ಓದಿ, ಓದಿದ್ದನ್ನು ಮನನ ಮಾಡಿಕೊಳ್ಳಿ

dasara
ಶಾರದಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಎಸ್.ಎನ್.ಚನ್ನಬಸಪ್ಪ ಜ್ಞಾನ ದಸರಾ ಉದ್ಘಾಟಿಸಿದರು. ಜಿ.ಕೆ.ಮಿಥುನ್‌ಕುಮಾರ್, ಎನ್.ಹೇಮಂತ್, ಮಾಯಣ್ಣ ಗೌಡ ಮುಂತಾದವರಿದ್ದರು.
Published on

ಶಿವಮೊಗ್ಗ: ರೀಡ್, ರಿವೈಸ್, ರೀಕನೆಕ್ಟ್ ಈ ಮೂರು ಅಂಶಗಳನ್ನು ಅಳವಡಿಸಿಕೊಂಡಾಗ ಸಾಧನೆ ಸಾಧ್ಯ. ಓದಬೇಕು ಮತ್ತು ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಮುಂದಿನ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ಎನ್.ಹೇಮಂತ್‌ಕುಮಾರ್ ಹೇಳಿದರು.

ಪಾಲಿಕೆಯಿಂದ ದಸರಾ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಜ್ಞಾನ ದಸರಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕುರಿತು ಮಾತನಾಡಿದ ಅವರು, ಇನ್ನೊಬ್ಬರನ್ನು ಮೆಚ್ಚಿಸಲು, ಯಾರದ್ದೋ ಪ್ರಶಂಸೆಗೆ ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡದೆ ಗುರಿ ಸಾಧನೆಗಾಗಿ ಪಾರದರ್ಶಕ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಮ್ಮ ಪ್ರತಿಭೆ-ನಮ್ಮ ಸ್ವತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಬ್ರಾಹ್ಮೀ ಮುಹೂರ್ತದಲ್ಲಿ ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ. ದೇಶದಲ್ಲಿ ಅನೇಕ ಜ್ಞಾನಿಗಳು ಮತ್ತು ಬುದ್ಧಿವಂತರ ಯಶಸ್ಸಿನ ಹಿಂದಿನ ರಹಸ್ಯ ಇದೇ ಆಗಿದೆ ಎಂದು ತಿಳಿಸಿದರು.

ನಾಸಾದ ವಿಜ್ಞಾನಿಗಳು ರಾಕೆಟ್ ಉಡಾವಣೆ ಪ್ರಯೋಗದಲ್ಲಿ ಸತತ ಎರಡು ವರ್ಷ ಹಿನ್ನಡೆ ಅನುಭವಿಸುತ್ತಿದ್ದರು. ಬಳಿಕ ಅವರು ಜರ್ಮನಿ ವಿಜ್ಞಾನಿಗಳ ನೆರವು ಪಡೆದಾಗ ಆರು ತಿಂಗಳಲ್ಲೇ ಪ್ರಯೋಗ ಯಶಸ್ವಿಯಾಯಿತು. ನಾವು ಬ್ರಾಹ್ಮೀ ಮುಹೂರ್ತದಲ್ಲಿ ಕೆಲಸ ಮಾಡುತ್ತೇವೆ. ಅಮೆರಿಕದವರು ರಾತ್ರಿ ಕೆಲಸ ಮಾಡುತ್ತಾರೆ ಎಂದು ಆ ಸಂದರ್ಭದಲ್ಲಿ ಜರ್ಮನಿ ವಿಜ್ಞಾನಿಗಳು ಹೇಳಿದ್ದನ್ನು ನಾವು ಸ್ಮರಿಸಬೇಕು ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಜ್ಞಾನ ದಸರಾದ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನದ ಬೀಜ ಬಿತ್ತುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಶಾರದೆ ಎಂದರೆ ಜ್ಞಾನದ ಸಂಕೇತ. ನಮ್ಮ ಹಿರಿಯರು ಶಾರದಾ ಪೂಜೆಗೆ ವಿಶೇಷ ಮಹತ್ವ ನೀಡಿದ್ದಾರೆ. ಭಾವನೆಗಳಿಗೆ ಶಕ್ತಿ ಕೊಡುವ ಕಾರ್ಯ ಜ್ಞಾನ ದಸರಾದಿಂದ ಆಗುತ್ತಿದೆ ಎಂದರು.

ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ತಜ್ಞ ವೈದ್ಯ ಡಾ. ಎಸ್.ಟಿ.ಅರವಿಂದ, ಪ್ರಗತಿಪರ ಕೃಷಿಕ ದುರ್ಗಪ್ಪ ಅಂಗಡಿ, ಸಮನ್ವಯ ಕಾಶಿ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ, ಕೌಶಲಾಭಿವೃದ್ಧಿ ಅಧಿಕಾರಿ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net