ಆದರೆ, ವಾಸ್ತವದ ಸಂಗತಿಗಳನ್ನು ಜೋಡಿಸಿ ನೋಡಿದಾಗ ಈ ಹೇಳಿಕೆ ಮೇಲೆ ಸಂಶಯ ಮೂಡುತ್ತದೆ. 2025ರ ಸೆಪ್ಟೆಂಬರ್ನಲ್ಲಿ ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ, ಮುಂದಿನ ಚುನಾವಣೆಗಳನ್ನು ಮತಪತ್ರದಲ್ಲಿ ನಡೆಸಲು ಕಾನೂನು ತಿದ್ದುಪಡಿ ತರುವ ತೀರ್ಮಾನ ಕೈಗೊಂಡಿತ್ತು. ಈ ತೀರ್ವನವನ್ನು ಚುನಾವಣಾ ಆಯೋಗಕ್ಕೆ ಮುಟ್ಟಿಸುವುದಾಗಿ ತಿಳಿದುಬಂದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಆಯೋಗವೂ ಅದೇ ರಾಗ ಹಾಡುತ್ತಿದೆ. ಜೊತೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಿರಂತರವಾಗಿ ಇವಿಎಂ ವೋಟ್ ಚೋರಿ ಆರೋಪ ಮಾಡುತ್ತಿರುವುದು, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಒಟ್ಟಿನಲ್ಲಿ ಮತದಾನ ಆದರೆ ಸಾಕಲ್ಲವೇ?’ ಎಂದು ಸಮರ್ಥಿಸಿಕೊಂಡಿರುವುದನ್ನು ನೋಡಿದರೆ, ಸ್ವಾಯತ್ತ ಸಂಸ್ಥೆಯೊಂದು ಪರೋಕ್ಷವಾಗಿ ಆಡಳಿತಾರೂಢರ ಇಚ್ಛೆಗೆ ತಲೆಬಾಗಿದೆಯೇ ಎಂಬ ಅನುಮಾನ ಮೂಡುವುದು ಸಹಜ.