

ಚಿಕ್ಕಮಗಳೂರು: ನಗರದ ಶತಮಾನೋತ್ಸವ ಕ್ರೀಡಾಂಗಣದ ಸಿಂಥೆಟಿಕ್ ಟ್ರಾೃಕ್ ನಿರ್ಮಾಣಕ್ಕೆ ಮರು ಟೆಂಡರ್ ಕರೆಯಿರಿ ಎಂದು ಪಿಡಬ್ಲುೃಡಿ ಕಾರ್ಯಪಾಲಕ ಅಭಿಯಂತರ ಗವಿರಂಗಪ್ಪ ಅವರಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸೂಚಿಸಿದರು.
ಶತಮಾನೋತ್ಸವ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಅವರು, ಸಿಂಥೆಟಿಕ್ ಟ್ರಾೃಕ್ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಲು ಕಾರಣವೇನು ಎಂದು ಪ್ರಶ್ನಿಸಿದರು.
ಗವಿರಂಗಪ್ಪ ಮಾತನಾಡಿ, ಸಿಂಥೆಟಿಕ್ ಟ್ರಾೃಕ್ ನಿರ್ಮಾಣ ಕಾಮಗಾರಿಯನ್ನು ಸಂದೀಪ್ ಎಂಬ ಗುತ್ತಿಗೆದಾರ ಪಡೆದಿದ್ದು, 40 ಲಕ್ಷ ರೂ. ವೆಚ್ಚದ ಕಾಮಗಾರಿ ಮಾಡಿ ಸ್ಥಗಿತಗೊಳಿಸಿದ್ದಾರೆ. ಅನೇಕ ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದರು. ಶಾಸಕ ಮಾತನಾಡಿ, ಕಾಮಗಾರಿ ಸ್ಥಗಿತಕ್ಕೆ ಕಾರಣ ಕೇಳಿ ನೊಟೀಸ್ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿದರು. ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಬಹುತೇಕ ಮುಗಿದಿದ್ದು, ಬಾಕಿ ಇರುವ ಕೆಲಸಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಮಾತನಾಡಿ, 4.50 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಮತ್ತು ನೆಲಹಾಸು ಕೆಲಸ ಬಾಕಿ ಇದ್ದು, ಹೆಚ್ಚುವರಿ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ಈ ಬಗ್ಗೆ ಕ್ರೀಡಾ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಜೀಮ್, ಕ್ರೀಡಾ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ತಮ್ಮಯ್ಯ, ಕ್ರೀಡಾಂಗಣದ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿದೆ. ಇದರಿಂದ ಕ್ರೀಡಾ ಸಾಧಕರಿಗೆ ಹಿನ್ನಡೆಯಾಗುತ್ತಿದೆ. ಸ್ಥಳ ಪರಿಶೀಲಿಸಿ ಚುರುಕು ಮುಟ್ಟಿಸಲಾಗಿದೆ ಎಂದು ತಿಳಿಸಿದರು.
ಫುಟ್‌ಬಾಲ್ ಅಂಗಳ ನಿರ್ಮಾಣಕ್ಕೆ 4.50 ಕೋಟಿ ರೂ. ಅನುದಾನ ಮಂಜೂರಾಗಿದ್ದು ಕೆಲಸ ಪ್ರಾರಂಭಿಸಲು ಸೂಚಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಯಾವುದೇ ಕಾಮಗಾರಿಗಳ ಅನುದಾನ ಸ್ಥಗಿತಗೊಳಿಸಿಲ್ಲ. ಪ್ರಗತಿಯಲ್ಲಿರುವ, ಮಂಜೂರು ಪತ್ರ ನೀಡಲಾಗಿರುವ ಕೆಲಸದ ಹಣ ತಡೆದಿಲ್ಲ. ವಿಪಕ್ಷದವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.
ಒಂದೂವರೆ ತಿಂಗಳೊಳಗೆ ಕ್ರೀಡಾ ಸಚಿವರನ್ನು ಕರೆಯಿಸಿ ಕ್ರೀಡಾಂಗಣ ಉದ್ಘಾಟಿಸಲಾಗುವುದು. ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೇನು ಕೊರತೆಯಿಲ್ಲ. ಅವರಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಲಾಂಗ್‌ಜಂಪ್ ಕೋರ್ಟ್ ನಿರ್ಮಿಸಿ: ಶತಮಾನೋತ್ಸವ ಕ್ರೀಡಾಂಗಣದಲ್ಲಿದ್ದ ಲಾಂಗ್‌ಜಂಪ್ ಮತ್ತು ಹೈಜಂಪ್ ಕೋರ್ಟ್ ಅನ್ನು ಕೆಡವಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಕ್ರೀಡಾಪಟುಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಎಚ್.ಡಿ.ತಮ್ಮಯ್ಯ, ಮುಂದಿನ ವಾರದಲ್ಲಿ ಕ್ರೀಡಾಂಗಣಕ್ಕೆ ಭೇಟಿ ನೀಡುತ್ತೇನೆ. ಸೂಕ್ತ ಸ್ಥಳ ಗುರುತಿಸಿ ಕೋರ್ಟ್ ನಿರ್ಮಿಸಿಕೊಡುವಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಎಲ್ಲ ಸ್ಪರ್ಧೆಗಳೂ ಒಂದೆಡೆ: ನೇತಾಜಿ ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆ ನಡೆಸಲಾಗುತ್ತಿದೆ. ಇಲ್ಲಿ ಕಾಮಗಾರಿ ಪೂರ್ಣಗೊಂಡ ಎಲ್ಲ ಕ್ರೀಡೆಗಳನ್ನೂ ಶತಮಾನೋತ್ಸವ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಸದ್ಯಕ್ಕೆ ಪ್ರಾಥಮಿಕ, ಪ್ರೌಢಶಾಲಾ ಮಟ್ಟದ ಕ್ರೀಡೆಗಳು ನಡೆಯುತ್ತಿದ್ದು, ಬೇಕಾದ ಸಾಮಾಗ್ರಿ ಕಲ್ಪಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಮಂಜುಳಾ ತಿಳಿಸಿದರು.
ಬೆಳಕು ಚೆಲ್ಲಿದ್ದ ವಿಜಯವಾಣಿ: ಶತಮಾನೋತ್ಸವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ಕಾಮಗಾರಿ ನನೆಗುದಿಗೆ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಕ್ರೀಡಾಪಟುಗಳು ಶಾಸಕರ ಗಮನಕ್ಕೆ ತಂದು ಕೂಡಲೇ ಕೆಲಸ ಪೂರ್ಣಗೊಳಿಸಿ ಕ್ರೀಡಾ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸಹ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದರು.