

ಹುಬ್ಬಳ್ಳಿ: ಓದುವುದು ಮತ್ತು ಬರೆಯುವುದು ಒಳ್ಳೆಯ ಹವ್ಯಾಸಗಳು. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹಾಗೂ ದೂರದೃಷ್ಟಿ ದೊರೆಯುತ್ತದೆ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.
ಇಲ್ಲಿಯ ಅನಂತ ರೆಸಿಡೆನ್ಸಿಯಲ್ಲಿ ಮಂಗಳವಾರ ಏರ್ಪಾಟಾಗಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರಕಾಶನ ಮತ್ತು ಸುಬ್ಬು ಪಬ್ಲಿಕೇಶನ್ಸ್ನ ಆನ್ಲೈನ್ ಮಳಿಗೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅನೇಕ ಪ್ರಕಾಶನ ಸಂಸ್ಥೆಗಳು 2-3 ದಶಕದಲ್ಲಿ ವರ್ಚಸ್ಸು ಕಳೆದುಕೊಂಡಿರುವುದನ್ನು ನೋಡಿದ್ದೇನೆ, ಬೇಸರವೂ ಆಗಿದೆ ಎಂದ ಡಾ. ಸಂಕೇಶ್ವರ ಅವರು, ಯಾವುದೇ ಉದ್ಯಮದಲ್ಲೂ ಹಾಗೆ ಆಗಬಾರದು. ಸದಾ ಒಬ್ಬ ಯೋಧನ ಹಾಗೆ ನಮ್ಮ ಸಾಮಗ್ರಿ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತ ಹೋಗ ಬೇಕು. ಅಂಗಡಿಗೆ ಹೋಗಿ ಪುಸ್ತಕ ಕೊಳ್ಳುವ ಪ್ರವೃತ್ತಿ ಕಡಿಮೆ ಆಗುತ್ತಿರುವ ಕಾಲದಲ್ಲಿ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನವು ಎಂ.ಎ. ಸುಬ್ರಹ್ಮಣ್ಯ ನೇತೃತ್ವದಲ್ಲಿ ಕಾಲಕ್ಕೆ ತಕ್ಕಂತೆ ವ್ಯವಹಾರ ವನ್ನು ರೂಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಬ್ಬು ಪಬ್ಲಿಕೇಶನ್ಸ್ ರೂವಾರಿ ಎಂ.ಎಸ್. ಋತ್ವಿಕ್ ಮಾತನಾಡಿ, ನಿಲೇಶ್ ನೀಲಕಂಠ ಅವರ ‘ವ್ಹೆನ್ ಡಿಡ್ ಮಹಾಭಾರತ ಹ್ಯಾಪನ್, ರಾಮ ರಾವಣ ಯುದ್ಧ-12209 ಬಿ.ಸಿ., ಭೀಷ್ಮ ನಿರ್ವಾಣ’ ಕೃತಿಗಳನ್ನು ಮೊದಲು ಪ್ರಕಟಿಸಿದೆ. ಅತ್ಯುತ್ತಮ ಸ್ಪಂದನೆ ವ್ಯಕ್ತವಾಯಿತು. ನಿತಿನ್ ಶ್ರೀಧರ ಅವರ ಸಾಮಾನ್ಯ ಧರ್ಮ, ನಮಸ್ತೇ 2020
ಎಂಬ ಹಿಂದು ಧರ್ವಧಾರಿತ ಡೈರಿಯನ್ನು ಹೊರತಂದಿದ್ದೇವೆ. ಡಾ. ಕೆ.ಎಸ್. ನಾರಾಯಣಾಚಾರ್ಯ, ಡಾ. ರಾಜಶೇಖರ ಭೂಸನೂರಮಠ ಅವರ ಎಲ್ಲ ಕೃತಿಗಳು, ಇತರ ಲೇಖಕರ ಕೃತಿಗಳನ್ನು ಆನ್ಲೈನ್ಗೆ ತರಲಾಗಿದೆ ಎಂದು ವಿವರಿಸಿದರು.
ಪುಸ್ತಕಗಳ ಆನ್ಲೈನ್ ವಿನ್ಯಾಸಕಾರ ಸಿದ್ದು ಮಠದ ಮಾತನಾಡಿ, ಈಗಾಗಲೆ ಆನ್ಲೈನ್ ಮೂಲಕ ದೇಶದ ವಿವಿಧೆಡೆಯಿಂದ ಆರ್ಡರ್ ಬರುತ್ತಿವೆ. ಆಸಕ್ತರು ಪುಸ್ತಕ, ಲೇಖಕರ ಬಗ್ಗೆ ವಿವರವಾಗಿ ತಿಳಿದುಕೊಂಡು ಪುಸ್ತಕ ಖರೀದಿಸಲು ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
ಡಾ. ಸಂಕೇಶ್ವರರೇ ಮೂಲ ಕಾರಣ
ಆನ್ಲೈನ್ ಮಳಿಗೆ ಆರಂಭಿಸಲು ಡಾ. ವಿಜಯ ಸಂಕೇಶ್ವರರೇ ಮೂಲ ಕಾರಣ ಎಂದು ಸಾಹಿತ್ಯ ಪ್ರಕಾಶನದ ಮಾಲೀಕ ಎಂ.ಎ. ಸುಬ್ರಹ್ಮಣ್ಯ ವಿವರಿಸಿದರು. ತಮಗಿಷ್ಟವಾದ ಪುಸ್ತಕದ ಹಲವಾರು ಪ್ರತಿ ಖರೀದಿಸಿ ಸ್ನೇಹಿತರು, ಬಂಧುಗಳಿಗೆ ಕೊಡುಗೆಯಾಗಿ ನೀಡುವ ಪರಿಪಾಠವನ್ನು ಡಾ. ಸಂಕೇಶ್ವರರು ಹಾಕಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಸಾಹಿತ್ಯ ಪ್ರಕಾಶನದ ಮಳಿಗೆಗೆ ಬಂದಾಗ, ಆನ್ಲೈನ್ ಮಳಿಗೆ ಪ್ರಾರಂಭಿಸಿ ಎಂದು ಸಲಹೆ ನೀಡಿದ್ದರು. ಅವರು ವ್ಯವಹಾರ-ಉದ್ದಿಮೆ ರಂಗದ ವಿಶ್ವಕೋಶ ಇದ್ದ ಹಾಗೆ. ಹಾಗಾಗಿ, ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡು, ವ್ಯವಸ್ಥಿತ ಆನ್ಲೈನ್ ಮಳಿಗೆ ಆರಂಭಿಸಿದ್ದೇವೆ ಎಂದು ವಿವರಿಸಿದರು.
ಜಾಲತಾಣಗಳಲ್ಲಿ ಪುಸ್ತಕಗಳು ಲಭ್ಯ
ಹುಬ್ಬಳ್ಳಿಯಲ್ಲಿ ಏರ್ಪಾಟಾಗಿದ್ದ ಕಾರ್ಯಕ್ರಮ ಫೇಸ್ಬುಕ್ಲೈವ್ನಲ್ಲಿ ನೇರ ಪ್ರಸಾರಗೊಂಡಿತು. www.sahityaprakashan.com, www.subbupublications.com ಜಾಲತಾಣಗಳಲ್ಲಿ ಪುಸ್ತಕಗಳು ಲಭ್ಯವಿದೆ.