‘ರೀ-ರಿಲೀಸ್​ ಚಿತ್ರಗಳ ಮೂಲಕ ಹೊಸ ಸಿನಿಮಾಗಳನ್ನು ಕೊಲ್ಲಬೇಡಿ’: ಅಚ್ಚರಿ ಹೇಳಿಕೆ ಕೊಟ್ಟ ಮಂಚು ಮನೋಜ್​ | Manchu Manoj

ವಿಜಯವಾಣಿ - 2025-06-01T161210.821
Published on

Manchu Manoj: ಇತ್ತೀಚೆಗಷ್ಟೇ ಟಾಲಿವುಡ್​ ಅಂಗಳದಲ್ಲಿ ತೆರೆಕಂಡ ಭೈರವಂ ಚಿತ್ರದ ಮೂಲಕ ಸಿನಿಪ್ರೇಕ್ಷಕರ ಮುಂದೆ ಭರ್ಜರಿ ಕಮ್​ಬ್ಯಾಕ್​ ಮಾಡಿರುವ ತೆಲುಗು ನಟ ಮಂಚು ಮನೋಜ್​, ಸದ್ಯ ರೀ-ರಿಲೀಸ್​ ಚಿತ್ರಗಳ ಎಂಟ್ರಿ ಕುರಿತು ಬೇಸರ ಹೊರಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸ್ಟಾರ್​ ನಟರ ಹಳೆಯ ಸಿನಿಮಾಗಳ ಮರುಬಿಡುಗಡೆ ಇದೀಗ ಹೊಸ ಚಿತ್ರಗಳನ್ನು ಕೊಲ್ಲುತ್ತಿದೆ ಎಂದು ಮನೋಜ್​ ಅಭಿಪ್ರಾಯಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಈಗ ಐಪಿಎಲ್, ಒಟಿಟಿ ವಿಂಡೋ ಮತ್ತು ದೊಡ್ಡ ಈವೆಂಟ್​ ಕಾರ್ಯಕ್ರಮಗಳಿಂದ ಸ್ಪರ್ಧೆ ಮತ್ತಷ್ಟು ಬಿಗಿಯಾಗಿದೆ. ಈ ಮಧ್ಯೆ ಈಗಾಗಲೇ ಸೂಪರ್​ಹಿಟ್​ ಆಗಿ, ಜನಮನ ಗೆದ್ದಿರುವ ಚಿತ್ರಗಳ ರೀ-ರಿಲೀಸ್​ಗಳು ಹೊಸ ಚಿತ್ರಗಳ ಬಲವಾದ ಆರಂಭಕ್ಕೆ ಪೆಟ್ಟು ನೀಡಿದೆ" ಎಂದಿದ್ದಾರೆ.

“ಈಗಿರುವ ಪರಿಸ್ಥಿತಿಯಲ್ಲಿ, ಮರುಬಿಡುಗಡೆಗಳು ಸಹ ವಾರಾಂತ್ಯದಲ್ಲೇ ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿವೆ. ಈ ಚಿತ್ರಗಳು ಈಗಾಗಲೇ ಸದ್ದು ಮಾಡಿವೆ ಮತ್ತು ಕಟ್ಟ ಅಭಿಮಾನಿಗಳನ್ನು ಹೊಂದಿವೆ. ಹೀಗಾಗಿ ಇಂತಹ ಚಿತ್ರಗಳನ್ನು ವಾರಾಂತ್ಯದ ಬದಲಿಗೆ ವಾರದ ದಿನಗಳಲ್ಲಿ ರಿಲೀಸ್ ಮಾಡಿದರೆ ಒಳಿತು. ಈಗ, ನಾವು ಒಂದು ತೆಲುಗು ಚಿತ್ರವನ್ನು ಮತ್ತೊಂದು ಚಿತ್ರದೊಂದಿಗೆ ಕೊಲ್ಲುತ್ತಿರುವಂತೆ ನನಗೆ ಭಾಸವಾಗುತ್ತಿದೆ” ಎಂದು ಮನೋಜ್ ಹೇಳಿದ್ದಾರೆ.

ಮಹೇಶ್​ ಬಾಬು 'ಖಲೇಜಾ'

ಮಹೇಶ್ ಬಾಬು ಅಭಿನಯದ ತೆಲುಗು ಬ್ಲಾಕ್​ಬಸ್ಟರ್​ 'ಖಲೇಜಾ' ಚಿತ್ರ ಇದೀಗ ಮರು ಬಿಡುಗಡೆಗೊಂಡಿದ್ದು, ತೆಲುಗು ಬಾಕ್ಸ್ ಆಫೀಸ್​ನಲ್ಲಿ ಎರಡನೇ ಬಾರಿಗೆ ಅಬ್ಬರಿಸುವತ್ತ ಸಾಗುತ್ತಿದೆ. 'ಭೈರವಂ' ಅಖಾಡಕ್ಕಿಳಿದ ಸಮಯದಲ್ಲೇ ಕಲ್ಟ್​ ಕ್ಲಾಸಿಕ್ ಖಲೇಜಾ ಕೂಡ ಎಂಟ್ರಿಕೊಟ್ಟಿರುವುದು ಇದೀಗ ನಟನ ಬೇಸರಕ್ಕೆ ಕಾರಣವಾಗಿದೆ. ರೀ-ರಿಲೀಸ್ ಮಾಡುವವರು ಚಿತ್ರದ ದಿನಾಂಕಗಳನ್ನು ಯೋಚಿಸಿ, ನಿಗದಿ ಪಡಿಸುವುದು ಉತ್ತಮ ಎಂದು ಮನೋಜ್ ಅಭಿಪ್ರಾಯಿಸಿದ್ದಾರೆ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net