ದಾಖಲೆಯ ಮಹಾರುದ್ರ ಯಜ್ಞ ಸಂಪನ್ನ; 24 ಸಾವಿರ ತೆಂಗಿನಕಾಯಿ ಅರ್ಪಣೆ, ಎಲ್ಲ ಕಾಯಿ ಒಡೆದ ಏಕವ್ಯಕ್ತಿ

maharudra
Published on

ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆಯೋಜಿಸಲಾಗಿದ್ದ ಮಹಾರುದ್ರ ಕಿರಾತಮೂರ್ತಿ ಯಜ್ಞವು ಭಾನುವಾರ 24 ಸಾವಿರ ತೆಂಗಿನಕಾಯಿ ಸಮರ್ಪಣೆ ಮೂಲಕ ಸಂಪನ್ನಗೊಂಡಿತು.

ಬಾಗಲಗುಂಟೆಯ ಹೆಸರಘಟ್ಟ ರಸ್ತೆಯಲ್ಲಿರುವ ಎಂಇಐ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯಜ್ಞದ 2ನೇ ದಿನದ ಕಾರ್ಯಕ್ರಮಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ನಡೆಯಿತು. ಗಣಪತಿ ಹೋಮದೊಂದಿಗೆ ಆರಂಭವಾಗಿ ದೇವರಿಗೆ ಪ್ರಭಾತ ಸೇವೆ, ಕಿರಾತಮೂರ್ತಿಯ ಮುಳ್ಳಕ್ಕಲ್ ಪಟ್ಟು (ಆಯುಧ) ಮೆರವಣಿ ನಡೆಯಿತು. ಆ ನಂತರ ಬಹು ಆಕರ್ಷಿತ ಯಜ್ಞವು ಆರಂಭವಾಯಿತು.

ಯಜ್ಞದ ಪ್ರಧಾನ ಅಕರ್ಷಣೆ ತೆಂಗಿನಕಾಯಿ ಅರ್ಪಣೆ. ಹಿಂದು ಸಂಸ್ಕೃತಿಯಲ್ಲಿ ದೇವರಿಗೆ ತೆಂಗಿನಕಾಯಿ ಅರ್ಪಿಸುವುದು ಸಾಮಾನ್ಯ. ಆದರೆ ಮಹಾರುದ್ರ ಕಿರಾತ ಯಜ್ಞದಲ್ಲಿ 12 ಸಾವಿರ ತೆಂಗಿನಕಾಯಿಗಳನ್ನು ಈಡುಗಾಯಿ ಸೇವೆಯ ರೂಪದಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ. ಇದನ್ನು ಪಂದಿರಾಯಿ ಸೇವೆ ಎನ್ನಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಜೋಡಿ ಪಂದಿರಾಯಿ ಸೇವೆ ನಡೆಯಿತು. ಇಪ್ಪತ್ನಾಲ್ಕು ಸಾವಿರದ ಎಂಟು (24008) ತೆಂಗಿನ ಕಾಯಿಗಳನ್ನು ಒಡೆಯುವ ಮೂಲಕ ದಾಖಲೆಯ ಯಜ್ಞ ಸಂಪನ್ನವಾಯಿತು.

ರೀಪ್ ಫೌಂಡೇಶನ್ ಆಯೋಜಿಸಿದ್ದ ಈ ಐತಿಹಾಸಿಕ ಕಾರ್ಯಕ್ರಮವನ್ನು ಕೇರಳದಿಂದ ಬಂದಿದ್ದ ನೂರಕ್ಕು ಹೆಚ್ಚಿನ ತಂತ್ರಿಗಳು, ಅರ್ಚಕರು, ದೈವಪಾತ್ರಿಗಳು ನಡೆಸಿಕೊಟ್ಟರು. ವಿಶೇಷವೆಂಬಂತೆ ಏಕವ್ಯಕ್ತಿ ಸುಮಾರು ಆರೂವರೆ ಗಂಟೆಗಳ ಕಾಲ ನಿರಂತರವಾಗಿ ಎರಡು ಕೈಗಳಿಂದ 24008 ತೆಂಗಿನಕಾಯಿಗಳನ್ನು ಒಡೆದ ದೃಶ್ಯ ಬೆಂಗಳೂರಿಗರ ಹುಬ್ಬೇರುವಂತೆ ಮಾಡಿತ್ತು. ಸಾವಿರಾರು ಜನ ಶ್ರದ್ಧಾಭಕ್ತಿಯಿಂದ ಯಜ್ಞದಲ್ಲಿ ಪಾಲ್ಗೊಂಡಿದ್ದರು. ಪೂರ್ಣಾಹುತಿಯ ನಂತರ ಎಲ್ಲರಿಗೂ ಅನ್ನದಾನ ಹಾಗೂ ಯಜ್ಞದ ಪ್ರಸಾದವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಚಂದ್ರ ಗೌಡ, ಶಾಸಕ ಎಸ್.ಮುನಿರಾಜು, ಸತ್ಯಸಾಯಿ ಕೇಂದ್ರದ ಅರವಿಂದಾಕ್ಷಣ, ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು, ಬಿಜೆಪಿ ಯುವ ಮುಖಂಡ ವಿನೋದ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಕರ್ನಾಟಕ ಮತ್ತು ಕೇರಳ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ. ಇಂತಹ ಕಾರ್ಯಕ್ರಮದ ಮೂಲಕ ಅದು ಮತ್ತಷ್ಟು ಗಟ್ಟಿಗೊಂಡಿದೆ. ಮೊದಲ ಬಾರಿಗೆ ಕರ್ನಾಟಕದಲ್ಲಿ ಇಷ್ಟು ದೊಡ್ಡ ಪೂಜೆ ಏರ್ಪಡಿಸಿದ್ದು, ನಾಡಿನ ರೈತರಿಗೆ ಒಳಿತಾಗುವಂತೆ ಸಂಕಲ್ಪ ಮಾಡಿರುವುದು ಬಹಳ ಅರ್ಥಪೂರ್ಣ. ರೈತ ಸಮೃದ್ಧನಾಗಿದ್ದರೆ; ನಾಡು, ದೇಶವೇ ಸಮೃದ್ಧವಾಗಿರುತ್ತದೆ.

-ರಾಮಚಂದ್ರ ಗೌಡ, ಮಾಜಿ ಸಚಿವ

ದೂರದ ಕೇರಳದಲ್ಲಿ ನಡೆಯುವ ಅಪರೂಪದ ಯಜ್ಞವು ಬೆಂಗಳೂರಿನಲ್ಲಿ ನಡೆದಿದೆ. ಅದರಲ್ಲೂ ದಾಸರಹಳ್ಳಿ ಕ್ಷೇತ್ರದಲ್ಲಿ ನಡೆದಿರುವುದು ಕ್ಷೇತ್ರದ ಜನರ ಸೌಭಾಗ್ಯ. ಬಾಗಲಗುಂಟೆಯ ಎಂಇಐ ಮೈದಾನದಲ್ಲಿ ಪ್ರತಿವರ್ಷ ಶ್ರೀನಿವಾಸ ಕಲ್ಯಾಣ ಮಾಡುತ್ತಿದ್ದೆವು. ಈಗ ಶಿವನ ಅಂಶವೇ ಆಗಿರುವ ಕಿರಾತಮೂರ್ತಿ ಯಜ್ಞವು ನಡೆದಿದ್ದು, ಹರಿ-ಹರ ಆರಾಧನೆಯಿಂದ ಈ ಸ್ಥಳ ಧಾರ್ಮಿಕ ಮಹತ್ವ ಪಡೆದುಕೊಂಡಿದೆ.

-ಎಸ್.ಮುನಿರಾಜು, ದಾಸರಹಳ್ಳಿ ಶಾಸಕ

ನಾವು ಹಿಂದೆ ಕೇರಳದಲ್ಲಿ ಹೋಗಿ ಈ ಪೂಜೆ ನೋಡಿದ್ದೆವು. ಅಲ್ಲಿ 12 ಸಾವಿರ ತೆಂಗಿನ ಕಾಯಿ ಸಮರ್ಪಣೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ 24 ಸಾವಿರ ತೆಂಗಿನಕಾಯಿ ಸಮರ್ಪಣೆ ಮಾಡಿದ್ದನ್ನು ನೋಡಿ ಆಶ್ಚರ್ಯವಾಗಿದೆ. ದೈವಪಾತ್ರಿಯ ಮೇಲೆ ಭಗವಂತನ ಕೃಪೆ ಇಲ್ಲದೆ ಇದು ಸಾಧ್ಯವಿಲ್ಲ. ಯಾವುದೋ ಜನ್ಮದ ಪುಣ್ಯ ನಮಗೆ ಈ ಅವಕಾಶ ಸಿಕ್ಕಿದೆ. ಅವಕಾಶ ಕಲ್ಪಿಸಿಕೊಟ್ಟ ರೀಪ್ ಫೌಂಡೇಶನ್​ಗೆ ಧನ್ಯವಾದಗಳು.

-ಭೃಗೇಂದ್ರ ಪಿ.ಭಟ್, ಭಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net