ಭದ್ರಾ ನೀರು ಹರಿಸುವ ತೀರ್ಮಾನ ಮರುಪರಿಶೀಲಿಸಿ

rata sangha
ಭದ್ರಾ ನಾಲೆಯಲ್ಲಿ ನೀರು ಹರಿಸುತ್ತಿರುವ ಬಗ್ಗೆ ಉನ್ನತ ಹಂತದ ಸಭೆಯಲ್ಲಿ ಚರ್ಚಿಸಿ ಮರುಪರಿಶೀಲನೆ ನಡೆಸಬೇಕೆಂದು ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು. ಹೊನ್ನೂರು ಮುನಿಯಪ್ಪ, ಗಿರೀಶ್ ಇತರರಿದ್ದರು.
Published on

ಶಿವಮೊಗ್ಗ: ಭದ್ರಾ ನಾಲೆಯಿಂದ ನೀರು ಹರಿಸುತ್ತಿರುವುದರ ಬಗ್ಗೆ ಉನ್ನತ ಹಂತದ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಜಲಾಶಯದ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಬೀಳಬಹುದಾದ ಮಳೆಯ ಪ್ರಮಾಣ, ಮುಂದಿನ ವರ್ಷ ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳ ಸಂರಕ್ಷಣೆ ಮುಂತಾದ ವಿಷಯಗಳನ್ನು ಗಂಭೀರವಾಗಿ ಚರ್ಚಿಸಬೇಕಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಅಭಿಪ್ರಾಯಪಟ್ಟರು.

ದಾವಣಗೆರೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿಯಾದ ಬಸವರಾಜಪ್ಪ, ಭದ್ರಾ ಜಲಾಶಯದಿಂದ ಈಗ ಬಲದಂಡೆ ನಾಲೆಯಿಂದ 2,650 ಕ್ಯೂಸೆಕ್ ಹಾಗೂ ಎಡದಂಡೆಯಿಂದ 380 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ 100 ದಿನಗಳು ಮಾತ್ರ ನೀರು ಹರಿಸಬಹುದು. ಇಷ್ಟು ಪ್ರಮಾಣದ ನೀರು ನಾಲೆಯ ಕೊನೆಯ ಭಾಗದ ಕೃಷಿ ಭೂಮಿಯನ್ನೂ ತಲುಪುವುದಿಲ್ಲ ಎಂಬ ವಿಷಯವನ್ನು ಮನವರಿಕೆ ಮಾಡಿಕೊಟ್ಟರು.
ಈ ಹಿಂದಿನ ವರ್ಷಗಳಲ್ಲಿ ಜಲಾಶಯ ತುಂಬಿದಾಗ ಬಲದಂಡೆಯಲ್ಲಿ 3,200 ಹಾಗೂ ಎಡದಂಡೆಯಲ್ಲಿ 480 ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ಇದು ನಾಲೆಯ ಕೊನೆಯ ಭಾಗ ತಲುಪುತ್ತಿತ್ತು. ಆದರೆ ಈ ಪ್ರಮಾಣದಲ್ಲಿ 80 ದಿನ ಮಾತ್ರ ನೀರು ಹರಿಸಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಬಂದು ಜಲಾಶಯ ಭರ್ತಿಯಾಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಕೂಡಲೇ ನೀರಾವರಿ ಸಲಹಾ ಸಮಿತಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಹವಾಮಾನ ಇಲಾಖೆ ತಜ್ಞರು, ಶಾಸಕರು, ಸಚಿವರ ಸಭೆ ಕರೆದು ಚರ್ಚಿಸಬೇಕು. ನೀರು ಹರಿಸುವ ತೀರ್ಮಾನವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಮುಖಂಡ ಗಿರೀಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net