ಸರ್ಕಾರಿ ಜಮೀನು ಕಬಳಿಸಿರುವ ಭೂಗಳ್ಳರಿಗೆ ಬಿಗ್ ಶಾಕ್: ಅಕ್ರಮ ಪ್ರಕರಣ ಎಸಿಬಿ ತನಿಖೆಗೆ..

CM state
Published on

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ಹಕ್ಕು ಸ್ವಾಧೀನ ಪಡೆದು ಕಬಳಿಸಿರುವ ಪ್ರಕರಣಗಳನ್ನು ಎಸಿಬಿಗೆ ವಹಿಸುವುದಾಗಿ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದ್ದು, ಭೂಗಳ್ಳರಿಗೆ ನಡುಕ ಹುಟ್ಟಿಸಿದೆ. ವಿಧಾನಸಭೆಯಲ್ಲಿ ನಿಯಮ 69ರಡಿ ಜೆಡಿಎಸ್​ನ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ಭೂ ಮಾಫಿಯಾ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭೂಗಳ್ಳರನ್ನು ಹೆಡಮುರಿ ಕಟ್ಟುವುದಾಗಿ ಗುಡುಗಿದರು. ಅಲ್ಲದೆ, ಬೆಂಗಳೂರು ಉತ್ತರ ವಿಭಾಗದ ಸಹಾಯಕ ಆಯುಕ್ತ ಕೆ. ರಂಗನಾಥ್ ಅವರನ್ನು ತಕ್ಷಣ ಅಮಾನತು ಮಾಡುವುದಾಗಿ ಪ್ರಕಟಿಸಿ ಎಚ್ಚರಿಕೆ ಸಂದೇಶ ರವಾನಿಸಿದರು.

ಸಹಾಯಕ ಆಯುಕ್ತರು ಸೇರಿ ವಿವಿಧ ಅಧಿಕಾರಿಗಳು ತಮಗೆ ಇರುವ ಅರೆ ನ್ಯಾಯಿಕ ಅಧಿಕಾರ ಬಳಸಿಕೊಂಡು ಅನೇಕ ಅಕ್ರಮ ಎಸಗಿರುವ ಪ್ರಕರಣಗಳಿವೆ. ಆದ್ದರಿಂದ ಅರೆ ನ್ಯಾಯಿಕ ಅಧಿಕಾರ ತಿದ್ದುಪಡಿ ಮಾಡುವ ಕುರಿತು ಚಿಂತನೆ ನಡೆಸುವುದಾಗಿ ಹೇಳುವ ಮೂಲಕ ಬೊಮ್ಮಾಯಿ ಅಧಿಕಾರಿಗಳಿಗೆ ಚಾಟಿ ಬೀಸಿದರು. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಹಕ್ಕು ಹೊಂದಿರುವ ಇತ್ತೀಚಿನ ಎಲ್ಲ ಪ್ರಕರಣಗಳನ್ನು ಹಾಗೂ ಸರ್ಕಾರಿ ಸ್ವತ್ತನ್ನು ವೈಯಕ್ತಿಕ ಹೆಸರಿಗೆ ವರ್ಗಾಯಿಸಿಕೊಂಡ ಈಚಿನ ಎಲ್ಲ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ದಳ ನೇಮಕ ಮಾಡುತ್ತೇವೆ. ಅಂತಹ ಪ್ರಕರಣಗಳಲ್ಲಿ ಶಾಮೀಲಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕೋರ್ಟ್ ಆದೇಶದಿಂದಲೂ ಅಡ್ಡಿ: ಭೂಮಿ ಬೆಲೆ ಹೆಚ್ಚಾದಾಗಿನಿಂದ ನಕಲಿ ದಾಖಲೆಗಳ ಸೃಷ್ಟಿ ಹೆಚ್ಚಿದೆ. ಹಲವು ಪ್ರಕರಣಗಳು ದಾಖಲಾಗಿವೆ. ಕೇಸ್ ದಾಖಲಾದರೂ ಕೋರ್ಟ್​ನಿಂದ ತಡೆಯಾಜ್ಞೆ ಆದೇಶ ತರುತ್ತಾರೆ. ಅಧಿಕಾರಿಗಳು ಕೋರ್ಟ್ ಆದೇಶದಂತೆ ನಡೆದುಕೊಂಡಿದ್ದೇವೆ ಎನ್ನುತ್ತಾರೆ. ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಸಬೂಬು ಹೇಳುತ್ತಾರೆ. ಇದೊಂದು ವ್ಯವಸ್ಥಿತ ಜಾಲ. ಕೆಲ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಆಸೆ, ಆಮಿಷಗಳಿಗೆ ಅಧಿಕಾರಿಗಳು ಬಲಿಯಾಗುತ್ತಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಈ ಪ್ರಕರಣಗಳು ಜಾಸ್ತಿ. ಬೇರೆ ಕಡೆಯೂ ಭೂಗಳ್ಳತನ ಇದೆ. ಆದರೆ ಇಷ್ಟೊಂದು ಇಲ್ಲ ಎಂದು ಬೊಮ್ಮಾಯಿ ಹೇಳಿದರು. ಶಾಸಕ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿರುವ ಇತರೆ ಪ್ರಕರಣಗಳನ್ನು ಕೂಡ ಎಸಿಬಿ ತನಿಖೆಗೆ ಒಳಪಡಿಸಲಾಗುವುದು. ಜತೆಗೆ ವಿಶೇಷ ಅಭಿಯಾನ ಮಾಡಿ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಸ್ವತ್ತನ್ನು ವೈಯಕ್ತಿಕ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿರುವ ಪ್ರಕರಣಗಳನ್ನು ಎಸ್​ಐಟಿ ಗಂಭೀರವಾಗಿ ಪರಿಗಣಿಸಲಿದೆ ಎಂದರು.

ಹೊಸ ಮಾರ್ಗಸೂಚಿ ಮಾಡುತ್ತೇವೆ: ಸರ್ಕಾರಿ ಭೂಮಿ ನೀಡುವ ವಿಚಾರದಲ್ಲಿ ಮಾರ್ಗಸೂಚಿಯನ್ನೂ ಮಾಡುತ್ತೇವೆ. ಶಾಸಕ ಎ.ಟಿ.ರಾಮಸ್ವಾಮಿ ಅವರು ಪ್ರಾಮಾಣಿಕತೆ, ನಿಷ್ಠೆಯಿಂದ ಭೂಗಳ್ಳರನ್ನು ಮಟ್ಟ ಹಾಕಲು ಪಣ ತೊಟ್ಟಿದ್ದಾರೆ. ಅವರ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದರು.

5 ಲಕ್ಷ ಕೋಟಿ ರೂ. ಸ್ವತ್ತು ಭೂಗಳ್ಳರ ಪಾಲು!: 5 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಭೂಗಳ್ಳರ ಪಾಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ನುಂಗಿ ನೀರು ಕುಡಿದಿದ್ದಾರೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಇಂತಹ ರಾಕ್ಷಸರ ಹಾವಳಿ ನಿಯಂತ್ರಿಸದೇ ಇದ್ದರೆ ರಾಮರಾಜ್ಯ ಹೇಗೆ ಸಾಧ್ಯ ಎಂದು ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು. ಭೂ ಮಾಫಿಯಾಕ್ಕೆ ಬಲಿಹಾಕಿ ಸರ್ಕಾರದ ಸ್ವತ್ತು ವಶಪಡಿಸಿಕೊಂಡು ಹರಾಜು ಹಾಕಿದರೆ ಎರಡು ವರ್ಷದ ಬಜೆಟ್​ಗೆ ಸಮನಾಗುವಷ್ಟು ಅಂದರೆ ಸುಮಾರು 5 ಲಕ್ಷ ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುತ್ತದೆ ಎಂದು ಗಮನ ಸೆಳೆದರು.

ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ: ಭೂ ಕಬಳಿಕೆ ಜಾಲ ಭೇದಿಸುತ್ತೇವೆ. ಇದಕ್ಕೊಂದು ಅಂತ್ಯ ಕಾಣಿಸದೇ ಬಿಡುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿಯೇ ತೀರುತ್ತೇವೆ ಎಂದು ಹೇಳಿದರು. ಸದನದಲ್ಲಿ ಪ್ರಸ್ತಾಪವಾಗಿರುವ ಪ್ರಕರಣಗಳು ಮಾತ್ರವಲ್ಲ, ತರುವಾಯ ನನ್ನ ಗಮನಕ್ಕೆ ತರುವ ಎಲ್ಲ ಪ್ರಕರಣಗಳನ್ನೂ 24 ಗಂಟೆ ಒಳಗೆ ತನಿಖೆಗೆ ಆದೇಶಿಸುತ್ತೇನೆ. ಅಧಿಕಾರಿಗಳು ಮತ್ತು ಭೂ ಮಾಫಿಯಾ ನಡುವಿನ ನಂಟನ್ನು ಕಡಿದು ಹಾಕುತ್ತೇವೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗುವುದನ್ನು ತಡೆಯುತ್ತೇವೆ ಎಂದು ಬೊಮ್ಮಾಯಿ ಶಪಥ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net