

ಬೆಂಗಳೂರು: ಮುಂಗಾರು, ಹಿಂಗಾರಿನ ಅವಧಿ ಮುಗಿದರೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನ್ನದಾತರೀಗ ಕಂಗಾಲಾಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ರೈತರು ಸಾಲ, ಸೋಲ ಮಾಡಿ ಬೆಳೆದಿದ್ದ ಬೆಳೆಗಳೆಲ್ಲ ನಷ್ಟವಾಗಿದೆ. ಕೈಗೆ ಬಂದಿದ್ದ ರಾಗಿ, ಜೋಳ, ಭತ್ತ, ಈರುಳ್ಳಿ, ಕಾಫಿ, ಅಡಕೆ ಸೇರಿದಂತೆ ಅಪಾರ ಫಸಲು ಬಾಯಿಗೆ ಸಿಗದಂತೆ ಕೊಳೆತು ಹೋಗುತ್ತಿದೆ. ರಾಜ್ಯಾದ್ಯಂತ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಅಕಾಲಿಕ ಮಳೆಯಿಂದಾದ ಬೆಳೆಹಾನಿಯ ಸಮಗ್ರ ಚಿತ್ರಣ ಸಿಕ್ಕಿದೆ.
ಅಡಕೆ ಬೆಳೆಗಾರ ಹೈರಾಣ: ಸತತ ಮಳೆಯಿಂದ ಪ್ರಸಕ್ತ ವರ್ಷ ಅಡಕೆಗೆ ಕೊಳೆ ರೋಗ ಬಾಧೆ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಇದ್ದು, ಶೇ.30 ಅಡಕೆಗೆ ರೋಗದ ಭೀತಿ ಎದುರಾಗಿದೆ. ಮೋಡ ಕವಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆಯಿಂದ ಕಟಾವು ಮಾಡಿದ ಅಡಕೆಯನ್ನು ಒಣಗಿಸಲು ರೈತರು ಹರಸಾಹಸ ಪಡುವಂತಾಗಿದೆ. ಗೇಣಿದಾರರು (ಚೇಣಿ) ಕೂಡ ಅಡಕೆ ಕಟಾವಿಗೆ ಮುಂದಾಗುತ್ತಿಲ್ಲ. ಇದರಿಂದ ಮರದಲ್ಲೇ ಹಣ್ಣಾಗುತ್ತಿರುವ ಅಡಕೆ ಗೋಟಾಗಿ ಉದುರುತ್ತಿವೆ. ಕೆಲವೆಡೆ ಕೆಳಗೆ ಬಿದ್ದ ಗೋಟುಗಳು ರೈತರ ಕೈಗೆ ಸಿಗದೆ ಮೊಳಕೆಯೊಡಲಾರಂಭಿಸಿವೆ. ಲಕ್ಷಾಂತರ ರೂ.ಆದಾಯದ ನಿರೀಕ್ಷೆ ಯಲ್ಲಿದ್ದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶುಂಠಿ ಬೆಳೆಗೂ ಆಪತ್ತು: ಮಲೆನಾಡಿನಲ್ಲಿ ನಾಲ್ಕೈದು ವರ್ಷ ಗಳಿಂದ ಅಡಕೆ ಜತೆಗೆ ವಾಣಿಜ್ಯ ಬೆಳೆಯಾಗಿ ಶುಂಠಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಪ್ರಸ್ತುತ ಶಿವಮೊಗ್ಗದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದು, ಈ ಬಾರಿ ಅಧಿಕ ಮಳೆಯಿಂದ ಬಹುತೇಕ ನಾಶವಾಗಿವೆ. ಕೊಳೆ, ದಂಟು ಕೊಳೆ, ಬಾಡು ರೋಗ ಬಿದ್ದು ರೈತರು ಲಕ್ಷಾಂತರ ರೂ. ಅನುಭವಿಸುವಂತಾಗಿದೆ. ರೋಗದಿಂದ ಸಂರಕ್ಷಿಸಲಾದ ಶುಂಠಿ ಈಗ ಕೀಳಬೇಕಿದೆ. ಇದೇ ರೀತಿ ಮಳೆ ಮುಂದುವರಿದರೆ ಮುಕ್ಕಾಲು ಭಾಗ ಶುಂಠಿಯನ್ನು ರೈತರು ಹೊಲದಲ್ಲೇ ಕಳೆದುಕೊಳ್ಳಲಿದ್ದಾರೆ.
ನೆಲ ಕಚ್ಚಿದ ಭತ್ತ: ಆಗಸ್ಟ್ ಅಂತ್ಯದೊಳಗೆ ಭತ್ತ ನಾಟಿ ಪೂರ್ಣಗೊಂಡಿದ್ದು, ಅದರಲ್ಲಿ ಅರ್ಧದಷ್ಟು ಭತ್ತ ಕಟಾವಿಗೆ ಬಂದಿದೆ. ಆದರೆ ಮಳೆ ಕಾಟದಿಂದ ರೈತರು ದಿನಗಳನ್ನು ದೂಡುತ್ತಿದ್ದಾರೆ. ಒಂದೆಡೆ ಸೂಕ್ತ ಬೆಲೆಯೂ ಇಲ್ಲದೆ ಮತ್ತೊಂದೆಡೆ ಫಸಲೂ ಸಿಗದೇ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕಟಾವು ಮಾಡಿದರೂ ಒಣಗಿಸಲು ಮತ್ತು ಸಂಗ್ರಹಿಸಲು ಜಾಗದ ಕೊರತೆಯಿದೆ. ಹೀಗಾಗಿ ಕಟಾವು ಮಾಡದೆ ಕೈಕಟ್ಟಿ ಕುಳಿತಿದ್ದಾರೆ. ಕಟಾವು ಮಾಡಿದ ಬಳಿಕ ಮಳೆಗೆ ತೋಯ್ದರೆ ಇಷ್ಟು ದಿನದ ಶ್ರಮ ನೀರಿನಲ್ಲಿ ಮಾಡಿದ ಹೋಮದಂತಾಗಲಿದೆ ಎಂಬುದು ರೈತರ ಭಯವಾಗಿದೆ.
ಯಾವ ಬೆಳೆಗೆ ಹಾನಿ?: ರಾಗಿ, ಜೋಳ, ಭತ್ತ, ಈರುಳ್ಳಿ, ಕಾಫಿ, ಅಡಕೆ, ಕಾಳುಮೆಣಸು, ಬಾಳೆ, ಪಪ್ಪಾಯ, ಆಲೂಗಡ್ಡೆ, ಮೆಣಸಿನಕಾಯಿ, ಹೆಸರು, ಗೋವಿನ ಜೋಳ, ಸೋಯಾಬೀನ್, ತೊಗರಿ, ಅಲಸಂಧೆ, ಶೇಂಗಾ ಮತ್ತು ಹತ್ತಿ
ಮೆಕ್ಕೆಜೋಳ ಹಾಗೂ ಭತ್ತ ಕಟಾವಿಗೆ ಬಂದಿದೆ. ಮಳೆ ಇರುವ ಕಾರಣ ರೈತರು ಕೋಯ್ಲು ಮುಂದೂಡುತ್ತಿದ್ದಾರೆ. ದೀಪಾವಳಿ ಬಳಿಕ ಮೆಕ್ಕೆಜೋಳ ಕಟಾವು ಶುರುವಾಗಬೇಕಿತ್ತು. ಆದರೆ ಮಳೆ, ಮೋಡ ಕವಿದ ವಾತಾವರಣದಿಂದ ಅದು ಸಾಧ್ಯವಾಗುತ್ತಿಲ್ಲ. ಭತ್ತ ಕಟಾವಿಗೆ ಇನ್ನೂ ವಾರ ಸಮಯಾವಕಾಶವಿದ್ದು ಮಳೆ ಕಡಿಮೆ ಆದ ಬಳಿಕ ಕಟಾವು ಮುಂದುವರಿಯಲಿದೆ.
| ಡಾ. ಎಂ.ಕಿರಣ್ಕುಮಾರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ