ಜನರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸುವ ಮಾತಿಗೆ 'ಸಿದ್ಧ'ಹಸ್ತರು: ನಿರ್ಮಲಾ ಸೀತಾರಾಮನ್ ವ್ಯಂಗ್ಯ

Nirmala Seetharaman
Published on

ಬೆಂಗಳೂರು: ವಾವ್ ಏನ್ ಮಾತಾಡಿದರಪ್ಪ ಎಂದು ಜನರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುವ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸ್ತರು. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಹಣಕಾಸು ಸಚಿವರ ರಾಜೀನಾಮೆಗೆ ಒತ್ತಾಯವೂ ಜನರ ಗಮನಸೆಳೆಯುವ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರಗಾರಿಕೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹಣ ಖಾಸಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುವುದನ್ನು ತಡೆಯಲಿಲ್ಲ. ಜವಾಬ್ದಾರರಾದ ಬ್ಯಾಂಕ್ ಅಧಿಕಾರಿಗಳ ಹಿಡಿದು ಪೊಲೀಸರಿಗೆ ಒಪ್ಪಿಸುವುದನ್ನು ಸಿದ್ದರಾಮಯ್ಯ ಅವರಿಗೆ ತಡೆದವರು ಯಾರು ? ಎಂದು ಕೇಳಿದರು.

ಹಗರಣ ಹೊರ ಬಿದ್ದಾಗ ಸಂಬಂಧಿಸಿದ ಸಚಿವರ ಪಾತ್ರವೇನಿಲ್ಲ ಎಂದು ವಾದಿಸಿದರು. ನಂತರ ಅದೇ ಸಚಿವ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದರು. 187 ಕೋಟಿ ರೂ.ಗಳಲ್ಲ, 89 ಕೋಟಿ ರೂ.ಗಳಷ್ಟೇ ಅಕ್ರಮ ವರ್ಗಾವಣೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಹಾಗಿದ್ದ ಮೇಲೆ ಕೇಂದ್ರ ಹಣಕಾಸು ಸಚಿವರ ವಿರುದ್ಧ ರಾಜಕೀಯ ಕಾರಣಕ್ಕೆ ಮಾತನಾಡುತ್ತಿರುವುದು ನಿಚ್ಚಳವಾಗಿದೆ ಎಂದರು.

ಹಗರಣದಲ್ಲಿ ಶಾಮೀಲಾದ ಬ್ಯಾಂಕ್ ನ ಯಾವುದೇ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಾನೂನು ಕ್ರಮಗಳು ಜಾರಿಯಾಗಿವೆ. ನಿರ್ದಾಕ್ಷಿಣ್ಯ ಕ್ರಮವಾಗಲಿದೆ. ರಾಜ್ಯ ಸರ್ಕಾರದ ರೀತಿ ವಿಳಂಬ ಮಾಡುವ ಪ್ರಶ್ನೆಯೇ ಇಲ್ಲವೆಂದು ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net