ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ: ಟೋಲ್ ಕಟ್ಟಿದರೂ ಹಲವೆಡೆ ಕಾಣದ ರಿಪೇರಿ; ಸವಾರಿ ಕಿರಿಕಿರಿ

Reality Check
ಮಂಗಳೂರು- ಬೆಂಗಳೂರು ಸಂರ್ಪಸುವ ಬಿ.ಸಿ.ರೋಡ್-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ- 75 ಕಾಮಗಾರಿ ನನೆಗುದಿಗೆ ಬಿದ್ದಿರುವ ಕಾರಣ ಈ ಮಾರ್ಗದ ಪ್ರಯಾಣ ದುಸ್ತರವಾಗಿದೆ.
Published on

| ಸತೀಶ್ ಕಂದಗಲ್​ಪುರ ಬೆಂಗಳೂರು

ಸೂಕ್ತ ನಿರ್ವಹಣೆ ಕೊರತೆ, ದುರಸ್ತಿ ಕಾಮಗಾರಿ ನಿರ್ಲಕ್ಷ್ಯದಂತಹ ವೈಫಲ್ಯಗಳಿಂದಾಗಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿವೆ. ವಾಹನ ಸವಾರರಿಂದ ಟೋಲ್ ಸಂಗ್ರಹಿಸಿದರೂ ಸಮರ್ಪಕ ಸೇವೆ ಒದಗಿಸದ ಪರಿಣಾಮ ಈ ಹೆದ್ದಾರಿಗಳಲ್ಲಿ ಓಡಾಡುವುದೇ ಸಾಹಸವಾಗಿದೆ. ರಸ್ತೆ, ಮೇಲ್ಸೇತುವೆ, ಕೆಳಸೇತುವೆ, ತಿರುವು, ಎತ್ತರಿಸಿದ ಮಾರ್ಗ, ಚಿಹ್ನೆಗಳ ನಿರ್ವಹಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಫಲವಾಗಿರುವುದರಿಂದ ಅಪಘಾತಗಳು ಹೆಚ್ಚುತ್ತಿದೆ. ರಾಜ್ಯಾದ್ಯಂತ ವಿಜಯವಾಣಿ ನಡೆಸಿರುವ ರಿಯಾಲಿಟಿ ಚೆಕ್​ನಲ್ಲಿ ಹೆದ್ದಾರಿಗಳ ದುರವಸ್ಥೆ ಬಯಲಾಗಿದೆ. ರಾಜ್ಯದಲ್ಲಿ 6,647.02 ಕಿ.ಮೀ ವ್ಯಾಪ್ತಿಯ 29 ರಾಷ್ಟ್ರೀಯ ಹೆದ್ದಾರಿಗಳಿವೆ. ಇವುಗಳ ನಿರ್ವಹಣೆಗೆ ಪ್ರತಿ ರಸ್ತೆಗೆ ವಾಹನ ಬಳಕೆದಾರರಿಂದ ಟೋಲ್ ಸಂಗ್ರಹಿಸಲಾಗುತ್ತದೆ. ಪ್ರತಿ 6 ತಿಂಗಳು, ವಾರ್ಷಿಕ, ಮೂರು ವರ್ಷ ಮತ್ತು 5 ವರ್ಷಕ್ಕೆ ಅನುಗುಣವಾಗಿ ರಸ್ತೆಗಳ ಕೆಲವು ಭಾಗಗಳನ್ನು ನಿರ್ವಹಣೆ ಮಾಡ ಬೇಕಿದೆ. ಡಾಂಬರೀಕರಣ, ರಸ್ತೆ ದೀಪ, ರಸ್ತೆಗಳ ತಡೆಗೋಡೆ, ಮೇಲ್ಸೇತುವೆಗಳು, ಕೆಳಸೇತುವೆ, ರಸ್ತೆ ಸೂಚಕಗಳು, ಪಾದಚಾರಿ ಮೇಲ್ಸೇತುವೆ ಗಳ ನಿರ್ವಹಣೆಯಲ್ಲಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದೆ.

ರಸ್ತೆಗಳ ಗೋಡೆಗಳಲ್ಲಿ ಗಿಡಗಳು ಬೆಳೆದುಕೊಂಡಿವೆ. ರಸ್ತೆ ಉಬ್ಬುಗಳು, ತಿರುವುಗಳು ಹಾಗೂ ಇತರ ಅಪಘಾತ ವಲಯಗಳಲ್ಲಿ ಸೂಚನಾ ಫಲಕ ಅಳವಡಿಸಿಲ್ಲ. ವಾಹನದ ಸಂಚಾರ ಮಿತಿಗಿಂತ ಅತಿವೇಗವಾಗಿ ಚಲಿಸುವುದರ ಪರಿಣಾಮ ಅಪಘಾತಗಳಾಗಿ ಪ್ರಾಣಹಾನಿಯುಂಟಾಗುತ್ತಿದೆ. ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಛತ್ತೀಸ್​ಗಢ ರಾಜ್ಯಗಳು ಅತಿವೇಗದಿಂದ ಆಗುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಟಾಪ್ 10 ಸ್ಥಾನ ಹೊಂದಿವೆ. ದೇಶದಲ್ಲಿ 2020ರಲ್ಲಿ ಒಟ್ಟು 3,54,796 ರಸ್ತೆ ಅಪಘಾತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 2,15,159 (ಶೇ.61) ಪ್ರಕರಣಗಳು ಅತಿ ವೇಗದ ಕಾರಣದಿಂದಾಗಿವೆ. ಕರ್ನಾಟಕದಲ್ಲಿ 2020ರಲ್ಲಿ 34,178 ಅಪಘಾತ ಸಂಭವಿಸಿದ್ದು, ಇದರಲ್ಲಿ 9,760 ಮಂದಿ ಸಾವನ್ನಪ್ಪಿದ್ದಾರೆ.

ತುರ್ತು ಆಗಬೇಕಾದ್ದೇನು?

  • ವಾರ್ಷಿಕ ಡಾಂಬರು, ರಸ್ತೆ ಸೂಚಕ, ಬಿಳಿ ಪಟ್ಟಿಗಳ ಬಳಿಯಬೇಕು
  • ರಸ್ತೆ ಸೇತುವೆ, ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ವಹಣೆ
  • ಅಪಘಾತ ವಲಯಗಳ ಪತ್ತೆ ಮತ್ತು ನಿವಾರಣಾ ಕಾರ್ಯಗಳು
  • ವೇಗದ ಮಿತಿ ಗಂಟೆಗೆ 80 ಕಿ.ಮೀ ಮಿತಿಗೊಳಿಸಲು ಕ್ರಮ
  • ಅತಿವೇಗದ ವಾಹನ ಪತ್ತೆಗೆ ಅಲ್ಲಲ್ಲಿ ಸಿಸಿಟಿವಿ ಅಳವಡಿಕೆ, ನೋಟಿಸ್ ಜಾರಿ
  • ತಗ್ಗಾದ ಸೋಲಾರ್ ಬ್ಲಿಂಕರ್, ರಬ್ಬರ್ ಸ್ಟ್ರಿಪ್ ಅಳವಡಿಕೆ
  • ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕ, ಬದಲಿ ಸುರಕ್ಷಿತ ಮಾರ್ಗ ವ್ಯವಸ್ಥೆ
  • ರಸ್ತೆ ನಿರ್ವಹಣೆ ಮಾಡದ ಗುತ್ತಿಗೆದಾರರನ್ನು ಕಪು್ಪಪಟ್ಟಿಗೆ ಸೇರಿಸುವುದು
  • ಗ್ರಾಮೀಣ ಪ್ರದೇಶದಲ್ಲಿ ಸರ್ವೀಸ್ ರಸ್ತೆಗಳ ನಿರ್ವಹಣೆ
  • ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ, ಅಪಘಾತ ನಿಯಂತ್ರಣಕ್ಕೆ ಕ್ರಮ
  • ಕೈಗೆತ್ತಿಕೊಂಡ ಕಾಮಗಾರಿ ಪೂರ್ಣಕ್ಕೆ ಹೆಚ್ಚಿನ ಆದ್ಯತೆ
  • ಸ್ಥಳೀಯ ಆಡಳಿತ ಸಂಸ್ಥೆಗಳೊಡನೆ ಹೊಂದಾಣಿಕೆ

ನಿರ್ಲಕ್ಷ್ಯದಿಂದ ಮೇಲ್ಸೇತುವೆ ಹಾಳು

ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೆಂಗಳೂರಿನ ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ 8.5 ಕಿ.ಮೀ ಉದ್ದವಿದೆ. ಅಮೆರಿಕ, ಇಂಗ್ಲೆಂಡ್ ಮತ್ತು ಇತರ ಮುಂದುವರಿದ ರಾಷ್ಟ್ರದಲ್ಲಿ ನಿರ್ವಣವಾಗುವ ‘ಎಕ್ಸ್​ಟ್ರನಲ್ ಪೋಸ್ಟ್ ಟೆನ್ಸಿಂಗ್’ ವಿಶೇಷ ಮಾದರಿಯ ಕೇಬಲ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಮೇಲ್ಸೇತುವೆಯನ್ನು ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮತ್ತು ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಸೇರಿ 2 ಕಡೆಗಳಲ್ಲಿ ನಿರ್ವಿುಸಲಾಗಿದೆ. ಆದರೆ, ವಾರ್ಷಿಕ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದರ ಫಲವೇ ಪೀಣ್ಯ ಮೇಲ್ಸೇತುವೆ ದೊಡ್ಡ ಪ್ರಮಾಣದಲ್ಲಿ ದುರಸ್ತಿಗೆ ಬರಲು ಕಾರಣವಾಗಿದೆ.

ಹೆದ್ದಾರಿ ಗೋಡೆಗಳಲ್ಲಿ ಮರ: ಗ್ರಾಮೀಣ ಪ್ರದೇಶಗಳಲ್ಲಿ ಹೆದ್ದಾರಿ ಹಾದು ಹೋಗುತ್ತಿದ್ದರೆ ಅಲ್ಲಿ ಮೇಲ್ಸೇತುವೆ ಮಾಡಲಾಗುತ್ತದೆ. ಸೇತುವೆಗೆ ಇಳಿಜಾರಿಗೆ ಮಣ್ಣು ಹಾಕಿ ಇಕ್ಕೆಲಗಳಲ್ಲಿ ಕಾಂಕ್ರೀಟ್ ಜಾಯಿಂಟ್ ಬ್ಲಾಕ್ ಅಳವಡಿಕೆ ಮಾಡಲಾಗಿರುತ್ತದೆ. ಈ ಕಾಂಕ್ರೀಟ್ ಕಲ್ಲುಗಳ ಜೋಡಣೆಯ ನಡುವೆ ಮರ ಗಿಡಗಳು ಬೆಳೆದುಕೊಂಡಿವೆ. ಈ ಮರ-ಗಿಡಗಳ ಮೂಲಕ ಮಳೆಯ ನೀರು ಆಳಕ್ಕೆ ಇಳಿದಲ್ಲಿ ಇಡೀ ರಸ್ತೆಯೇ ಹಾಳಾಗುತ್ತದೆ. ಆದರೆ ಇದನ್ನು ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದ ಗುತ್ತಿಗೆ ಸಂಸ್ಥೆಗಳಾಗಲಿ ನಿರ್ವಹಣೆ ಮಾಡುತ್ತಿಲ್ಲ. ಇನ್ನು ರಸ್ತೆ ನಿರ್ವಿುಸಿದ ಗುತ್ತಿಗೆ ಸಂಸ್ಥೆಗಳು ಕಳಪೆ ಕಾಮಗಾರಿ ಮತ್ತು ನಿರ್ವಹಣೆ ನಿರ್ಲಕ್ಷ್ಯ ಮಾಡಿದಲ್ಲಿ ಕಪು್ಪಪಟ್ಟಿಗೆ ಸೇರಿಸಬೇಕು. 2016 ರಿಂದ 2022ರ ಜ.30ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 63 ಗುತ್ತಿಗೆ ಸಂಸ್ಥೆಗಳನ್ನು ವಿವಿಧ ಅವಧಿಯವರೆಗೆ ಕಪು್ಪಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ದುರಸ್ತಿ ಕಾರ್ಯದಿಂದ ಸಮಸ್ಯೆಯಾಗಿದೆ. ಶೀಘ್ರ ದುರಸ್ತಿ ಮಾಡಿ ಲಘುವಾಹನಗಳ ಸಂಚಾರಕ್ಕೆ ಸೂಚಿಸಲಾಗಿದೆ. ಕಳಪೆ ಕಾಮಗಾರಿ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ಹೊಸದಾಗಿಯೇ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ರಿಯಾಲಿಟಿ ಚೆಕ್​ನಲ್ಲಿ ಕಂಡಿದ್ದೇನು?

  • ಮಳೆಗಾಲದಲ್ಲಿ ಹೆದ್ದಾರಿಗಳು ಕಿತ್ತು ಹೋಗಿದ್ದರೂ ಕೆಲವೆಡೆ ಡಾಂಬರೀಕರಣ ಆಗಿಲ್ಲ
  • ಗುಂಡಿ ಬಿದ್ದ ರಸ್ತೆಗಳಲ್ಲಿ ಲಘು ವಾಹನಗಳ ಅಪಘಾತ
  • ಗ್ರಾಮೀಣ ಭಾಗದಲ್ಲಿ ಪಾದಚಾರಿ ಮೇಲ್ಸೇತುವೆಗಳ ಕೊರತೆ, ರಸ್ತೆಗಳಿಗೆ ತಿರುವು, ಎತ್ತರ, ನಿಲುಗಡೆ, ರಸ್ತೆಯ ಅಂಚುಗಳ ಗುರುತು ಅಳಿಸಿ ಹೋಗಿವೆ
  • ರಸ್ತೆ ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚಳ ಆಗಬೇಕಿದೆ, ಅತಿವೇಗದ ವಾಹನ ಪತ್ತೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ
  • ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅತ್ಯಧಿಕ ಅಪಘಾತ ಸಂಭವಿಸುತ್ತಿವೆ, ಗ್ರಾಮೀಣ ಪ್ರದೇಶಗಳಲ್ಲಿ ಸರ್ವೀಸ್ ರಸ್ತೆಗಳು ಹಾಳಾಗಿವೆ.
  • ರಸ್ತೆ ಸೇತುವೆ, ಮೇಲ್ಸೇತುವೆ ಮತ್ತು ಕೆಳ ಸೇತುವೆಗಳು ನಿರ್ವಹಣೆ ಕೊರತೆಯಿಂದ ಸೋರುತ್ತಿವೆ, ಅಪಘಾತ ವಲಯಗಳ ಸರಿಪಡಿಸುವಿಕೆ ಕಾರ್ಯ ನಿಧಾನಗತಿಯಲ್ಲಿದೆ
  • ಗ್ರಾಮೀಣ ಪ್ರದೇಶಗಳಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳು ಅಪಘಾತದ ತಾಣವಾಗಿವೆ,
  • ವಿಶ್ರಾಂತಿ ಪಡೆಯಲು ರಸ್ತೆ ಬದಿಯಲ್ಲಿ ಪ್ರತ್ಯೇಕ ಸ್ಥಳಗಳನ್ನು ಮಾಡಿಲ್ಲ
551 ಅಪಘಾತ ವಲಯ: ಕೇಂದ್ರ ಸಾರಿಗೆ ಸಚಿವಾಲಯದ 2018-20ರ ಮಾಹಿತಿ ಪ್ರಕಾರ ದೇಶಾದ್ಯಂತ 5,803 ಅಪಘಾತ ವಲಯಗಳಿವೆ (ಬ್ಲಾಕ್ ಸ್ಪಾಟ್). ಈ ಪೈಕಿ ಕರ್ನಾಟಕ ಇಂತಹ 551 ಪ್ರದೇಶ ಹೊಂದಿದ್ದು, 3ನೇ ಸ್ಥಾನದಲ್ಲಿದೆ. ತಮಿಳುನಾಡು (748), ಪಶ್ಚಿಮ ಬಂಗಾಳ (701) ಮೊದಲೆರಡು ಸ್ಥಾನಗಳಲ್ಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net