ಒಂದೇ ದಿನ 408 ಕೋಟಿ ರೂ. ಮೌಲ್ಯದ ಮದ್ಯ ಸೇಲ್! ಅಬಕಾರಿ ಇತಿಹಾಸದಲ್ಲೇ ದಾಖಲೆ

ವಿಜಯವಾಣಿ (17)
Published on

ಬೆಂಗಳೂರು: ಹೊಸ ವರ್ಷದ ಬೆನ್ನಲ್ಲೇ ಶನಿವಾರ ಒಂದೇ ದಿನ 408 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ದು, ಅಬಕಾರಿ ಇತಿಹಾಸದಲ್ಲೇ ದಾಖಲೆ ಎನ್ನಲಾಗಿದೆ.

ರಾಜ್ಯದಲ್ಲಿ 12,614 ಮದ್ಯದಂಗಡಿಗಳಿದ್ದು, ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟದಿಂದ ಸರ್ಕಾರಕ್ಕೆ 65-70 ಕೋಟಿ ರೂ. ಆದಾಯ ಬರುತ್ತದೆ. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಸರ್ಕಾರ, ಡಿ.27ರಂದು ರಜೆ ಘೋಷಿಸಿತ್ತು. 4ನೇ ಶನಿವಾರವೂ ರಜೆ ಇರುವುದರಿಂದ ಕೆಎಸ್​ಬಿಸಿಎಲ್ ಡಿಪೋಗಳಿಂದ ಮದ್ಯ ಎತ್ತುವಳಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಸತತ ರಜೆ ಹಿನ್ನೆಲೆಯಲ್ಲಿ ಮದ್ಯ ಎತ್ತುವಳಿಗೆ ಅವಕಾಶ ನೀಡುವಂತೆ ರಾಜ್ಯ ಮದ್ಯ ಮಾರಾಟಗಾರರ ಸಂಘದ ವಿನಂತಿ ಮೇರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್​ಬಿಸಿಎಲ್) ಸಾಲ ಸೌಲಭ್ಯ(ಕ್ರೆಡಿಟ್ ಫೆಸಿಲಿಟಿ) ಆಧಾರದ ಮೇರೆಗೆ ಶನಿವಾರ ಮದ್ಯ ಎತ್ತುವಳಿಗೆ ಅನುಮತಿ ನೀಡಿದ್ದು, 327 ಕೋಟಿ ರೂ. ಮೌಲ್ಯದ 6 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 80 ಕೋಟಿ ರೂ. ಮೌಲ್ಯದ 4 ಲಕ್ಷ ಬಾಕ್ಸ್ ಬಿಯರ್ ಎತ್ತುವಳಿಯಾಗಿದೆ.

ಮೊದಲ ಬಾರಿ ಕ್ರೆಡಿಟ್ ಫೆಸಿಲಿಟಿ: ಮದ್ಯದಂಗಡಿ ಮಾಲೀಕರ ಮನವಿ ಮೇರೆಗೆ ಹಾಗೂ ರಜೆ ಹಿನ್ನೆಲೆಯಲ್ಲಿ ಬ್ಯಾಂಕ್​ಗಳು ತೆರೆಯದ ಕಾರಣ ದೇಶದಲ್ಲೇ ಪ್ರಥಮ ಬಾರಿಗೆ ‘ಸಾಲ ಸೌಲಭ್ಯ’ ಆಧಾರದಲ್ಲಿ ಮದ್ಯ ಎತ್ತುವಳಿಗೆ ಅವಕಾಶ ನೀಡಲಾಗಿದೆ. ದಾಖಲೆ ಮಟ್ಟದಲ್ಲಿ ಮದ್ಯ ಸೇಲಾಗಿರುವ ಪರಿಣಾಮ ಇಲಾಖೆಗೆ ಹೆಚ್ಚಿನ ಆದಾಯ ಬಂದಿದೆ ಎಂದು ಇಲಾಖೆ ಜಂಟಿ ಆಯುಕ್ತ ಟಿ.ನಾಗರಾಜಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವರ್ಷಾಚರಣೆಗೆ ಸಂಗ್ರಹ ಜೋರು

ಹೊಸ ವರ್ಷಕ್ಕೆ ಮದ್ಯದ ಕಿಕ್ ಜೋರಾಗುವ ಸಾಧ್ಯತೆ ಇದೆ. ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು ಹೊಸ ವರ್ಷ ಸ್ವಾಗತಕ್ಕೆ ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಮದ್ಯ, ಬಿಯರ್ ದಾಸ್ತಾನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಇನ್ನಷ್ಟು ಆದಾಯ ಹರಿದು ಬರುವ ನಿರೀಕ್ಷೆ ಇದೆ.

ಮಾಲೀಕರು ಕ್ರೆಡಿಟ್ ಫೆಸಿಲಿಟಿ ಆಧಾರದಲ್ಲಿ 150 ಕೋಟಿ ರೂ.ಮೌಲ್ಯದ ಮದ್ಯ ಖರೀದಿಸಿದ್ದಾರೆ. ಒಟ್ಟು 8,341 ಇನ್​ವಾಯ್ಸ್​ಗಳಾಗಿವೆ. ಇದಕ್ಕೆ ಸಹಕರಿಸಿದ ಅಬಕಾರಿ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇವೆ.

| ಬಿ. ಗೋವಿಂದರಾಜ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ರಾಜ್ಯ ಮದ್ಯ ಮಾರಾಟಗಾರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net