

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯನ್ನು ದುಷ್ಕರ್ಮಿಗಳು ಕಾರಿನೊಳಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಯಲಹಂಕದ ಬಾಗಲೂರು ಕ್ರಾಸ್ ಬಳಿ ನಡೆದಿದೆ.
ಆಂಧ್ರ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಯಾದವ್ (55) ಕೊಲೆಯಾದವರು.
ಮಾರುತಿ ನಗರದಲ್ಲಿ ವಾಸವಾಗಿದ್ದ ಕೃಷ್ಣ ಯಾದವ್ ಅವರು ಬಾಗಲೂರು ಕ್ರಾಸ್ ಬಳಿ ಕಚೇರಿ ಹೊಂದಿದ್ದು, ಸ್ನೇಹಿತರ ಜತೆ ಹೊರಗೆ ಹೋಗುವಾದಾಗಿ ಮನೆಯವರಿಗೆ ತಿಳಿಸಿ ಸೋಮವಾರ ಸಂಜೆ ೬.೩೦ ರಲ್ಲಿ ತಮ್ಮ ಶ್‌ಟಿ ಕಾರನ್ನು ತೆಗೆದುಕೊಂಡು ಹೊರಗೆ ಹೋಗಿದ್ದು, ರಾತ್ರಿಯಾದರೂ ಮನೆಗೆ ಹಿಂದಿರುಗಿಲ್ಲ. ಮಂಗಳವಾರ ಬೆಳಗ್ಗೆ ಬಾಗಲೂರು ಕ್ರಾಸ್‌ನ ಫುಟ್‌ಪಾತ್ ಬಳಿ ಅನುಮಾನಸ್ಪದವಾಗಿ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ, ವ್ಯಕ್ತಿಯ ಶವ ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಯಲಹಂಕ ಠಾಣಾ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಕಾರಿನ ಮುಂಭಾಗದ ಸೀಟಿನಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿರುವುದು ಕಂಡು ಬಂದಿದೆ. ಕೊಲೆಯಾಗಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇವರು ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಯಾದವ್ ಎಂಬುದು ಗೊತ್ತಾಗಿದೆ.
ಚಾಕುವಿನಿಂದ ಇರಿದು ಕೊಲೆ!
ಈ ಉದ್ಯಮಿಯನ್ನು ಕಾರಿನೊಳಗೆ ದುಷ್ಕರ್ಮಿಗಳು ಚಾಕುವಿನಿಂದ ಕುತ್ತಿಗೆ, ಎದೆ ಭಾಗದಲ್ಲಿ ಇರಿದು ಕೊಲೆ ಮಾಡಿರುವುದು ಮೃತದೇಹ ಪರಿಶೀಲನೆ ವೇಳೆ ಕಂಡಿಬಂದಿದೆ. ೧೧.೩೦ ರ ಸುಮಾರಿಗೆ ಕೃಷ್ಣಯಾದವ್ ಸ್ವತಃ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವುದನ್ನು ಕೃಷ್ಣಯಾದವ್ ಅವರಿಗೆ ಪರಿಚಯವಿರುವ ಒಬ್ಬರು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ೧೨.೩೦ ರಿಂದ ೧.೩೦ ರ ಸಮಯದಲ್ಲಿ ದುಷ್ಕರ್ಮಿಗಳು ಕಾರನ್ನು ಬಾಗಲೂರು ಕ್ರಾಸ್ ಬಳಿ ತಂದು ನಿಲ್ಲಿಸಿರುವುದು ಕಂಡುಬಂದಿದೆ. ಆ ಸಮಯದಲ್ಲಿ ೩ ಜನರು ಕೃಷ್ಣಯಾದವ್ ಅವರ ಜತೆಗೆ ಇರುವುದನ್ನು ಸ್ಥಳೀಯರು ನೋಡಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಜಾಗದಲ್ಲಿ ದುಪ್ಪಟ ಪತ್ತೆ:
ಉದ್ಯಮಿಯನ್ನು ವೃತ್ತಿ ವೈಷಮ್ಯದಿಂದಲೋ ಹತ್ಯೆ ಮಾಡಿರುವ ಶಂಕೆ ಇದೆ. ಮತ್ತೊಂದೆಡೆ
ಕೊಲೆ ಸ್ಥಳದಲ್ಲಿ ಮಹಿಳೆಯ ದುಪ್ಪಟ ಪತ್ತೆಯಾಗಿದ್ದು, ಹೆಣ್ಣಿನ ವಿಚಾರಕ್ಕೆ ಏನಾದರೂ ಕೊಲೆ ಮಾಡಲಾಗಿದ್ದಿಯೇ ಸೇರಿದಂತೆ ಎಲ್ಲಾ ಆಯಾಮದಲ್ಲಿ ತನಿಖೆ ಕೈಗೊಳ್ಳಲಾಗಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.