ಆಯ್ದ ಐದು ಪ್ರದೇಶಗಳಲ್ಲಿನ 1,664 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಅದರಲ್ಲಿ ಶೇಕಡ 51.5ರಷ್ಟು ಜನರ ದೇಹದಲ್ಲಿ ಕರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳಿವೆ ಎಂದು ತಿಳಿದುಬಂದಿದೆ.
ಅಮಿತ್ ಷಾ ಮತ್ತೆ ಆಸ್ಪತ್ರೆಗೆ ದಾಖಲು
ಕರೊನಾ ವೈರಸ್ನಿಂದ ಇತ್ತೀಚೆಗೆ ಚೇತರಿಸಿಕೊಂಡಿದ್ದ ಗೃಹ ಸಚಿವ ಅಮಿತ್ ಷಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಷಾ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್್ಸ)ಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ಸಿಟಿ ಸ್ಕಾ್ಯನ್ಗೆ ಒಳಗಾಗಿದ್ದರು. ಅವರ ಎದೆಯಲ್ಲಿ ನೋವು ಇದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಷಾ ಅವರು ಆಸ್ಪತ್ರೆಯಲ್ಲಿದ್ದುಕೊಂಡೆ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಏಮ್್ಸ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.