ಕೆಲಸದ ಸಂಸ್ಕೃತಿಯ ವಾಸ್ತವ

ವಿಜಯವಾಣಿ
Published on

ಪಾದರಕ್ಷೆ ಎಲ್ಲಿ ಚುಚ್ಚುತ್ತಿದೆ ಎಂಬುದು ಧರಿಸಿದವರಿಗೆ ಮಾತ್ರ ಗೊತ್ತಾಗುತ್ತಿರುತ್ತದೆ. ಖಾಸಗಿ ಕಂಪನಿಗಳ ಕಚೇರಿಗಳಲ್ಲಿ ಉದ್ಯೋಗಿಗಳು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳೇನು ಎಂಬುದು ಅನುಭವಿಸಿದವರಿಗೇ ಗೊತ್ತು. ಈ ಸತ್ಯವನ್ನು ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನ್ನಾ ಸೆಬಾಸ್ಟಿಯನ್​ಳ ಅಕಾಲಿಕ ಸಾವು ಮತ್ತೊಮ್ಮೆ ಬಯಲು ಮಾಡಿದೆ. ಕೇವಲ 26 ವರ್ಷ ವಯಸ್ಸಿನ ಚಾರ್ಟರ್ಡ್ ಅಕೌಂಟಂಟ್ ಅನ್ನಾಳ ವೃತ್ತಿಜೀವನದಲ್ಲಿ ಅದು ಮೊದಲನೇ ಉದ್ಯೋಗ. ಅಲ್ಲಿಗೆ ಸೇರಿದ 4 ತಿಂಗಳ ಅವಧಿಯಲ್ಲಿ ಆ ಯುವತಿ ಏನೇನು ಅನುಭವಿಸಿದಳು ಎಂಬುದನ್ನು ಆಕೆಯ ತಾಯಿಯು ಕಂಪನಿಯ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಮಾರ್ಚ್​ನಲ್ಲಷ್ಟೇ ಆ ಕಂಪನಿಯನ್ನು ಸೇರಿದ್ದ ಅನ್ನಾಗೆ ಅಲ್ಲಿನ ಕೆಲಸದ ‘ಸಂಸ್ಕೃತಿ’ಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ತೀವ್ರ ಕಷ್ಟಕರವಾಗಿ ಪರಿಣಮಿಸಿತ್ತು. ಇಡೀ ದಿನ ದುಡಿದರೂ ಕೆಲಸ ಮುಗಿಯುತ್ತಿರಲಿಲ್ಲ. ಟೀಮ್ ಲೀಡರ್​ಗಳು ಕೆಲವೊಮ್ಮೆ ರಾತ್ರಿಯೂ ಕೆಲಸ ವಹಿಸುತ್ತಿದ್ದರು. ಅದನ್ನು ಮುಗಿಸುವಷ್ಟೊತ್ತಿಗೆ ಬೆಳಕಾಗಿರುತ್ತಿತ್ತು. ಇದರಿಂದ ಆಕೆಯ ಆರೋಗ್ಯ ಹದಗೆಟ್ಟಿತ್ತು. ಈ ವಿಷಯವನ್ನು ಆಕೆ ತನ್ನ ಗೆಳತಿಯರಿಗೆ ಮತ್ತು ತಾಯಿಗೆ ಹೇಳಿಕೊಂಡಿದ್ದಳು. ಕಂಪನಿಯ ಆಡಳಿತ ಮಂಡಳಿಗೂ ವಿಷಯ ಗೊತ್ತಾಗಿತ್ತು.

ಆದರೂ ಯಾವುದೇ ಕ್ರಮ ಆಗಿಲ್ಲ. ಟೀಮ್ ಲೀಡರ್​ಗಳು ಮಾಡಿದ್ದೇ ಸರಿ ಎಂಬ ಭಾವನೆ ಆಡಳಿತ ಮಂಡಳಿಗೆ ಇದ್ದಂತಿದೆ. ಕೊನೆಗೊಂದು ದಿನ ಅನ್ನಾ ಕುಸಿದುಬಿದ್ದು ಮೃತಪಟ್ಟಿದ್ದಾಳೆ. ಅವಳ ಅಂತ್ಯಕ್ರಿಯೆಗೂ ಕಂಪನಿ ವತಿಯಿಂದ ಯಾರೊಬ್ಬರೂ ಬರಲಿಲ್ಲ ಎಂಬುದು ಇನ್ನೂ ಆಶ್ಚರ್ಯಕರ ಮತ್ತು ಅಮಾನವೀಯ ಅಂಶ. ಆಕೆಯ ಸಾವಿನ ಬಳಿಕ ಅದೇ ಕಂಪನಿಯ ಹಲವಾರು ಉದ್ಯೋಗಿಗಳು ತಮಗೂ ಅದೇ ರೀತಿಯ ಕಿರುಕುಳದ ಅನುಭವ ಆಗಿದೆ ಎಂಬ ವಿಷಯವನ್ನು ಹೊರಗೆಡವಿದ್ದಾರೆ. ಇದು ಆ ಕಂಪನಿಯೊಂದರ ಕತೆಯಲ್ಲ. ಬಹುತೇಕ ಕಂಪನಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಈ ರೀತಿಯ ಕೆಲಸದ ಕುಸಂಸ್ಕೃತಿ ಸಾಮಾನ್ಯವಾಗಿಬಿಟ್ಟಿದೆ.

ಯೂರೋಪ್, ಅಮೆರಿಕದಲ್ಲಿ ಮುಖ್ಯ ಕಚೇರಿ ಹೊಂದಿರುವ ಕಂಪನಿಗಳಿಗೆ ಅಲ್ಲಿ ಕಡಿಮೆ ಸಂಬಳಕ್ಕೆ ದುಡಿಯಲು ಜನ ಸಿಗುವುದಿಲ್ಲ. ಹಾಗಾಗಿ ಅವು ಭಾರತದತ್ತ ನೋಡುತ್ತವೆ. ಅವರು ಕೊಡುವ ಸಂಬಳ ಇಲ್ಲಿಯವರಿಗೆ ಜಾಸ್ತಿ ಎನ್ನಿಸಿದರೂ ಅವರ ದೃಷ್ಟಿಯಲ್ಲಿ ಅದು ಕಡಿಮೆಯೇ. ಆದರೂ ಸಿಕ್ಕಾಪಟ್ಟೆ ಕೆಲಸದ ಹೊರೆ ಹೊರಿಸುತ್ತಾರೆ. ಉದ್ಯೋಗಿಗಳ ಆರೋಗ್ಯ, ವೈಯಕ್ತಿಕ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ಮೊದಲೆಲ್ಲ ಕಚೇರಿಗಳಲ್ಲಿಯೇ ಕೆಲಸ ನಡೆಯುತ್ತಿತ್ತು.

ಕರೊನಾ ನಂತರದ ಕಾಲದಲ್ಲಿ ಬಹುತೇಕ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಕೆಲವು ಕಂಪನಿಗಳು ಒತ್ತಾಯಪೂರ್ವಕವಾಗಿ ಮನೆಯಿಂದ ಕೆಲಸ ಮಾಡಿಸುತ್ತಿವೆ. ಕಾರ್ವಿುಕ ಕಲ್ಯಾಣದ ನೀತಿ-ನಿಯಮಗಳು ಅನ್ವಯವಾಗದ ಹಾಗೆ ಗುತ್ತಿಗೆ ಒಪ್ಪಂದವನ್ನು ರೂಪಿಸಿಕೊಳ್ಳುತ್ತಿವೆ. ಇದು ಸರ್ಕಾರದ ಕಣ್ಣಿಗೆ ಮಣ್ಣೆರಚುವ ತಂತ್ರ ಮಾತ್ರವಲ್ಲ, ಸ್ವತಃ ತಮ್ಮ ಉದ್ಯೋಗಿಗಳಿಗೆ ಮಾಡುವ ಅನ್ಯಾಯ ಕೂಡ ಹೌದು. ಸರ್ಕಾರಗಳು ಸೂಕ್ತ ಕಾನೂನಿನ ಮೂಲಕ ಯುವಪೀಳಿಗೆಯ ರಕ್ಷಣೆಗೆ ಮುಂದಾಗಲು ಇದು ಸೂಕ್ತ ಸಮಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net