ಬಂಡಾಯ ಸಾರಿದ ಈಶ್ವರಪ್ಪ, ಬಿಜೆಪಿಯಿಂದ ಉಚ್ಚಾಟನೆ

Eshwarappa K.S.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಬೆಂಗಳೂರು: ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಗೆ ಸೆಡ್ಡು ಹೊಡೆದು, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ನಾಮಪತ್ರ ಹಿಂಪಡೆಯುವ ಕೊನೇ ದಿನ ಮುಗಿಯುತ್ತಿದ್ದಂತೆಯೇ ಬಿಜೆಪಿ ಶಿಸ್ತು ಕ್ರಮಕೈಗೊಳ್ಳುವುದು ನಿರೀಕ್ಷಿತ ಹಾಗೂ ಅನಿವಾರ್ಯವೂ ಆಗಿತ್ತು ಎಂದು ತರ್ಕಿಸಲಾಗುತ್ತಿದೆ.

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಸೋಮವಾರ ಹೊರಡಿಸಿದ ಆದೇಶದ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಕೆ.ಎಸ್.ಈಶ್ವರಪ್ಪ ಅವರನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ ಎಂದು ಈಶ್ವರಪ್ಪ ಅವರಿಗೆ ರವಾನಿಸಿದ ಆದೇಶದಲ್ಲಿ ಲಿಂಗರಾಜ ಪಾಟೀಲ್ ತಿಳಿಸಿದ್ದಾರೆ.

ಮುಂದಿನ ನಡೆ ಕುತೂಹಲ

ಪಕ್ಷದಿಂದ ಹೊರಗೆ ಹಾಕಿರುವ ಕಾರಣ ಈಶ್ವರಪ್ಪ ಮುಂದಿನ ಚುನಾವಣೆ ಕಾರ್ಯತಂತ್ರ, ಮೋದಿ ೆಟೊ ಬಳಕೆ ವಿಚಾರದಲ್ಲಿ ಅವರ ನಡೆ ಕುತೂಹಲಕಾರಿಯಾಗಿದೆ. ಪಕ್ಷ ಶುದ್ದೀಕರಣ ಮಾಡುವೆ ಎಂದು ಅಖಾಡಕ್ಕೆ ಧುಮುಕಿದವರಿಗೆ ಸದ್ಯಕ್ಕೆ ಪಕ್ಷವೇ ಶಾಕ್ ನೀಡಿದೆ.

ಹಾಗೆಯೇ ಈ ತನಕ ಅವರೊಂದಿಗೆ ಗುರುತಿಸಿಕೊಂಡು ಓಡಾಡುತ್ತಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ತೆರೆಮರೆಯಲ್ಲಿ ಓಡಾಡಿಕೊಂಡಿದ್ದ ಸಂಘ-ಪರಿವಾರದ ಕೆಲವರ ನಿಲುವು ಏನೆಂಬುದು ತಿಳಿಯಲಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತವರ ಮಕ್ಕಳ ವಿರುದ್ಧದ ಮುನಿಸು, ಬಂಡಾಯವು ಪರೋಕ್ಷವಾಗಿ ಪಕ್ಷದ ವರಿಷ್ಠರಿಗೂ ತಲೆಬಿಸಿ ತಂದೊಡ್ಡಿತ್ತು. ತೆರೆಮರೆಯಲ್ಲಿ ಪಕ್ಷದ ಹಲವು ನಾಯಕರು ರಾಜಿಸಂಧಾನಕ್ಕೆ ಪ್ರಯತ್ನಿಸಿದರೆ, ಬಿಎಸ್‌ವೈಗೆ ಸಂಧಾನ ಬಾಗಿಲು ಸ್ವತಃ ಈಶ್ವರಪ್ಪ ಮುಚ್ಚಿಬಿಟ್ಟಿದ್ದರು.

ದೆಹಲಿಗೆ ಆಹ್ವಾನದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಬೇಕಿದ್ದ ಈಶ್ವರಪ್ಪ ಡಂಗುರ ಸಾರಿ, ದೆಹಲಿ ನಾಯಕರನ್ನೇ ಮನವೊಲಿಸುವೆ ಎಂಬ ಹೇಳಿಕೆ ನೀಡಿದ್ದರು. ಇದರಿಂದಾಗಿ ಬುಲಾವ್ ನೀಡಿದ್ದ ಅಮಿತ್ ಷಾಗೆ ಮುಜುಗರವಾಗಿ ಭೇಟಿಗೆ ಕಾಲಾವಕಾಶ ನೀಡಲಿಲ್ಲ ಎನ್ನಲಾಗಿತ್ತು.

ಇದಾದ ನಂತರವೂ ಮತ್ತೊಂದು ಸುತ್ತಿನ ಸಂಧಾನ, ಹಲವು ಆರ್‌ಗಳನ್ನು ನೀಡಿ ಮನವೊಲಿಕೆಗೆ ಪ್ರಯತ್ನಿಸಿದರೂ ಒಪ್ಪದ ಈಶ್ವರಪ್ಪ ಸ್ಪರ್ಧಾ ಕಣದಲ್ಲಿ ಉಳಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net