

ಬೆಂಗಳೂರು: ರಾಜಕೀಯವಾಗಿ ಪಕ್ಷದ ಸಂಘಟನೆ ಬಲಪಡಿಸಲು ಎಲ್ಲರಿಗೂ ಅಧಿಕಾರದ ಸ್ಥಾನಮಾನ ಸಿಗಬೇಕು. ಪಕ್ಷದ ಹೈಕಮಾಂಡ್ ಬಯಸಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧವೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ತಲಾ ಎರಡೂವರೆ ವರ್ಷಗಳಿಗೆ ಅಧಿಕಾರ ಹಂಚಿಕೆಯಾಗಿದೆಯೆ ? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಮನೆಯ ವಿಚಾರ ಹೊರಗೆ ಚರ್ಚಿಸಲಾಗದು. ಆದರೆ ದೆಹಲಿಯಲ್ಲಿ ಹೈಕಮಾಂಡ್ ಕರೆದ ವೇಳೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿರುವೆ.
ನಾಲ್ಕೈದು ಬಾರಿ ಶಾಸಕರಾದವರಿಗೆ ಇನ್ನೂ ಸಚಿವ ಸ್ಥಾನ ಸಿಕ್ಕಿಲ್ಲ. ಸಚಿವ ಸ್ಥಾನ ಬಿಟ್ಟು ಕೊಡುವುದಕ್ಕೆ ನನ್ನ ಅಭ್ಯಂತರವೇನಿಲ್ಲ. ಒಟ್ಟಿನಲ್ಲಿ ಪಕ್ಷಕ್ಕೆ ಒಳಿತು, ಸಂಘಟನೆ ಬಲವರ್ಧನೆ, ಎಲ್ಲರಿಗೂ ಅವಕಾಶ ಲಭಿಸಲಿ ಎನ್ನುವುದು ವೈಯಕ್ತಿಕ ನಿಲುವು. ಮುಂದಿನ ತೀರ್ಮಾನ ಹೈಕಮಾಂಡ್ ಬಿಟ್ಟದ್ದು ಎಂದರು.
ಅಲ್ಲದೆ, ಬೇರೆಯವರಿಗೆ ಅವಕಾಶ ಕೊಡುವುದಕ್ಕಾಗಿ ಇನ್ನೂ ಕೆಲವರು ಸಚಿವ ಸ್ಥಾನ ತ್ಯಜಿಸಬೇಕು ಎಂದು ಸಲಹೆ ನೀಡಿದ ಕೆ.ಎಚ್.ಮುನಿಯಪ್ಪ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವಜನರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ದೆಹಲಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿರುವೆ. ಸಂಘಟನೆಗೆ ಹೊಸ ಹುರುಪು, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುತ್ತದೆ. ಯುವಜನರು ರಾಜಕೀಯವಾಗಿ ಬೆಳೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.