

ಜಿಎಸ್ಟಿ ಸಂಗ್ರಹದಲ್ಲಿ ಕಳೆದ ಜುಲೈ ತಿಂಗಳು ಮತ್ತೊಂದು ದಾಖಲೆ ನಿರ್ವಣವಾಗಿದೆ. 1,65,105 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 11ರಷ್ಟು ಪ್ರಗತಿ ಕಂಡಿದೆ.
ಐದನೇ ಬಾರಿಗೆ ಜಿಎಸ್ಟಿ ಆದಾಯ ಸಂಗ್ರಹವು -ಠಿ;1.6 ಟ್ರಿಲಿಯನ್ಗಿಂತ (1.6 ಲಕ್ಷ ಕೋಟಿ ರೂಪಾಯಿಗಿಂತ) ಹೆಚ್ಚು ಸಂಗ್ರಹವಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ ಜಿಎಸ್ಟಿ ಸಂಗ್ರಹಣೆ ಅಂದಾಜು -ಠಿ;1.65 ಟ್ರಿಲಿಯನ್ (1.65 ಲಕ್ಷ ಕೋಟಿ ರೂಪಾಯಿ) ತಲುಪಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಸರ್ಕಾರ -ಠಿ;41,239 ಕೋಟಿಯಷ್ಟು ಸಮಗ್ರ ಜಿಎಸ್ಟಿ (ಐಜಿಎಸ್ಟಿ) ಮತ್ತು -ಠಿ;840 ಕೋಟಿಯಷ್ಟು ಆಮದುಗಳ ಮೇಲಿನ ಜಿಎಸ್ಟಿ ಸೆಸ್ ಮೂಲಕ ಸಂಗ್ರಹಿಸಿದೆ. ಅಂತಾರಾಜ್ಯ ಮಾರಾಟದ ಇತ್ಯರ್ಥದ ನಂತರ ಜುಲೈ ತಿಂಗಳಲ್ಲಿ ಕೇಂದ್ರ -ಠಿ;69,558 ಕೋಟಿ ಮತ್ತು ರಾಜ್ಯಗಳು -ಠಿ;70,811 ಕೋಟಿ ಜಿಎಸ್ಟಿ ಸಂಗ್ರಹಿಸಿವೆ. ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇದೇ ಸಾಲಿನ ಜುಲೈ ತಿಂಗಳ ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಬಂದ ಜಿಎಸ್ಟಿ ಆದಾಯ ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡಾ 15ರಷ್ಟು ಹೆಚ್ಚಾಗಿದೆ. ಪ್ರಸ್ತುತ ಹಣಕಾಸು ವರ್ಷದ ಮೊದಲ ತಿಂಗಳಾದ ಎಪ್ರಿಲ್ನಲ್ಲಿ -ಠಿ;1.87 ಟ್ರಿಲಿಯನ್ (1.87 ಲಕ್ಷ ಕೋಟಿ ರೂಪಾಯಿ) ಸಂಗ್ರಹವಾಗುವ ಮೂಲಕ ಅತಿಹೆಚ್ಚು ಮಾಸಿಕ ಜಿಎಸ್ಟಿ ಸಂಗ್ರಹದಲ್ಲಿ ದಾಖಲೆ ಬರೆದಿತ್ತು. ಇದಾದ ನಂತರ ಈ ವರ್ಷದ ಜುಲೈ ತಿಂಗಳಲ್ಲಿ ಈ ಹಣಕಾಸು ಸಾಲಿನ ಎರಡನೇ ಅತಿ ಹೆಚ್ಚು ಆದಾಯ ಸಂಗ್ರಹವಾಗಿದೆ.
ನಿರೀಕ್ಷೆ ಏನು?
ಹಬ್ಬದ ಋತು ಸಮೀಪಿಸುತ್ತಿರುವುದರಿಂದ ವ್ಯಾಪಾರ ವಹಿವಾಟು ಮೆರುಗು ಇನ್ನಷ್ಟು ಹೆಚ್ಚಳ ಕಾಣುವ ನಿರೀಕ್ಷೆ ಇದ್ದು, ಜಿಎಸ್ಟಿ ಸಂಗ್ರಹ ಇನ್ನಷ್ಟು ಹೆಚ್ಚಳವಾಗಬಹುದು. ರಾಜ್ಯವಾರು ಜಿಎಸ್ಟಿ ಲೆಕ್ಕಪರಿಶೋಧನೆಗಳ ಸಂಖ್ಯೆಯಲ್ಲಿನ ವ್ಯಾಪಕ ಹೆಚ್ಚಳದೊಂದಿಗೆ ಇ-ಇನ್ವಾಯ್ಸಿಂಗ್ ವಹಿವಾಟು ಮಿತಿಗಳಲ್ಲಿನ ಪ್ರಗತಿಪರ ಕಡಿತ ಎಲ್ಲಾ ವ್ಯವಹಾರಗಳು ಹೆಚ್ಚು ಜಿಎಸ್ಟಿ ಅನುಸರಣೆಗೆ ಕಾರಣವಾಗಿದೆ. ಇದು ಪ್ರತಿ ತಿಂಗಳು ಹೆಚ್ಚು ಸ್ಥಿರವಾದ ಜಿಎಸ್ಟಿ ಸಂಗ್ರಹಣೆಗಳಿಗೆ ಕಾರಣವಾಗುತ್ತಿದೆ.
ಶೇ. 17ರಷ್ಟು ಹೆಚ್ಚಳ ದಾಖಲಿಸಿದ ಕರ್ನಾಟಕ
ಆರ್ಥಿಕವಾಗಿ ದೊಡ್ಡ ರಾಜ್ಯಗಳಾಗಿರುವ ಕರ್ನಾಟಕ, ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮತ್ತು ತಮಿಳುನಾಡು ರಾಜ್ಯಗಳು ಎರಡಂಕಿಯ ಆದಾಯದ ಬೆಳವಣಿಗೆಯನ್ನು ದಾಖಲಿಸಿವೆ. ಅಂದರೆ, ಜಿಎಸ್ಟಿ ಆದಾಯದಲ್ಲಿ ವಾರ್ಷಿಕವಾಗಿ ಶೇ. 10ಕ್ಕಿಂತಲೂ ಹೆಚ್ಚಿನ ವೃದ್ಧಿಯಾಗಿದೆ. ಜುಲೈ ತಿಂಗಳಲ್ಲಿ ಕರ್ನಾಟಕವು -ಠಿ;11,505 ಕೋಟಿ ಜಿಎಸ್ಟಿ ಆದಾಯದ ಸಂಗ್ರಹಿಸಿದ್ದು, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 17ರಷ್ಟು ಹೆಚ್ಚಳವನ್ನು ದಾಖಲಿಸಿದೆ. ದೆಹಲಿಯು ಜುಲೈನಲ್ಲಿ -ಠಿ;5405 ಕೋಟಿಯಷ್ಟು ಜಿಎಸ್ಟಿ ಆದಾಯ ಗಳಿಸಿದ್ದು, ಶೇಕಡಾ 25ರಷ್ಟು ವಾರ್ಷಿಕ ಸುಧಾರಣೆಯನ್ನು ಕಂಡಿದೆ. ಉತ್ತರ ಪ್ರದೇಶವು -ಠಿ;8802 ಕೋಟಿ ಜಿಎಸ್ಟಿ ಆದಾಯದೊಂದಿಗೆ ಶೇಕಡಾ 24ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಮಹಾರಾಷ್ಟ್ರವು -ಠಿ;26,024 ಕೋಟಿ ಆದಾಯದೊಂದಿಗೆ ಸಂಗ್ರಹದಲ್ಲಿ ಶೇಕಡಾ 18ರಷ್ಟು ಸುಧಾರಣೆ ವರದಿ ಮಾಡಿದೆ. ತಮಿಳುನಾಡು ಜುಲೈನಲ್ಲಿ -ಠಿ;10,022 ಕೋಟಿ ಜಿಎಸ್ಟಿ ಆದಾಯ ಸಂಗ್ರಹ ಮಾಡಿದ್ದು, ಶೇಕಡಾ 19ರಷ್ಟು ಸುಧಾರಣೆಯಾಗಿದೆ. ಆದರೆ, ಗುಜರಾತ್ ರಾಜ್ಯವು ಜುಲೈನಲ್ಲಿ ಕೇವಲ ಶೇಕಡಾ 7ರಷ್ಟು ಆದಾಯದ ಬೆಳವಣಿಗೆಯನ್ನು ದಾಖಲು ಮಾಡಿದೆ.