

ಮುಂಬೈ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆಯಲ್ಲಿ ಆದ ಏರಿಕೆ, ಜಾಗತಿಕ ಈಕ್ವಿಟಿಗಳಲ್ಲಿ ಕಂಡುಬಂದ ಭಾರಿ ಮಾರಾಟ ಪ್ರವೃತ್ತಿ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಸಾವಿರಕ್ಕೂ ಹೆಚ್ಚಿನ ಅಂಕ ಕುಸಿದು, 77 ಸಾವಿರಕ್ಕಿಂತ ಕಡಿಮೆ ಮಟ್ಟಕ್ಕೆ ಮುಟ್ಟಿತು. ಬಡ್ಡಿದರ ಇಳಿಕೆಯ ನಿರೀಕ್ಷೆಯನ್ನು ಹುಸಿ ಮಾಡಿದ ಅಮೆರಿಕದ ಉದ್ಯೋಗಾವಕಾಶ ಹೆಚ್ಚಳದ ವರದಿ, ರೂಪಾಯಿ ಬೆಲೆಯ ಸಾರ್ವಕಾಲಿಕ ಕುಸಿತ, ನಿರಂತರವಾಗಿ ಹೊರಹೋಗುತ್ತಿರುವ ವಿದೇಶಿ ಬಂಡವಾಳ ಮುಂತಾದವು ಕೂಡ ಸತತ ನಾಲ್ಕನೇ ದಿನವೂ ಭಾರತೀಯ ಷೇರುಪೇಟೆಯ ಕುಸಿತಕ್ಕೆ ಕಾರಣವಾದವು.
ಅಮೆರಿಕವು ರಷ್ಯಾ ತೈಲ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧದಿಂದಾಗಿ ರೂಪಾಯಿಯ ಬೆಲೆಯು ಡಾಲರ್ ವಿರುದ್ಧ ಇನ್ನಷ್ಟು ಕುಸಿತಕ್ಕೊಳಗಾಗಿದೆ. ಇದರಿಂದಾಗಿ ವಿದೇಶಿ ಹೂಡಿಕೆದಾರರು ಹಣ ಹಿಂತೆಗೆದುಕೊಳ್ಳುತ್ತಿದ್ದು, ಅದರ ದುಷ್ಪರಿಣಾಮ ದೇಶೀ ಷೇರು ಮಾರುಕಟ್ಟೆಯ ಮೇಲೆ ನಿರಂತರವಾಗಿ ಆಗುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ದಿನದ ವಹಿವಾಟಿನ ಮಧ್ಯದಲ್ಲಿ 1,129 ಅಂಕ ಇಳಿಕೆಯಾಗಿ 76,249ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಗೆ 1,048 ಅಂಕ ಇಳಿದು 76,330ಕ್ಕೆ ಸ್ಥಿರವಾಯಿತು. ನಿಫ್ಟಿ 345 ಅಂಕ ಕುಸಿದು 23,085ಕ್ಕೆ ಮುಟ್ಟಿತು. ಜೊಮ್ಯಾಟೊ ಷೇರು ಶೇ. 7ರಷ್ಟು ಕುಸಿಯಿತು. ಪವರ್ಗ್ರಿಡ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಎನ್ಟಿಪಿಸಿ, ಟಾಟಾ ಮೋಟರ್ಸ್, ಟೆಕ್ ಮಹಿಂದ್ರಾ, ಮಹಿಂದ್ರಾ ಆಂಡ್ ಮಹಿಂದ್ರಾ, ಏಷ್ಯನ್ ಪೇಂಟ್ಸ್, ಸನ್ ಫಾರ್ವ, ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ನಷ್ಟ ಅನುಭವಿಸಿದವು. ಆಕ್ಸಿಸ್ ಬ್ಯಾಂಕ್, ಹಿಂದುಸ್ತಾನ್ ಯೂನಿಲಿವರ್, ಟಿಸಿಎಸ್, ಇಂಡಸ್ಇಂಡ್ ಬ್ಯಾಂಕ್ ಮುಂತಾದವು ಲಾಭ ಗಳಿಸಿದವು.
ಏಷ್ಯಾದ ಮಾರುಕಟ್ಟೆ ಗಳಾದ ಸೋಲ್, ಶಾಂಘೈ, ಹಾಂಗ್ಕಾಂಗ್ ಕೂಡ ಕುಸಿತ ದಾಖಲಿಸಿದವು. ಜಪಾನ್ನಲ್ಲಿ ರಜೆ ಇದ್ದುದರಿಂದ ಮಾರುಕಟ್ಟೆ ತೆರೆದಿರಲಿಲ್ಲ. ಯೂರೋಪಿಯನ್ ಮಾರುಕಟ್ಟೆಗಳೂ ನಷ್ಟದಲ್ಲೇ ದಿನದ ವಹಿವಾಟು ಕೊನೆಗೊಳಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 2,254 ಕೋಟಿ ರೂ. ಹಿಂತೆಗೆದುಕೊಂಡಿದ್ದಾರೆ. ಈ ತಿಂಗಳಲ್ಲೇ ಇದುವರೆಗೆ ವಿದೇಶಿ ಹೂಡಿಕೆದಾರರು 22,194 ಕೋಟಿ ರೂ. ವಾಪಸ್ ಪಡೆದಿದ್ದಾರೆ.
ಷೇರುಪೇಟೆಯ ಕಳೆದ ನಾಲ್ಕು ದಿನಗಳ ಕುಸಿತದಿಂದಾಗಿ ಹೂಡಿಕೆದಾರರಿಗೆ ಒಟ್ಟಾರೆ 24.69 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.