

ನಂಜನಗೂಡು: ಕಡೆಯದಾಗಿ ಕರೊನಾ ಸೋಂಕು ಕಾಣಿಸಿಕೊಂಡ 42 ದಿನಗಳ ಬಳಿಕ ಪಟ್ಟಣದಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ.
ವ್ಯಾಸಂಗಕ್ಕಾಗಿ ಉತ್ತರಪ್ರದೇಶಕ್ಕೆ ತೆರಳಿದ್ದ ನೀಲಕಂಠನಗರ ಬಡಾವಣೆಯ 22 ವರ್ಷದ ಯುವಕನಿಗೆ ಸೋಮವಾರ ಕರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಈತನನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ಕಂಡುಬಂದ 98ನೇ ಪ್ರಕರಣ ಇದಾಗಿದೆ.
ಸೋಂಕಿತ ವ್ಯಕ್ತಿ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿದೆ. ಈತನ ಮನೆಯ 100 ಮೀಟರ್ ಸುತ್ತಳತೆಯಲ್ಲಿ ಸೀಲ್‌ಡೌನ್ ಮಾಡಲಾಗಿದ್ದು, 25ಕ್ಕೂ ಹೆಚ್ಚು ಕುಟುಂಬಗಳು ಸೀಲ್‌ಡೌನ್ ವ್ಯಾಪ್ತಿಗೆ ಒಳಪಟ್ಟಿವೆ.
ಉತ್ತರಪ್ರದೇಶದ ದಿಯೋಬಾಚಿಡ್ ನಗರದಲ್ಲಿ ಅರೇಬಿಕ್ ವ್ಯಾಸಂಗಕ್ಕಾಗಿ ತೆರಳಿದ್ದ ಯುವಕ ದೆಹಲಿ ಮಾರ್ಗವಾಗಿ ಬಂದು ಮೇ 20ರಂದು ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದನು. ಮೇ 22ರಂದು ಬೆಂಗಳೂರಿಗೆ ಬಂದ ಈತ ಮದರಸದಲ್ಲಿ ಸೌಲಭ್ಯ ಸಹಿತ ಕ್ವಾರಂಟೈನ್‌ಗೆ ಒಳಪಟ್ಟಿದ್ದನು. ಆದರೆ ಈತನನ್ನು ಯಾವುದೇ ತಪಾಸಣೆಗೆ ಒಳಪಡಿಸದೆ ಕ್ವಾರಂಟೈನ್ ಮಾಡಲಾಗಿತ್ತು ಎನ್ನಲಾಗಿದೆ.
7 ದಿನಗಳನ್ನು ಪೂರೈಸಿದ ಬಳಿಕ ಹೋಂ ಕ್ವಾರಂಟೈನ್‌ಗಾಗಿ ಜೂನ್ 1ರಂದು ನಂಜನಗೂಡಿಗೆ ಬಂದಿಳಿದ ಈತ, ತಾಲೂಕು ಆಡಳಿತಕ್ಕೆ ಮಾಹಿತಿ ಕೊಟ್ಟಿದ್ದಾನೆ. ಬಳಿಕ ಯುವಕನ ಪ್ರಯಾಣ ಹಾಗೂ ಕರೊನಾ ಪರೀಕ್ಷೆ ಕುರಿತು ಮಾಹಿತಿ ಕಲೆ ಹಾಕಿದಾಗ ಯಾವುದೇ ತಪಾಸಣೆಗೆ ಒಳಪಡದಿರುವುದು ಬೆಳಕಿಗೆ ಬಂದಿದೆ. ಜೂನ್ 1ರಂದು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ ನೆಗೆಟಿವ್ ವರದಿ ಬಂದಿತ್ತು.
ಆದರೂ ಆತನನ್ನು ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಏಳು ದಿನ ತುಂಬುವ ಮುನ್ನ ಮತ್ತೊಂದು ಪರೀಕ್ಷೆಗಾಗಿ ಜೂ. 6ರಂದು ಸ್ಯಾಂಪಲ್ ಕಲೆ ಹಾಕಿದಾಗ ಕರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಕೂಡಲೇ ಆತತನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಯುವಕನ ಕಿರಿಕ್: ಜೂ. 6ರಂದು ಕಡೆಯದಾಗಿ ಗಂಟಲು ದ್ರವ ಪರೀಕ್ಷೆಗಾಗಿ ತೆರಳಿದ ಆರೋಗ್ಯ ಅಧಿಕಾರಿಗಳ ಜತೆ ಯುವಕ ಕಿರಿಕ್ ಮಾಡಿಕೊಂಡಿದ್ದಾನೆ. ಮೇ 22ರಂದು ಬೆಂಗಳೂರಿಗೆ ಬಂದ ಲೆಕ್ಕದಲ್ಲಿ ಜೂ.4ಕ್ಕೆ 14 ದಿನಗಳ ಕ್ವಾರಂಟೈನ್ ಮುಗಿದಿದೆ. ಆದರೂ ಜೂ. 6ರಂದು ನನಗೆ ತಪಾಸಣೆ ನಡೆಸುವ ಅಗತ್ಯವಿಲ್ಲ. ನಾನು ಸಹಕರಿಸುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಮಾತ್ರವಲ್ಲದೆ, ತನ್ನ ಎಲ್ಲ ಪ್ರಭಾವಗಳನ್ನು ಬಳಸಿ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದಾನೆ. ಆದರೂ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯನಿಷ್ಠೆ ತೋರುವ ಮೂಲಕ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದರಿಂದ ಸೋಂಕು ದೃಢಪಡಲು ಸಾಧ್ಯವಾಗಿದೆ.
ಬಳಿಕ ಆತನ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆ ಹಾಕಲು ಮುಂದಾಗಿರುವ ತಾಲೂಕು ಆಡಳಿತಕ್ಕೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ. ಆದರೂ ಆತನ ಪ್ರಯಾಣ ಜಾಲ ಭೇದಿಸುವಲ್ಲಿ ಅಧಿಕಾರಿಗಳು ತೊಡಗಿದ್ದಾರೆ.
ನಾಗರಿಕರಲ್ಲಿ ಆತಂಕ: ಹೋಂ ಕ್ವಾರಂಟೈನ್ ಇರಬೇಕಾಗಿದ್ದ ಸೋಂಕಿತ ವ್ಯಕ್ತಿ ಹೊರಗಡೆ ಓಡಾಡಿದ್ದಾನೆ ಎಂದು ಸ್ಥಳೀಯರು ದೂರುತ್ತಿದ್ದು, ಇದರಿಂದ ಪಟ್ಟಣ ವಾಸಿಗಳಲ್ಲಿ ಆತಂಕ ಮನೆಮಾಡಿದೆ. ಉತ್ತರಪ್ರದೇಶದಿಂದ ಬೆಂಗಳೂರಿಗೆ ಬಂದ ವಾರದ ಬಳಿಕ ನಂಜನಗೂಡಿನಲ್ಲಿ ನಡೆಸಿದ ತಪಾಸಣೆಯ ವರದಿ ನೆಗೆಟಿವ್ ಬಂದಿದ್ದರಿಂದ ಹೊರಗಡೆ ಅಡ್ಡಾಡಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.