

ತೀರ್ಥಹಳ್ಳಿ: ತಾಲೂಕಿನಲ್ಲಿ ಶೈಕ್ಷಣಿಕವಾಗಿ ರಾಜ್ಯ ಮಟ್ಟದಲ್ಲಿ ಗುರುತಿಸುವಂತಹ ಪ್ರತಿಭೆಗಳು ಹೊರಬರುತ್ತಿರುವುದು ಹೆಮ್ಮೆಯ ಸಂಗತಿ. ಈ ಪ್ರತಿಭೆಗಳು ಭವಿಷ್ಯದಲ್ಲಿ ರಾಷ್ಟ್ರದ ಆಸ್ತಿಯಾಗಿ ರೂಪುಗೊಳ್ಳಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕಾನ್ಪುರ ಐಐಟಿಯಲ್ಲಿ ಬಿ-ಟೆಕ್ ಪದವಿಗೆ ಪ್ರವೇಶ ಪಡೆದಿರುವ ಮೇಗರವಳ್ಳಿಯ ಸುಶಾಂತ್ ಪ್ರಭುವನ್ನು ಪುರಸ್ಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭೆಯನ್ನು ಅವರ ಚಿಕ್ಕ ವಯಸ್ಸಿನಲ್ಲೇ ಗುರುತಿಸುವ ಕಾರ್ಯ ಶಿಕ್ಷಕರಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಯ ಸಾಧನೆಗೆ ಪ್ರಮುಖವಾಗಿ ಕಾರಣರಾದ ಗುಡ್ಡೆಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ರಾಘವೇಂದ್ರ ಭಟ್ಟರ ಕಾಳಜಿ ಶಿಕ್ಷಕ ಹುದ್ದೆಯ ಘನತೆಯನ್ನು ಎತ್ತಿಹಿಡಿದಿದೆ. ಇಂತಹ ಶಿಕ್ಷಕರಿಂದಲೇ ಸಮಾಜದಲ್ಲಿ ಸುಶಾಂತ್ ಪ್ರಭುನಂತಹ ಪ್ರತಿಭೆಗಳು ತಳಮಟ್ಟದಿಂದ ಮೂಡಿಬರುವುದಕ್ಕೆ ಪ್ರೇರಣೆ ದೊರೆಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿ ತನ್ನ ಪ್ರತಿಭೆ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಲ್ಪಡುವ ಪ್ರತಿಷ್ಠಿತ ಐಐಟಿ ಕಾನ್ಪುರ ಸಂಸ್ಥೆಯಲ್ಲಿ ಬಿ-ಟೆಕ್ ಪದವಿಗೆ ಪ್ರವೇಶ ಪಡೆದಿರುವುದು ಇತರರಿಗೆ ಪ್ರೇರಣೆ ನೀಡುವಂತದ್ದು. ಸುಶಾಂತ್ ಸಾಧನೆಗೆ ಬೆಂಗಳೂರಿನ ರಾಷ್ಟ್ರೋತ್ಥಾನ ಪ್ರತಿಷ್ಠಾನದಲ್ಲಿ ದೊರತ ತರಬೇತಿ ಮತ್ತು ಮಾರ್ಗದರ್ಶನ ಕಾರಣ. ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯವಾಗಿ ಮನ್ನಣೆ ಗಳಿಸಿರುವ ಈ ಮಣ್ಣಿನ ಹೆಗ್ಗಳಿಕೆ ಶೈಕ್ಷಣಿಕವಾಗಿಯೂ ಮುಂದುವರಿಯಬೇಕು ಎಂದು ಆಶಿಸಿದರು.
ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣದಿಂದಲೇ ವಂಚಿತನಾಗುವ ಹಂತದಲ್ಲಿದ್ದೆ. ಆರಗ ನಾಗರಾಜರಾಯರಿಗೆ ನನ್ನನ್ನು ಪರಿಚಯಿಸಿ ಶಿಕ್ಷಣ ಮುಂದುವರಿಸಲು ಕಾರಣರಾದವರು ಬ್ಯಾಪ್ಟಿಸ್ಟ್ ಅಗೇರಾ ಎಂಬ ಶಿಕ್ಷಕರು. ನಂತರ ನಾಗರಾಜರಾಯರು ನನಗೆ ಅನ್ನ, ವಸ, ಅಕ್ಷರ ನೀಡಿದ ಪರಿಣಾಮ ನಾನು ಈ ಹಂತಕ್ಕೆ ಬೆಳೆಯುವುದಕ್ಕೆ ಕಾರಣ ಎಂದು ಸ್ಮರಿಸಿದರು.
ಶಿಕ್ಷಕ ರಾಘವೇಂದ್ರ ಭಟ್ ಅವರನ್ನು ಗೌರವಿಸಲಾಯಿತು. ಆರ್‌ಎಸ್‌ಬಿ ಸಮಾಜದ ಪ್ರಮುಖರಾದ ಪುಣೆಯ ಉದ್ಯಮಿ ನಟರಾಜ ಕಾಮತ್, ಪಪಂ ಸದಸ್ಯರಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ರವೀಶ್ ಭಟ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ, ಗುಂಡೂರಾವ್, ಹೊದಲ ವಿಶ್ವನಾಥ ಪ್ರಭು ಇತರರಿದ್ದರು.