

ಬೆಂಗಳೂರು: ಒಬ್ಬ ವ್ಯಕ್ತಿ ಸದಾ ಓಡಾಟ, ಹತ್ತಾರು ಕೆಲಸಗಳಲ್ಲಿ ಬಿಜಿಯಾಗಿದ್ದರೆ, ಅಂಥವನ ದೇಹ ಸದಾ ಚಟುವಟಿಕೆಯಿಂದಿರುತ್ತದೆ. ನೂರಾರು ವಿಚಾರಗಳಿದ್ದರೂ, ಯಾವುದೂ ಅಷ್ಟಾಗಿ ತಲೆಯನ್ನು ಕೊರೆಯುವುದಿಲ್ಲ. ಕೈ ಹಿಡಿದ ಕೆಲಸದಲ್ಲಿಯೇ ಮುಂದುವರಿಯುವಂತೆ ಮಾಡುತ್ತದೆ. ಅದರ ಬಗ್ಗೆಯೇ ವಿಚಾರಿಸವಂತೆ ಮಾಡುತ್ತದೆ. ಆದರೆ, ಚಿರು ಸರ್ಜಾ ಬಾಳಲ್ಲಿ ಆಗಿದ್ದು ಮಾತ್ರ ದುರಂತ. ಆ ಸಾವಿನ ಹಿನ್ನೆಲೆಯನ್ನು ಕೆದಕಿದರೆ, ಅದಕ್ಕೆ ಲಾಕ್ಡೌನ್ ಅವಧಿಯೇ ಕಾರಣವಾ ಎಂಬ ಪ್ರಶ್ನೆ ಮೂಡದೇ ಇರದು!
ಒಂದು ವಿಚಾರವನ್ನು ನೀವು ಗಮನಿಸಿರಬಹುದು. ಸ್ಯಾಂಡಲ್ವುಡ್ನ ಸಾಕಷ್ಟು ಕಲಾವಿದರು, ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡುತ್ತಾರೆ. ಅದರಲ್ಲಿ ವರ್ಷಕ್ಕೆ ಅವರ ಒಂದು ಸಿನಿಮಾ ಬಿಡುಗಡೆ ಆಗುವುದೇ ಅನುಮಾನ. ಆದರೆ, ಚಿರು ಸರ್ಜಾ ವರ್ಷಕ್ಕೆ ಐದಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಆ ಪೈಕಿ ಇದೇ ವರ್ಷ ಅವರ ನಾಲ್ಕು ಸಿನಿಮಾಗಳಾದ ಸಿಂಗ, ಖಾಕಿ, ಆದ್ಯ, ಶಿವಾರ್ಜುನ ತೆರೆಕಂಡಿದ್ದವು. ಆದರೆ, ಲಾಕ್ಡೌನ್ ಆರಂಭವಾಗಿದ್ದರಿಂದ ಎಲ್ಲವನ್ನು ಬದಿಗೊತ್ತಿ ಮನೆಯಲ್ಲಿಯೇ ಉಳಿದು ಬಿಟ್ಟರು ಚಿರು.
ಹೀಗೆ ಹಲವು ವರ್ಷಗಳಿಂದ ಸದಾ ಚಟುವಟಿಕೆಯಿಂದ ಕೂಡಿದ್ದ ಚಿರು ಇಷ್ಟೊಂದು ಸುದೀರ್ಘ ಅವಧಿಯ ಬಿಡುವನ್ನು ಕರಿಯರ್ನಲ್ಲೇ ಈವರೆಗೂ ತೆಗೆದುಕೊಂಡಿರಲಿಲ್ಲ. ಒಮ್ಮಿಂದೊಮ್ಮೆ ಎಲ್ಲ ಕೆಲಸಗಳಿಂದ ದೂರ ಉಳಿದರು. ಮೂರು ತಿಂಗಳು ಸಿನಿಮಾ ಕೆಲಸಗಳನ್ನು ಕೈಬಿಟ್ಟರು. ಸದಾ ಜಿಮ್, ವರ್ಕೌಟ್ ಎನ್ನುತ್ತಿದ್ದ ಆಂಜನೇಯನ ಪರಮ ಭಕ್ತ ಚಿರು ಅದೆಲ್ಲವನ್ನು ಬದಿಗಿರಿಸಿದರು. ದೇಹಕ್ಕೆ ಸಿಗಬೇಕಿದ್ದ ವ್ಯಾಯಾಮ ನಿಂತು ಹೋಯಿತು. ಡಯಟ್ ಸೇರಿ ಆಹಾರ ಪದ್ಧತಿಯಲ್ಲೂ ಏರುಪೇರಾಯಿತು. ಅವರಿಗೇ ಗೊತ್ತಾಗದಂತೆ ಆರೋಗ್ಯ ಕ್ಷೀಣಿಸುತ್ತ ಬಂದಿತು. ಕೊನೆಗೆ ಜೂ. 7ರಂದು ಬಾಳಿ ಬದುಕಬೇಕಾದ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದರು.
ಒಟ್ಟಿನಲ್ಲಿ ಈ ಮೂರು ತಿಂಗಳ ಲಾಕ್ಡೌನ್ ಅವಧಿ, ಬಾರತೀಯ ಸಿನಿಮಾರಂಗಕ್ಕೆ ಮಾತ್ರ ದೊಡ್ಡ ಹೊಡೆತವನ್ನೇ ನೀಡಿದೆ. ಇರ್ಫಾನ್ ಖಾನ್, ರಿಷಿ ಕಪೂರ್, ಮೈಕಲ್ ಮಧು, ಬುಲೆಟ್ ಪ್ರಕಾಶ್, ಇದೀಗ ಚಿರು ಅವರನ್ನು ಬಲಿಪಡೆದುಕೊಂಡಿದೆ.