ರಾಜ್ಯದಲ್ಲಿ ಇನಾಂ ಭೂಮಿ ಮರು ಮಂಜೂರು ಅವಕಾಶ: ಸಚಿವ ಸಂಪುಟ ಸಭೆ ಅಸ್ತು, ಆದೇಶ ಹೊರಡಿಸಿದ ನಂತರ ಅರ್ಜಿ ಸಲ್ಲಿಕೆ, 1 ವರ್ಷ ಕಾಲಾವಕಾಶ

Vidhana Soudha vvani
Published on

ಬೆಂಗಳೂರು: ತಲೆ ತಲಾಂತರದಿಂದ ಇನಾಂ ಭೂಮಿ ಉಳುಮೆ ಮಾಡುತ್ತಿದ್ದವರ ವೇದನೆಗೆ ಸರ್ಕಾರ ಸ್ಪಂದಿಸಿ, ಇನಾಂ ಭೂಮಿ ಮರು ಮಂಜೂರು ವಂಚಿತರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯು ‘ಕರ್ನಾಟಕ ಕೆಲವು ಇನಾಂ ಅಬಾಲಿಷನ್ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ-2021’ಕ್ಕೆ ಅಸ್ತು ಎಂದಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಕ್ಕೂ ಅವಕಾಶ ಮಾಡಿಕೊಂಡಿದೆ. ಉಭಯ ಸದನಗಳು ರ್ಚಚಿಸಿ ಒಪ್ಪಿಗೆ ನೀಡಿದ ಬಳಿಕ ರಾಜ್ಯಪಾಲರಿಗೆ ಸರ್ಕಾರ ಶಿಫಾರಸು ಮಾಡಲಿದೆ. ಅಧಿಕೃತ ಅಧಿಸೂಚನೆ ಪ್ರಕಟವಾದ ದಿನದಿಂದ ಒಂದು ವರ್ಷದವರೆಗೆ ಇನಾಂ ಭೂಮಿ ಸಾಗುವಳಿ ಮಾಡುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಅಂಶವನ್ನು ಈ ವಿಧೇಯಕ ದಲ್ಲಿ ಸೇರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಾವಿರಾರು ಜನರಿಗೆ ಅನುಕೂಲ: ಇನಾಂ ಭೂಮಿ ಸಾಗುವಳಿ ದಾರರಿಗೆ ಮಂಜೂರು ಮಾಡಲೆಂದು ಈ ಹಿಂದೆ ಅರ್ಜಿ ಕರೆಯಲಾಗಿತ್ತು. ಆದರೆ ಕುಗ್ರಾಮಗಳಲ್ಲಿ ವಾಸಿಸುವ ರೈತರು ಮತ್ತು ಮುಗ್ಧ ಉಳುಮೆದಾರರಿಗೆ ಮಾಹಿತಿ ಸಿಗದೆ ಅರ್ಜಿ ಸಲ್ಲಿಕೆಯಿಂದ ವಂಚಿತರಾಗಿದ್ದಾರೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 30,000 ಎಕರೆ ಇನಾಂ ಭೂಮಿಯಿದೆ. ಕಾಯ್ದೆಗೆ ತಿದ್ದುಪಡಿಯಿಂದ ಒಟ್ಟು ಒಂದು ಲಕ್ಷ ಎಕರೆಯಲ್ಲಿ ಉಳುಮೆದಾರರಿಗೆ ಅನುಕೂಲವಾಗುವ ಅಂದಾಜಿದೆ. ಇನಾಂ ಭೂಮಿ ತಮ್ಮ ಸ್ವಾಧೀನದಲ್ಲಿಟ್ಟುಕೊಂಡು ಉಳುಮೆ ಮಾಡುತ್ತಿದ್ದಾರೆ. ಸರ್ಕಾರ ಕೊಟ್ಟಿದ್ದ ಅವಕಾಶ ಬಳಸಿಕೊಳ್ಳಲಾಗದೆ ಜಮೀನಿನ ಒಡೆತನ ತಮ್ಮ ಹೆಸರಿಗೆ ಮಾಡಿಕೊಂಡಿಲ್ಲ. ಹೀಗಾಗಿ ಕೃಷಿಗೆ ಬ್ಯಾಂಕ್​ನಿಂದ ಸಾಲ-ಸವಲತ್ತು ಪಡೆಯಲಾಗುತ್ತಿಲ್ಲ. ಅನ್ಯ ಕೆಲಸಗಳಿಂದಲೂ ವಂಚಿತರಾಗಿದ್ದಾರೆ. ಇಷ್ಟೇ ಅಲ್ಲದೆ, ನಕಲಿ ದಾಖಲೆ ಸೃಷ್ಟಿಸಿ ಇಂತಹ ಭೂಮಿಯನ್ನು ಒಳಗಿಂದೊಳಗೆ ತಮ್ಮ ಹೆಸರಿಗೆ ಮಾಡಿಕೊಳ್ಳುವ ವಂಚಕರ ಹಾವಳಿ ಹೆಚ್ಚಿದೆ. ಇನಾಂ ಭೂಮಿ ಮರು ಮಂಜೂರಿಗೆ ಮತ್ತೊಂದು ಅವಕಾಶ ನೀಡಿದರೆ ಹಲವಾರು ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಲು ಸಾಧ್ಯವಿದೆ ಎಂಬ ಕಾರಣಕ್ಕೆ ತಿದ್ದುಪಡಿ ವಿಧೇಯಕ ರೂಪಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸರ್ಕಾರಿ ಭೂಮಾಪಕರಿಗೂ ಅನುಮತಿ: ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ ಹಾಗೂ ಭೂ ಸಮೀಕ್ಷೆ ನಕ್ಷೆ ಅಥವಾ ಭೂ ಮಾಪನ ನಕ್ಷೆ (ನಿಗದಿತ ಅರ್ಜಿ ನಮೂನೆ-11ಇ)ಯನ್ನು ಇನ್ನುಮುಂದೆ ಸರ್ಕಾರಿ ಭೂಮಾಪಕರು ನೀಡಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಪರವಾನಗಿ ಪಡೆದ ಭೂಮಾಪಕರು ಮಾತ್ರ 11ಇ ಸ್ಕೆಚ್ ನೀಡಬಹುದಾಗಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮೂಲಕ ಅನುಮತಿ ನೀಡಿದ್ದು, ಸಂಬಂಧಿಸಿದ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಎರಡೂ ವಿಧೇಯಕಗಳನ್ನು ಮಂಡಿಸಿ ಉಭಯ ಸದನಗಳ ಅನುಮೋದನೆ ಪಡೆದು, ಕಾಯ್ದೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇತರ ಮುಖ್ಯಾಂಶಗಳು

  • ವಿದ್ಯಾವಿಕಾಸ ಯೋಜನೆಯಡಿ 2022-23ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಇತರ ಕಲಿ ಸಾಮಗ್ರಿಗಳನ್ನು ವಿತರಿಸಲು 152.87 ಕೋಟಿ ರೂ.ಗಳ ವೆಚ್ಚ ಭರ್ತಿ
  • ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-2021ಕ್ಕೆ ಅನುಮೋದನೆ
  • ಅನುಮೋದಿತ ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ-2021ಕ್ಕೆ ತಿದ್ದುಪಡಿ ಮತ್ತು ನಿಬಂಧನೆ ಸೇರ್ಪಡೆಗೆ ಅಸ್ತು
  • ಕರ್ನಾಟಕ ಮಹಾನಗರ ಪಾಲಿಕೆಗಳು ಮತ್ತು ಇತರ ಕಾನೂನು (ಮೂರನೇ ತಿದ್ದುಪಡಿ) ವಿಧೇಯಕ-2021ಕ್ಕೆ ಸಮ್ಮತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net