ಆಶೀರ್ವಾದವನ್ನು ಪಡೆಯುವುದೂ, ನೀಡುವುದೂ ಒಂದು ಕಲೆ!

Untitled design (1)
Published on
ಪೂಜೆಗಳು ನಡೆಯುತ್ತಿರುವಾಗ ಏನೂ ಮಾಡದೆ ಸುಮ್ಮನೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು. ಏನೋ ಒಂದು ಯತ್ನವನ್ನು ಮಾಡಿ ಅನುಭವವನ್ನು ಪಡೆಯಲು ಯತ್ನಿಸುವುದು ಯೋಗ್ಯ ವಾದುದಲ್ಲ. ಏನನ್ನೂ ಮಾಡದೆ ಅನುಭವವನ್ನು ಪಡೆದರೆ, ಅದೇ ಬಹಳ ಯೋಗ್ಯವಾದದ್ದು. ಮಂತ್ರೋಚ್ಚಾರಣೆ ನಡೆಯುತ್ತಲಿ ರುವಾಗ ಕಣ್ಣು ಮುಚ್ಚಿ ಧ್ಯಾನದಲ್ಲಿ ಕುಳಿತರೆ, ಅನುಭವವು ತಾನಾಗಿಯೇ ಉಂಟಾಗುತ್ತದೆ. ನಾವು ಪ್ರಯತ್ನ ಪಟ್ಟು ಪಡೆಯು ವಂಥದ್ದು ನಮಗಿಂತಲೂ ಅಲ್ಪವಾಗಿರುತ್ತದೆ. ಏನನ್ನೂ ಮಾಡದೆ ಪಡೆಯುವಂಥದ್ದು, ಕೇವಲ ಆಶೀರ್ವಾದದಿಂದ ಪಡೆಯು ವಂಥದ್ದು ಬಹಳ ದೊಡ್ಡದು.

ಉತ್ಸವಾಚರಣೆಯೆಲ್ಲವೂ ಸುಮ್ಮನೆ ಕುಳಿತು ಆಶೀರ್ವಾದವನ್ನು ಪಡೆಯುವುದರ ಬಗ್ಗೆ ಮಾತ್ರ. ಆಶೀರ್ವಾದಗಳನ್ನು ಪೂರ್ಣವಾಗಿ ಪಡೆಯದಂತೆ ನಮ್ಮನ್ನು ತಡೆಯುವುದು ಏನು? ಸದಾವಟಗುಟ್ಟುತ್ತಲೇ ಇರುವ ನಮ್ಮ ಸಣ್ಣ ಮನಸ್ಸು. ಸಣ್ಣ ಮನಸ್ಸು ತೀರ್ಪು ನೀಡುತ್ತದೆ, ಭೇದಗಳನ್ನು ಹುಡುಕುತ್ತದೆ, ನನಗೆ ಅದು ಬೇಕು, ಇದು ಬೇಕು ಎನ್ನುತ್ತಲಿರುತ್ತದೆ. ಅವೆಲ್ಲವನ್ನೂ ಒಂದು ಪಕ್ಕಕ್ಕಿಟ್ಟುಬಿಡಿ. ಸುಮ್ಮನೆ ಅಲ್ಲಿರಿ. ಆಗ ಆ ಶಕ್ತಿಯನ್ನು ಹೀರಿಕೊಳ್ಳಲಾರಂಭಿಸುತ್ತೀರಿ. ಸಾಮೂಹಿಕ ಪೂಜೆಗಳಲ್ಲಿ ಕುಳಿತಾಗ ನಿಮ್ಮ ಪಕ್ಕದಲ್ಲಿ ಕುಳಿತಿರುವವರು ಶೀನುತ್ತಿರಬಹುದು, ಕೆಮ್ಮುತ್ತಿರಬಹುದು, ಚಡಪಡಿಸುತ್ತಿರ ಬಹುದು. ಇವೆಲ್ಲವೂ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ರೀತಿಯ ವಿಷಯಗಳು ಬಂದಾಗ ಅದೆಲ್ಲವೂ ಮಾಯೆ ಎಂದು ನೆನಪಿಸಿಕೊಳ್ಳಿ.

ಸಾಧ್ಯವಾದರೆ ಬೇರೆಡೆ ಕುಳಿತುಕೊಳ್ಳಿ. ಒಂದು ವೇಳೆ ಇತರರ ವರ್ತನೆಯಿಂದ ನೀವು ಕೆಂಗೆಟ್ಟರೆ, ಅದೂ ಪರವಾಗಿಲ್ಲ. ನಾನು ಅದರಿಂದ ಕಂಗೆಟ್ಟೆ, ಆದರೆ ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುವುದಿಲ್ಲ ಎಂದು ನಿರ್ಧರಿಸಿಬಿಡಿ. ಪ್ರತಿಯೊಂದು ಬಿರುಗಾಳಿಯೂ ಒಂದು ಆಶೀರ್ವಾದವೇ. ಅದು ನಿಮ್ಮನ್ನು ಅಲುಗಾಡಿಸಿ, ನಿಮ್ಮನ್ನು ಮುಗಿಸಿಬಿಡುತ್ತದೆ. ಅಳುವಿನಲ್ಲಿ ನಿಮ್ಮನ್ನು ಮುಳುಗಿಸಿಬಿಡುತ್ತದೆ. ಆದರೆ ಜ್ಞಾನವಿದ್ದರೆ, ಅಳದೆ ಮುಗುಳ್ನಗುತ್ತೀರಿ. ಘಟನೆಯೇನೋ ಒಂದೇ! ನೀವು ಮುಗುಳ್ನಗುವ ಕಾರಣ, ನಿಮ್ಮ ಅನಂತ ಸ್ವಭಾವವು ನಿಮಗೆ ತಿಳಿದಿರುವುದರಿಂದ. ನೀವು ಸೀಮಿತವಾದ ವ್ಯಕ್ತಿತ್ವವಲ್ಲ, ಒಂದು ಹುಳುವಿನಂತೆ ಅಲ್ಲವೇ ಅಲ್ಲ, ಘಟನೆಗಳಿಂದ ಅಲುಗಾಡಿ ಹೋಗಲು! ನೀರಿಗಾಗಿ, ಹಾಲಿಗಾಗಿ ಸರದಿಯಲ್ಲಿ ನಿಲ್ಲುವ ಅಭ್ಯಾಸ ನಮ್ಮ ದೇಶದ್ದು. ಆದ್ದರಿಂದ ಗಂಟೆಗಟ್ಟಲೇ ನಿಂತು ಆಶೀರ್ವಾದವನ್ನು ಪಡೆಯಬೇಕು, ಹತ್ತಿ ಇಳಿಯಬೇಕೆಂಬ ಪರಿಪಾಠವೂ ಇದೆ!

ಆಶೀರ್ವಾದವನ್ನು ಪಡೆಯುವ ರೀತಿ ಇರುವ ಹಾಗೆ ಆಶೀರ್ವಾದವನ್ನು ಕೊಡುವ ಕಲೆಯೂ ಇದೆ. ಯಾರೊಳಗೆ ತೃಪ್ತಿ ತುಂಬಿ ತುಳುಕುತ್ತಿದೆಯೋ, ಅವರಿಗೆ ಆಶೀರ್ವಾದವನ್ನು ಕೊಡುವ ಶಕ್ತಿಯೂ, ಕ್ಷಮತೆಯೂ ಬಂದುಬಿಡುತ್ತದೆ. ಬಟ್ಟೆಗಳನ್ನು ಬದಲಿಸಿದ ಮಾತ್ರಕ್ಕೆ ಆಶೀರ್ವಾದವನ್ನು ಕೊಟ್ಟುಬಿಡಲು ಸಾಧ್ಯ ಎಂದು ಭಾವಿಸಬೇಡಿ. ವೃದ್ಧರಾದ ಮಾತ್ರಕ್ಕೇ ಆಶೀರ್ವಾದ ಕೊಡಬಹುದೆಂದಲ್ಲ! ಆಶೀ ರ್ವಾದ ಕೊಡಲು ಮನಸ್ಸಿನ ಸ್ಥಿತಿ ಮುಖ್ಯ. ತೃಪ್ತರಾದವರಿಗೆ, ಪ್ರಸನ್ನರಾದವರಿಗೆ ಆಶೀರ್ವದಿಸುವ ಕ್ಷಮತೆ ಬರುತ್ತದೆ. ಓರ್ವ ಯುವಕನು ಶೀತಲ ಮಾತೆಗೆ ಪೂಜಿಸಿ, ಅವಳನ್ನು ಪ್ರಸನ್ನಳಾಗಿಸಿದ. ಅವನ ಭಕ್ತಿಗೆ ಮೆಚ್ಚಿ, ಶೀತಲ ಮಾತೆ ಪ್ರತ್ಯಕ್ಷಳಾದಳು. ನಿನಗೇನು ಬೇಕು ಮಗು? ಎಂದು ಕೇಳಿದಳು. ಆ ಯುವಕ, ಅಮ್ಮ ನನಗೆ ಒಂದು ಕುದುರೆಯನ್ನು ಕೊಡು ಎಂದ. ಅದಕ್ಕೆ ತಾಯಿ, ಮಗು, ನನ್ನ ಬಳಿ ಕುದುರೆ ಇದ್ದಿದ್ದರೆ, ನಾನೇಕೆ ಕತ್ತೆಯ ಮೇಲೆ ಬರುತ್ತಿದ್ದೆ?... ಬೇರೆ ಏನನ್ನಾದರೂ ಕೇಳು.

ನನ್ನ ಬಳಿ ಇಲ್ಲದೆ ಇರುವುದನ್ನು ನಾನು ಹೇಗೆ ಕೊಡಲಿ? ಎಂದಳು! ನಾವು ತೃಪ್ತರಾದಾಗ ಮಾತ್ರ ಇತರರ ಇಚ್ಛೆಗಳನ್ನು ಪೂರೈಸಲು ಸಾಧ್ಯ. ಆಶೀರ್ವಾದಕ್ಕೆ ವಿಷಯಗಳನ್ನು ಬದಲಿಸುವ ಶಕ್ತಿಯಿದೆ. ಇಲ್ಲವಾದರೆ ಅದು ಆಶೀರ್ವಾದವೇ ಅಲ್ಲ! ಬದಲಿಸದಿದ್ದರೆ ಅದನ್ನು ಆಶೀರ್ವಾದ ಎನ್ನಲು ಸಾಧ್ಯವೇ ಇಲ್ಲ. ಆದರೆ ನಿಮಗೇನು ಬೇಕೋ ಅದನ್ನು ಬದಲಿಸುತ್ತಲೇ ಇರುತ್ತೀರಲ್ಲ! ನಿಮ್ಮ ಸಂಕಲ್ಪಶಕ್ತಿ ಬಲವಾಗಿದ್ದರೆ, ಅದು ಫಲಿಸಲು ಸ್ವಲ್ಪ ಸಮಯ ಹಿಡಿಯಬಹುದಾದರೂ, ಅದು ಖಂಡಿತವಾಗಿಯೂ ನಡೆಯುತ್ತದೆ. ನಾವಾದರೋ ಅನೇಕಾನೇಕ ವಿಕಲ್ಪಗಳನ್ನು, ಆಲೋಚನೆಗಳನ್ನು, ನಿಬಂಧನೆಗಳನ್ನು ನಮ್ಮದೇ ಬಯಕೆಯ ವಿರುದ್ಧವಾಗಿ ಹಾಕಿಕೊಂಡಿರುತ್ತೇವೆ!

ಮನಸ್ಸು ಸಂಯೋಜಿತವಾಗಿದ್ದರೆ, ಲೇಸರ್ ಕಿರಣದಂತೆ ಏಕಾಗ್ರವಾಗಿದ್ದರೆ, ನಮ್ಮ ಬಯಕೆಗಳೂ ಪೂರೈಸುತ್ತವೆ, ನಮ್ಮ ಆಶೀರ್ವಾದಗಳೂ ಫಲ ಕೊಡುತ್ತವೆ. ಆದರೆ ಮನಸ್ಸು ಗೊಂದಲದ ಗೂಡಾಗಿದ್ದರೆ, ಯಾವ ಬಯಕೆ ಈಡೇರಬೇಕು, ಯಾವುದಕ್ಕೆ ಆಶೀರ್ವಾದವನ್ನು ಪಡೆಯಬೇಕು ಎಂದೇ ತಿಳಿಯದಿದ್ದರೆ, ಅದು ಹೇಗೆ ಕೆಲಸ ಮಾಡುತ್ತದೆ? ಮನಸ್ಸು ಒಂದು ಗಣಕಯಂತ್ರದಂತೆ. ಇನ್ನೂ ಹೆಚ್ಚನ್ನು ಅದರೊಳಗೆ ಹಾಕಲಾಗದಿದ್ದಾಗ, ಅದರ ಡಿಪ್ರೋ ಗ್ರಾಮಿಂಗ್ ಮಾಡಬೇಕು. ನಿಮ್ಮ ಗಣಕಯಂತ್ರದ ಮೆಮೊರಿ ತುಂಬಿ ಹೋಗಿದ್ದರೆ, ಅದರೊಳಗೆ ಏನನ್ನು ತಾನೇ ಹಾಕಲು ಸಾಧ್ಯ? ಆಶೀರ್ವಾದಗಳಿಂದ ಜೀವನವೇ ಪರಿವರ್ತನೆಯಾಗುತ್ತದೆ. ನೀವು ನೀಡುವ ಆಶೀರ್ವಾದ ಫಲಿಸದಿದ್ದರೆ ಮೌನದಲ್ಲಿ ನಿಮ್ಮೊಳಗೆ ಇಳಿದು ಧ್ಯಾನ ಮಾಡಿ, ಖಾಲಿ ಮತ್ತು ಟೊಳ್ಳಾಗಿ, ನಿಮ್ಮಲ್ಲಿರುವ ಒತ್ತಡಗಳನ್ನೆಲ್ಲಾ, ಆಶಾಭಂಗವನ್ನೆಲ್ಲಾ ಧ್ಯಾನದ ಮೂಲಕ ನಿವಾರಿಸಿಕೊಳ್ಳಿ. ಆಗ ನೋಡಿ, ನೀವು ನೀಡುವ ಆಶೀರ್ವಾದ ಹೇಗೆ ಫಲೀಭೂತವಾಗುತ್ತದೆಂದು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net