ಮಾಲೂರು ಖಜಾನೆಯಲ್ಲಿ ದೊರಕಿದ ದಾಖಲೆ

klr evm
ಭದ್ರತಾ ಕೊಠಡಿ ತೆರೆಯುತ್ತಿರುವ ಅಧಿಕಾರಿಗಳು.
Published on

ಕೋಲಾರ: ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಮತದಾನ ಎಣಿಕೆ ಸಂಬಂಧ ಹೈಕೋರ್ಟ್‌ಗೆ ಸಲ್ಲಿಸಬೇಕಿರುವ ದಾಖಲೆಗಳು ಮಾಲೂರು ಖಜಾನೆಯಲ್ಲಿ ಲಭಿಸಿವೆ.

ಹೈಕೋರ್ಟ್ಗೆ ದಾಖಲೆ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಕೋಲಾರದ ಇವಿಎಂ ಭದ್ರತಾ ಕೊಠಡಿಯನ್ನು ತೆರೆದು ಪರಿಶೀಲಿಸಲಾಯಿತು. ಆದರೆ ಅಗತ್ಯ ದಾಖಲೆಗಳು ಲಭ್ಯವಾಗಲಿಲ್ಲ. ಆದರೆ, ಸಂಜೆ ವೇಳೆಗೆ ಮಾಲೂರು ಖಜಾನೆಯಲ್ಲಿ ಸೂಕ್ತ ದಾಖಲೆಗಳು ದೊರೆತವು.
ನ್ಯಾಯಾಲಯದ ಸೂಚನೆಯಂತೆ ಚುನಾವಣಾ ಆಯೋಗದ ನಿರ್ದೇಶನ ಪಾಲಿಸಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಇವಿಎಂ ಉಗ್ರಾಣದ ಬಾಗಿಲು ತೆರೆಯಲು ರಾಜ್ಯದ ಮುಖ್ಯ ಚುನಾವಣಾಽಕಾರಿ ಅನುಮತಿ ನೀಡಿದ್ದರು. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಡಿಸಿ ಅಕ್ರಂಪಾಷಾ, ಎಸ್ಪಿ ನಿಖಿಲ್, ಎಡಿಸಿ ಮಂಗಳಾ, ಎಸಿ ಡಾ.ಮೈತ್ರಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಮಾಲೂರು ಕ್ಷೇತ್ರದ ಇವಿಎಂ ಇಟ್ಟಿದ್ದ
ಭದ್ರತಾ ಕೊಠಡಿ ತೆರೆದು, ಮತ ಎಣಿಕೆ ಸಂದರ್ಭದಲ್ಲಿ ಸಂಗ್ರಹಿಸಿಟ್ಟ ದಾಖಲೆ ಪರಿಶೀಲಿಸಲಾಯಿತು. ಆದರೆ, ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದರೂ ಅಗತ್ಯ ದಾಖಲೆ ದೊರಕಿರಲಿಲ್ಲ.

  • ಲಭ್ಯವಿರುವ ದಾಖಲೆ ಸಲ್ಲಿಕೆ
    ಕೋರ್ಟ್ ಕೇಳಿರುವ ದಾಖಲೆಗಳು ಲಭ್ಯವಾಗಿಲ್ಲ, ವಿವಿಪ್ಯಾಟ್, ಇವಿಎಂ ದಾಖಲೆಗಳಿದ್ದು, ಉಳಿದ ದಾಖಲೆಗಳು ಖಜಾನೆಯಲ್ಲಿರಬಹುದು. ಏನೇನು ಮಾಹಿತಿ ಲಭ್ಯವಿದೆಯೋ ಅದನ್ನು ನ್ಯಾಯಾಲಯದ ಮುಂದೆ ಇಡುತ್ತೇವೆ. ವಿವಾದಕ್ಕೆ ಸಂಬಂಸಿದ ಅಂಶಗಳು ಮಾಲೂರಿನ ಖಜಾನೆಯಲ್ಲಿ ಇರಬಹುದು. ಮತ ಎಣಿಕೆಯ ಸಿಸಿ ಟಿ.ವಿ ದೃಶ್ಯಾವಳಿಗಳನ್ನು ನ್ಯಾಯಾಲಯ ಕೇಳಿದೆ. ಮತ ಎಣಿಕೆ ಮಾಹಿತಿ ನಮ್ಮಲ್ಲಿದೆ. ಹಾರ್ಡ್ಡಿಸ್ಕ್ ಹಾಗೂ ದೃಶ್ಯಾವಳಿ ಇಲ್ಲಿಲ್ಲ. ಇದು ಮಾಲೂರಿನ ಖಜಾನೆಯಲ್ಲಿದೆಯೇ ಎಂಬುದನ್ನು ಪರಿಶೀಲಿಸಲು ತಹಸೀಲ್ದಾರ್‌ಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದರು.
  • ಈಗ ದಾಖಲೆಯಿಲ್ಲ ಎಂದರೆ ಏನರ್ಥ?
    ಮರುಮತ ಎಣಿಕೆಗೆಗೆ ಅಗತ್ಯವಿದ್ದ ದಾಖಲೆಗಳು ಚುನಾವಣೆ ಫಲಿತಾಂಶದ ದಿನದಂದೇ ಲಭ್ಯವಿತ್ತು. ಆದರೆ ಈಗ ಇಲ್ಲ ಎಂದರೆ ಏನು ಅರ್ಥ. ಇದೇನು ಹುಡುಗಾಟವಾ? ಮರು ಮತಎಣಿಕೆ ಆಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ. ನ್ಯಾಯ ಸಿಗುತ್ತದೆ ಎಂದು ಆಶಾವಾದಿಯಾಗಿಯೇ ಇರುತ್ತೇನೆ ಎಂದು ಬಿಜೆಪಿಯ ಪರಾಜಿತ, ಮಾಜಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡ ತಿಳಿಸಿದರು.
    ಸಿಸಿಟಿವಿ ದೃಶ್ಯಾವಳಿ, 12 ಸಿ ಫಾರ್ಮ್‌ಗಳನ್ನು ನೀಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು, ಆದರೂ 1 ವರ್ಷದಿಂದ ಆಟ ಆಡಿಸುತ್ತಿದ್ದಾರೆ. 251 ಸಿ -ಫಾರ್ಮ್‌ಗಳ ಪೈಕಿ 120 ಫಾರ್ಮ್‌ಗಳಲ್ಲಿ ನಮ್ಮ ಏಜೆಂಟರ ಸಹಿಗಳೇ ಇಲ್ಲ. ಸಿಸಿಟಿವಿ ದೃಶ್ಯಾವಳಿ ದೊರೆತರೆ ನಮ್ಮ ಏಜೆಂಟರು ಇದ್ದರೋ? ಇಲವೋ ಎನ್ನುವುದು ತಿಳಿಯುತ್ತದೆ ಎಂದರು.
  • ಮರು ಮತ ಎಣಿಕೆಯಾದರೆ ಗೊಂದಲಕ್ಕೆ ತೆರೆ
    ಮರು ಮತ ಎಣಿಕೆ ಸಂಬಂಧ ಬಿಜೆಪಿಯ ಪರಾಜಿತ ಅಭ್ಯರ್ಥಿ ಹೈಕೋರ್ಟ್ನಲ್ಲಿ ರಿಟ್ ಹಾಕಿದ್ದಾರೆ. ಆ ಸಂಬಂಧ ದಾಖಲೆಗಳನ್ನು ಕೇಳಿದ್ದು ಭದ್ರತಾ ಕೊಠಡಿ ತೆರೆಯಲು ನಮಗೂ ನೊಟೀಸ್ ಬಂದಿದ್ದರಿಂದ ಹಾಜರಾಗಿದ್ದೇವೆ ಎಂದು ಸ್ವತಂತ್ರ ಅಭ್ಯರ್ಥಿಯಾಗಿದ್ದ ಹೂಡಿ ವಿಜಯ್‌ಕುಮಾರ್ ಹೇಳಿದರು.
  • ಅಧಿಕಾರ ಮುಂದುವರಿಸುತ್ತಾರೆ
    ನ್ಯಾಯಾಲಯ ಕೇಳಿರುವ ದಾಖಲೆ ಸಲ್ಲಿಸಲು ಭದ್ರತಾ ಕೊಠಡಿ ತೆರೆದು ಪರಿಶೀಲಿಸಲಾಗಿದ್ದು, ಅಗತ್ಯ ದಾಖಲೆಗಳು ಲಭ್ಯವಾಗಿಲ್ಲ. ಜಿಲ್ಲಾ ಕೇಂದ್ರದಲ್ಲಿ ಹುಡುಕಾಟ ಮುಗಿದಿದೆ. ಮಾಲೂರಿನ ಖಜಾನೆಯಲ್ಲಿ ಇರಬಹುದು. ಚುನಾವಣೆ ಆಯೋಗದ ನಿಯಮದಂತೆಯೇ ಫಲಿತಾಂಶ ಪ್ರಕ್ರಿಯೆ ನಡೆದಿದೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮೀನಾರಾಯಣ ತಿಳಿಸಿದರು.
    ಈಗಾಗಲೇ ಶಾಸಕರಾಗಿ ಆಯ್ಕೆಯಾಗಿರುವ ಕೆ.ವೈ.ನಂಜೇಗೌಡರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಅಽಕಾರ ಮುಂದುವರಿಸುತ್ತಾರೆ ಎಂದರು.
  • ಕಾರ್ಯಕರ್ತರ ಜೈಕಾರ
    ಇವಿಎಂ ಉಗ್ರಾಣದಲ್ಲಿ ದಾಖಲೆ ಹುಡುಕಿ ವಾಪಸ್ ಬರುವಾಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಆಯಾ ಪಕ್ಷದ ನಾಯಕರ ಪರ ಜೈಕಾರ ಕೂಗಿದರು. ಶಾಸಕ ನಂಜೇಗೌಡ ಪುತ್ರರಾದ ಹರೀಶ್, ಸುನೀಲ್, ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ್‌ಗೌಡ, ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್, ಕೆಆರ್‌ಎಸ್ ಅಭ್ಯರ್ಥಿ ಮಹೇಶ್ ಸೇರಿ ಮಾಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಸಿಪಿಎಂ, ಜೆಡಿಎಸ್, ಬಿಎಸ್‌ಪಿ, ಆಮ್ ಆದ್ಮಿ ಪಾರ್ಟಿ ಮುಖಂಡರು ಕಾಯುತ್ತಿದ್ದರು. ದಾಖಲೆ ಪರಿಶೀಲನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
  • ಮಾಲೂರು ಖಜಾನೆಯಲ್ಲಿವೆ ದಾಖಲೆ!
    ಕೋಲಾರದ ಸ್ಟ್ರಾಂಗ್ ರೂಂ ಪರಿಶೀಲನೆ ನಂತರ, ಮಾಲೂರು ಖಜಾನೆಯಲ್ಲಿ ಮಂಗಳವಾರ ಸಂಜೆ ವೇಳೆಗೆ ದಾಖಲೆ ಪರಿಶೀಲನೆ ನಡೆದಿದ್ದು, ಕೋರ್ಟ್ ಕೇಳಿರುವ ದಾಖಲೆಗಳು ಲಭ್ಯವಾಗಿದ್ದು, ಕೋರ್ಟ್‌ಗೆ ಕಳುಹಿಸಿಕೊಡಲಾಗುವುದು ಎಂದು ತಹಸೀಲ್ದಾರ್ ಕೆ.ರಮೇಶ್ ತಿಳಿಸಿದರು.
  • ಏನಿದು ಪ್ರಕರಣ?
    ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2023ರ ಮೇ 13ರಂದು ನಡೆದ ಮತ ಎಣಿಕೆಯಲ್ಲಿ ಹಾಲಿ ಶಾಸಕ ನಂಜೇಗೌಡ 50,955 ಮತ ಪಡೆದಿದ್ದರೆ, ಬಿಜೆಪಿಯ ಪ್ರತಿಸ್ಪರ್ಧಿ ಮಾಜಿ ಶಾಸಕ ಮಂಜುನಾಥಗೌಡ 50,707 ಮತ ಗಳಿಸಿದ್ದರು. ಕಡಿಮೆ ಅಂತರ ಮತಗಳಿಂದ ಪರಾಜಿತರಾದ ಹಿನ್ನೆಲೆಯಲ್ಲಿ ಮಂಜುನಾಥ್‌ಗೌಡ ಮತ್ತು ಬೆಂಬಲಿಗರು ಮರು ಮತ ಎಣಿಕೆಗೆ ಒತ್ತಾಯ ಮಾಡಿದ್ದರೂ ಅಂದಿನ ಜಿಲ್ಲಾಧಿಕಾರಿ, ಮರು ಎಣಿಕೆಗೆ ಅವಕಾಶ ನೀಡದೆ ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಮಂಜುನಾಥ್‌ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net