ಕಟ್ಟಡದಿಂದ ಬಿದ್ದು ಉದ್ಯಮಿ ಸಾವು: ಮೊದಲ ಪತ್ನಿಯಿಂದ 2ನೇ ಪತ್ನಿ ವಿರುದ್ಧ ಗಂಭೀರ ಆರೋಪ, ದೂರು ದಾಖಲು

Bengaluru Businessman
Published on

ಬೆಂಗಳೂರು: ಉದ್ಯಮಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದ್ದು, ಸಾವಿನ ಬಗ್ಗೆ ಅನುಮಾನವೂ ವ್ಯಕ್ತವಾಗಿದೆ.

ಮಾರಾಂಜಿನಪ್ಪ (62) ಮೃತ ದುರ್ದೈವಿ. ಎರಡನೇ ಪತ್ನಿ ಗೀತಾ ಮನೆಯಿಂದ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಇಂದು ಮುಂಜಾನೆ 3 ಗಂಟೆಗೆ ನಡೆದಿದೆ. ಕಟ್ಟಡದಿಂದ ಬಿದ್ದ ಉದ್ಯಮಿಯನ್ನು ಗೀತಾ ಅವರೇ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಾವಿನ ಬಗ್ಗೆ ಮಾರಾಂಜಿನಪ್ಪ ಅವರ ಮೊದಲ ಪತ್ನಿ ಉಮಾದೇವಿ ಅನುಮಾನ ವ್ಯಕ್ತಪಡಿಸಿ, ಅನ್ನಪೂರ್ಣೇಶ್ವರಿ ನಗರದಲ್ಲಿ ಗೀತಾ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ಪತಿಯ ಮೈ ಮೇಲೆ ಕಚ್ವಿರುವುದು, ಹೊಡೆದಿರುವ ಗಾಯಗಳಿವೆ. ನನ್ನ ಗಂಡನನ್ನು ಹೊಡೆದು ಕೊಲೆ ಮಾಡಿರುವ ಗೀತಾ ವಿರುದ್ದ ಕ್ರಮ ಕೈಗೊಳ್ಳಿ ಎಂದು ಆರೋಪಿಸಿ ಮೊದಲ ಪತ್ನಿ ಉಮಾದೇವಿ ದೂರು ನೀಡಿದ್ದಾರೆ.

ಮಾರಾಂಜಿನಪ್ಪ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಮೊದಲ ಹೆಂಡತಿ ಬಾಗಲಕುಂಟೆಯಲ್ಲಿ ವಾಸವಾಗಿದ್ದರು. ಎರಡನೇ ಪತ್ನಿ ಅನ್ನಪೂರ್ಣೇಶ್ವರಿ ನಗರದಲ್ಲಿ ವಾಸ‌ವಾಗಿದ್ದರು. ನಿನ್ನೆ ರಾತ್ರಿ ಎರಡನೇ ಪತ್ನಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಕುಡಿದ ಮತ್ತಿನಲ್ಲಿದ್ದ ಮಾರಾಂಜಿನಪ್ಪ ಬೆಳಗ್ಗೆ 3 ಗಂಟೆ ವೇಳೆಗೆ ಮಹಡಿಯಿಂದ ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಅವರನ್ನು ಎರಡನೇ ಪತ್ನಿ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಇದು ಆಕಸ್ಮಿಕವಲ್ಲ ಕೊಲೆ ಎಂದು ಮೊದಲ ಪತ್ನಿ ದೂರು ನೀಡಿದ್ದಾರೆ. ಆದರೆ, ವೈದ್ಯರ ಪ್ರಾಥಮಿಕ ವರದಿಯಲ್ಲಿ ಆಕಸ್ಮಿಕವಾಗಿ ಬಿದ್ದಿರುವ ಬಗ್ಗೆ ಉಲ್ಲೇಖವಾಗಿದೆ.

ಸದ್ಯ ಉಮಾದೇವಿ ನೀಡಿರುವ ದೂರಿನ ಆಧಾರದ ಮೇಲೆ ಗೀತಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net