

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ವೇಳೆ ಆಂಜನೇಯ, ಹನುಮಾನ್ ಚಾಲೀಸಾಗಳನ್ನೆಲ್ಲ ರಾಜಕೀಯಗೊಳಿಸಿದ್ದು ಗೊತ್ತಿರುವ ವಿಚಾರವೇ.
ಹನುಮಂತನ ಪೂಜೆ ವಿಚಾರವನ್ನೇ ಇಟ್ಟುಕೊಂಡು ಬಿಜೆಪಿ ಮುಖಂಡರು ಮತ್ತು ಆಮ್ ಆದ್ಮಿ ಪಾರ್ಟಿ ಮುಖಂಡರು ಪರಸ್ಪರ ಟೀಕೆ, ವಾಗ್ದಾಳಿ ಮಾಡಿಕೊಂಡಿದ್ದಾರೆ. ಚುನಾವಣಾ ಫಲಿತಾಂಶ ಬಂದು ಜಯಸಾಧಿಸಿದ ಅರವಿಂದ್ ಕೇಜ್ರಿವಾಲ್ ತಮ್ಮ ಭಾಷಣದಲ್ಲಿ ಹನುಮಂತನಿಗೆ ವಿಶೇಷ ಕೃತಜ್ಞತೆ ಹೇಳಿದ್ದರು.
ಇದೀಗ ಆಪ್ ಶಾಸಕ ಸೌರಭ ಭಾರದ್ವಾಜ್ ಅವರು ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರವನ್ನು ಹನುಮನಿಗೇ ಮೀಸಲಿಡಲಾಗುವುದು ಎಂದಿದ್ದಾರೆ.
ಪ್ರತಿ ಮಂಗಳವಾರ ಗ್ರೇಟ್ ಕೈಲಾಶ್ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ, ಸುಂದರಕಾಂಡದ ಅಧ್ಯಾಯಗಳ ಬೋಧನೆ, ಪಾರಾಯಣ, ಹನುಮ ಸ್ತೋತ್ರ ಪಠಣಗಳನ್ನು ನಡೆಸಲಾಗುವುದು. ಈ ಬಗ್ಗೆ ಏನೇ ಹೆಚ್ಚಿನ ಮಾಹಿತಿ ಬೇಕಾದರೂ ನನಗೆ ಕರೆ ಮಾಡಬಹುದು ಎಂದು ಸೌರಭ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹನುಮ ದೇವಾಲಯದಲ್ಲಿ ಅಪವಿತ್ರವಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. (ಏಜೆನ್ಸೀಸ್)