

ರಾಜ್ಯ ಆಡಳಿತ ಸುಧಾರಣಾ ಆಯೋಗವು ಗುರುವಾರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಹಲವು ಶಿಫಾರಸುಗಳನ್ನು ಮಾಡಿದೆ. ಪಡಿತರ ಚೀಟಿ ಲೋಪ ಪರಿಹಾರ, ಸರ್ಕಾರಿ ಸಿಬ್ಬಂದಿ ಕೊರತೆ ನಿವಾರಣೆ, ಅನಗತ್ಯ ನಿಗಮ-ಮಂಡಳಿಗಳನ್ನು ಮುಚ್ಚುವುದು ಮುಂತಾದ ಶಿಫಾರಸುಗಳು ಇದರಲ್ಲಿ ಸೇರಿವೆ.
ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಲಾಯಿತು. ಇದು ಆಯೋಗದ 8ನೇ ವರದಿಯಾಗಿದ್ದು, ಆಡಳಿತಾತ್ಮಕ ಸುಧಾರಣೆಗೆ ಒಟ್ಟಾರೆ 5,039 ಶಿಫಾರಸು ಮಾಡಲಾಗಿದ್ದು, 1506 ಅನುಷ್ಠಾನಗೊಂಡಿವೆ ಎಂದು ದೇಶಪಾಂಡೆ ತಿಳಿಸಿದ್ದಾರೆ. ಆಯೋಗದ ಸಲಹೆಗಳಲ್ಲಿ ಎಷ್ಟು ಕಾರ್ಯರೂಪಕ್ಕೆ ಬರುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ರಾಜ್ಯದಲ್ಲಿ 46 ಲಕ್ಷದಷ್ಟು ಪಡಿತರ ಕಾರ್ಡ್ ಹೆಚ್ಚುವರಿಯಾಗಿದ್ದು, ಈ ಪೈಕಿ ಅನರ್ಹ ಕಾರ್ಡದಾರರನ್ನು ಪತ್ತೆಹಚ್ಚಲು ಹಾಗೂ ಯಾರನ್ನು ಈ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಬಗ್ಗೆ ಕೆಲ ಸಲಹೆಗಳನ್ನು ಆಯೋಗ ನೀಡಿದೆ. ಇದು ಆದ್ಯತೆ ಮೇಲೆ ಆಗಬೇಕಾದ ಕೆಲಸ.
ಮುಜರಾಯಿ ಇಲಾಖೆಯ ದೇವಸ್ಥಾನಗಳ ಚಟುವಟಿಕೆಗಳ ಒಟ್ಟಾರೆ ಸಮನ್ವಯ ಮೇಲ್ವಿಚಾರಣೆಗೆ ಕಾರ್ಯಪಡೆ ರಚನೆ; ಧಾರವಾಡದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಶಾಖಾ ಕಚೇರಿಯನ್ನು ತೆರೆಯುವುದು ಇತ್ಯಾದಿ ಶಿಫಾರಸುಗಳೂ ಇವೆ. ಸರ್ಕಾರಿ ಕೆಲಸವನ್ನು ಸುಗಮಗೊಳಿಸುವ ಹಿನ್ನೆಲೆಯಲ್ಲಿ, ಕಡಿಮೆ ಕೆಲಸವಿದ್ದು ಹೆಚ್ಚಿನ ಸಿಬ್ಬಂದಿಯಿರುವ ಇಲಾಖೆಯಿಂದ ಹೆಚ್ಚು ಕೆಲಸವಿದ್ದು ಕಡಿಮೆ ಸಿಬ್ಬಂದಿಯಿರುವ ಇಲಾಖೆಗೆ ನೌಕರರನ್ನು ವರ್ಗಾವಣೆ ಮಾಡುವಂತೆ ಸಲಹೆ ನೀಡಿರುವುದು ಪ್ರಮುಖ ಶಿಫಾರಸುಗಳಲ್ಲಿ ಸೇರಿದೆ. ಅದೇ ವೇಳೆ, ಯಾವ್ಯಾವ ಇಲಾಖೆಗಳಲ್ಲಿ ಎಷ್ಟು ಸಿಬ್ಬಂದಿ ಕೊರತೆ ಇದೆ ಎಂಬುದನ್ನೂ ಆಯೋಗವು ಅಂಕಿಅಂಶ ಸಮೇತ ನಮೂದಿಸಿದೆ.
ರಾಜ್ಯದಲ್ಲಿ ಇರುವ ನಿಗಮ ಮತ್ತು ಮಂಡಳಿಗಳಲ್ಲಿ ಯಾವುದಕ್ಕೆ ಏನು ಅಗತ್ಯವಿದೆ, ಯಾವುದಕ್ಕೆ ಮೂಲಭೂತ ಸೌಕರ್ಯ ಒದಗಿಸಿದರೆ ಏನು ಪ್ರಯೋಜನ ಎಂದು ಅಧ್ಯಯನ ನಡೆಸಿ ಅನಗತ್ಯ ನಿಗಮ-ಮಂಡಳಿಗಳನ್ನು ಮುಲಾಜಿಲ್ಲದೇ ಮುಚ್ಚುವಂತೆ ಆಡಳಿತ ಸುಧಾರಣಾ ಆಯೋಗವು ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿಗೆ ಸರ್ಕಾರ ಮನಸ್ಸು ಮಾಡುವುದೇ ಎಂಬುದು ಪ್ರಶ್ನಾರ್ಹ. ಏಕೆಂದರೆ, ರಾಜ್ಯದಲ್ಲಿ ಇರುವ ಅನೇಕ ನಿಗಮ-ಮಂಡಳಿಗಳು ರಾಜಕೀಯ ಪುನರ್ವಸತಿ ವೇದಿಕೆಗಳಾಗಿರುವುದು ಗೊತ್ತಿರುವಂಥದೇ. ಸಚಿವ ಸ್ಥಾನ ನೀಡಲಾಗದವರಿಗೆ ಇಲ್ಲಿ ಸ್ಥಾನ ಕಲ್ಪಿಸುವ ಮೂಲಕ ಸಮಾಧಾನಪಡಿಸುವ ಪದ್ಧತಿ ಬೆಳೆದುಕೊಂಡು ಬಂದಿದೆ. ಅನೇಕ ನಿಗಮ ಮಂಡಳಿಗಳು ನಷ್ಟದಲ್ಲಿಯೇ ನಡೆಯುತ್ತಿವೆ. ಹೀಗಿರುವಾಗ ಇಂಥವನ್ನು ಮುಚ್ಚುವುದು ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆ.
ಆಡಳಿತ ಸುಧಾರಣಾ ಆಯೋಗ ನೀಡುವ ಎಲ್ಲ ಸಲಹೆಗಳನ್ನೂ ಚಾಚೂತಪ್ಪದೆ ಜಾರಿಗೊಳಿಸುವುದು ಕಷ್ಟಸಾಧ್ಯವಾಗಿರಬಹುದು. ಆದರೆ, ಪಾರದರ್ಶಕ ಆಡಳಿತಕ್ಕೆ ಇಂಬು ನೀಡುವ, ಆಡಳಿತವನ್ನು ಜನರಿಗೆ ಇನ್ನಷ್ಟು ಹತ್ತಿರಕ್ಕೆ ತರುವಂಥ ಸಲಹೆಗಳನ್ನಾದರೂ ಕಾರ್ಯಗತಗೊಳಿಸುವ ಬದ್ಧತೆಯನ್ನು ಸರ್ಕಾರ ಗಳು ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಇಂಥ ವರದಿಗಳಿಗೆ ಗಾಂಭೀರ್ಯ ಬರುವುದಿಲ್ಲ.