

ಕೋಲಾರ: ಅವಕಾಶ ಕೊಟ್ಟರೆ ಬಿಜೆಪಿ ರಾಜ್ಯಾಧ್ಯಕ್ಷನಾಗಲು ಸಿದ್ಧನಿದ್ದು, 2027ರ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ತಾಲೂಕಿನ ಅರಾಭಿಕೊತ್ತೂರಿನಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರ ಬಳಿ ನಾನು ಬೇಡಿಕೆಯಿಟ್ಟಿಲ್ಲ. ಪಕ್ಷಕ್ಕಾಗಿ ಸುಮಾರು ವರ್ಷಗಳಿಂದ ಶ್ರಮಿಸುತ್ತಿದ್ದು, ಸೇವೆ ಗುರುತಿಸಿ, ಜವಾಬ್ದಾರಿ ವಹಿಸಲಿ ಎಂದರು.
ಹಾಗೆಯೇ, ರಾಮುಲು ಯಾವ ರೀತಿಯ ಮನುಷ್ಯ, ಪಾರ್ಟಿಗಾಗಿ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದು ಯತ್ನಾಳ್ ಅವರಿಗೆ ಗೊತ್ತಿದೆ. ಅದ್ದರಿಂದ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ನನ್ನ ಹೆಸರು ಪ್ರಸ್ತಾಪಿಸಿರಬಹುದು ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮೆಲ್ಲರಿಗೂ ತಂದೆ ಸಮಾನರು. ಪಕ್ಷದಲ್ಲಿ ನಾವು ಈ ಮಟ್ಟಕ್ಕೆ ಬೆಳೆಯಲು ಕಾಣರಾಗಿದ್ದಾರೆ. ಈಗ ನನ್ನ ತಮ್ಮ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಬದಲಾವಣೆ ಮಾಡುವ ಅವಕಾಶ ಬಂದರೆ ಅವರ ಕುಟುಂಬದಲ್ಲಿ ಒಬ್ಬರನ್ನಾಗಿ ನನ್ನನ್ನೂ ಪರಿಗಣಿಸಿ, ಆಕಸ್ಮಿಕವಾಗಿಯಾದರೂ ರಾಜ್ಯಾಧ್ಯಕ್ಷನಾಗಲು ನನಗೆ ಅವಕಾಶ ಮಾಡಿಕೊಡಲಿ ಎಂದು ಮನವಿ ಮಾಡಿದರು.
ರಾಜ್ಯಾಧ್ಯಕ್ಷನಾದರೆ ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಬಿಜೆಪಿ ನಾಯಕರ ಭಿನ್ನಾಭಿಪ್ರಾಯ ಶಮನ ಮಾಡುವ ಜತೆಗೆ ಪಕ್ಷ ಸಂಟಿಸುವೆ. ಹಾಗಾಗಿ ಸದ್ಯದ ಪರಿಸ್ಥಿತಿಯಿಂದ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆಯಾದರೆ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬಹುದು. ನಾನು ಚುನಾವಣೆಯಲ್ಲಿ ಸೋತಿದ್ದರೂ ಮತದಾರರ ಕೈ ಬಿಟ್ಟಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದರು.
ದೇಶದಲ್ಲಿ ಬಿಜೆಪಿಗೆ ಅದರದ್ದೇ ಆದ ಇತಿಹಾಸವಿದೆ. ಐಕ್ಯತೆ, ಆರ್ಥಿಕ ವ್ಯವಸ್ಥೆ ಸಲುವಾಗಿ ದೇಶವನ್ನು ನರೇಂದ್ರ ಮೋದಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲಿ ಕಮಲ ಅರಳಿಸುವ ಗುರಿ ಹೊಂದಿದ್ದಾರೆ. ಸರ್ಕಾರಿ ನೌಕರರಿಗೆ, ವ್ಯಾಪಾರಸ್ಥರಿಗೆ, 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ, ಹೀಗೆ ಹಲವು ಸೌಲಭ್ಯಗಳನ್ನು ಬಜೆಟ್ನಲ್ಲಿ ಒದಗಿಸಿಕೊಟ್ಟಿದ್ದಾರೆ ಎಂದರು.
ರಾಜಕಾರಣದಲ್ಲಿ ಕೆಲ ರೀತಿ ಅವಕಾಶ ಸಿಗುತ್ತದೆ, ಕೆಲವು ಸಿಗುವುದಿಲ್ಲ. ನಾಟಕ ಮಾಡಿ ಅವಕಾಶ ಪಡೆದುಕೊಳ್ಳುವುದು ನನಗೆ ಗೊತ್ತಿಲ್ಲ. ನೇರ ನುಡಿಯಿಂದ ರಾಜಕೀಯ ಮಾಡಿಕೊಂಡು ಬಂದಿದ್ದೆನೆ. ಪಾರ್ಟಿ ಅವಕಾಶಗಳನ್ನು ಮಾಡಿಕೊಡುವ ವಿಶ್ವಾಸವಿದೆ. ಕಾಂಗ್ರೆಸ್ನವರು ಪ್ರೀತಿ, ಅಭಿಮಾನದಿಂದ ರಾಮುಲು ಬಗ್ಗೆ ವಿಶ್ವಾಸ, ನಂಬಿಕೆಯ ಮಾತನಾಡಿದ್ದಾರೆ. ರಾಜಕೀಯ, ಪಕ್ಷದಲ್ಲಿ ತೊಂದರೆ ಆಗಿರಬಹುದು ಎಂಬ ಕಾರಣದಿಂದ ಕಾಂಗ್ರೆಸ್ಗೆ ಸ್ವಾಗತಿಸಿರಬಹುದು ಎಂದು ಶ್ರೀರಾಮಲು ಪ್ರತಿಕ್ರಿಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಜಿ.ಪಂ ಮಾಜಿ ಸದಸ್ಯೆ ರೂಪಶ್ರೀ, ಮುಖಂಡರಾದ ಮಂಜುನಾಥ್, ವೆಂಕಟೇಶ್ ಇದ್ದರು.
ಯಡಿಯೂರಪ್ಪ ನೆರವು ಅಗತ್ಯ
ರಾಜ್ಯ ಬಿಜೆಪಿಯು ಪಕ್ಷದಲ್ಲಿನ ಗೊಂದಲಗಳಿಂದ ಕಳೆದ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಈಗ ಮತ್ತೆ ಅಧಿಕಾರಕ್ಕೆ ಬರಲು ಈಗಿನಿಂದಲೇ ಕ್ರಮವಹಿಸಬೇಕಿದೆ. ವ್ಯತ್ಯಾಸ ಸರಿಪಡಿಸಲು ಯಡಿಯೂರಪ್ಪ ಅವರ ಸಹಾಯ ಪಡೆದುಕೊಳ್ಳಬೇಕಿದೆ. ಅವರು ಬಹಳ ಸೂಕ್ಷ$್ಮ ವ್ಯಕ್ತಿಯಾಗಿದ್ದು, ಅವರ ಕಾಲದಲ್ಲಿ ಯಾರೂ ತುಟಿಕ್ ಪಿಟಕ್ ಅನ್ನುತ್ತಿರಲಿಲ್ಲ. ವಿಜಯೇಂದ್ರ ಹೊಸಬರಾಗಿರುವುದರಿಂದ ಸಣ್ಣಪುಟ್ಟ ವ್ಯತ್ಯಾಸಗಳು ಕಂಡು ಬರುತ್ತಿವೆ. ಇದನ್ನು ಸರಿಪಡಿಸಲು ಭೀಷ್ಮರ ನೆರವು ಅಗತ್ಯವಾಗಿದೆ ಎಂದು ಶ್ರೀರಾಮಲು ಅಭಿಪ್ರಾಯಪಟ್ಟರು.